ಜೈಲಿನಲ್ಲೇ ಜಾಧವ್, ಬಾಯಿ ಬಿಡದ ಮಾಜಿ ಅಧ್ಯಕ್ಷ ಶಿವಕುಮಾರ್..!

KannadaprabhaNewsNetwork |  
Published : Oct 02, 2026, 01:30 AM IST
ಡಾ.ಮಂಜೇಶ್‌ | Kannada Prabha

ಸಾರಾಂಶ

ಮನ್‌ಮುಲ್‌ನಲ್ಲಿ ನಡೆದಿರುವ ಹಾಲಿನ ಪುಡಿ ನಾಪತ್ತೆ ಹಾಗೂ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಕ್ಕೂಟದ ಎಫ್‌ಜಿಎಸ್ ಶಾಖೆಯ ಮುಖ್ಯಸ್ಥ ಪ್ರದೀಪ್‌ಕುಮಾರ್ ಜಾಧವ್ ಜೈಲಿನಲ್ಲೇ ಉಳಿದಿದ್ದರೆ, ಮತ್ತೊಂದೆಡೆ ಹಗರಣದ ಬಗ್ಗೆ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಬಾಯಿ ಬಿಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮನ್‌ಮುಲ್‌ನಲ್ಲಿ ನಡೆದಿರುವ ಹಾಲಿನ ಪುಡಿ ನಾಪತ್ತೆ ಹಾಗೂ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಕ್ಕೂಟದ ಎಫ್‌ಜಿಎಸ್ ಶಾಖೆಯ ಮುಖ್ಯಸ್ಥ ಪ್ರದೀಪ್‌ಕುಮಾರ್ ಜಾಧವ್ ಜೈಲಿನಲ್ಲೇ ಉಳಿದಿದ್ದರೆ, ಮತ್ತೊಂದೆಡೆ ಹಗರಣದ ಬಗ್ಗೆ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಬಾಯಿ ಬಿಡುತ್ತಿಲ್ಲ. ಹೀಗಾಗಿ ವಿಚಾರಣೆ ನೆಪದಲ್ಲಿ ಪೊಲೀಸರು ಕಾಲ ದೂಡುತ್ತಿದ್ದಾರೆ. ಪೊಲೀಸರ ಈ ನಡೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ.

ವಿಚಾರಣೆಗೆ ಜಾಧವ್ ಅವಶ್ಯಕತೆ ಇರುವ ಕುರಿತು ನ್ಯಾಯಾಲಯಕ್ಕೆ ಪೊಲೀಸರು ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗುತ್ತಿದ್ದಾರೋ, ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿರುವರೋ, ಇದು ಮಾಜಿ ಅಧ್ಯಕ್ಷರನ್ನು ಬಂಧನದಿಂದ ರಕ್ಷಣೆ ಮಾಡುವ ತಂತ್ರದ ಭಾಗವೇ?. ರಾಜಕೀಯ ಪ್ರಭಾವಕ್ಕೊಳಗಾಗಿ ಕಳೆದ ಮೂರು ದಿನಗಳಿಂದ ವಿಚಾರಣೆ ನೆಪದಲ್ಲಿ ಬಂಧನವನ್ನು ಮುಂದೂಡುತ್ತಿದ್ದಾರೆಯೇ ಎಂಬ ಮಾತುಗಳು ಎಲ್ಲೆಡೆ ಕೇಳಿಬರಲಾರಂಭಿಸಿವೆ.

ಪೊಲೀಸರಿಗೆ ಇಡೀ ಪ್ರಕರಣದ ಪೂರ್ಣ ಮಾಹಿತಿ ಇದೆ. ಅಲ್ಲದೇ, ನಿನ್ನೆ ಸಾಮಾಜಿಕ ಜಾಲ ತಾಣದಲ್ಲಿ ಪ್ರದೀಪ್‌ಕುಮಾರ್ ಜಾಧವ್ ಮತ್ತು ನಿರ್ದೇಶಕ ಡಾಲು ರವಿ ನಡುವಿನ ದೂರವಾಣಿ ಸಂಭಾಷಣೆಯ ಆಡಿಯೋದಲ್ಲೂ ಜಾಧವ್ ಹಲವು ಮಾಹಿತಿಗಳನ್ನು ಹೊರಹಾಕಿದ್ದಾರೆ. ಎಲ್ಲವನ್ನು ಸಾಕ್ಷಿ ಸಹಿತ ನೀಡುವುದಾಗಿ ಜಾಧವ್ ಹೇಳಿದ್ದಾರೆ. ಆದರೂ ರಾಜಕೀಯ ಪ್ರಭಾವ, ಒತ್ತಡಕ್ಕೆ ಮಣಿದು ಪೊಲೀಸರು ಯು.ಸಿ.ಶಿವಕುಮಾರ್ ಬಂಧನವನ್ನು ಮುಂದೂಡುತ್ತಲೇ ಇದ್ದಾರೆ ಎಂದು ಹೇಳಲಾಗುತ್ತಿದೆ.

ಯು.ಸಿ.ಶಿವಕುಮಾರ್ ಹಗರಣದ ಬಗ್ಗೆ ಏನನ್ನೂ ಹೇಳುತ್ತಿಲ್ಲ. ತನಿಖೆಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲವೆಂದು ತಿಳಿದುಬಂದಿದ್ದು, ಪ್ರದೀಪ್‌ಕುಮಾರ್ ಜಾಧವ್ ಹಾಗೂ ಯು.ಸಿ.ಶಿವಕುಮಾರ್ ಅವರನ್ನು ಎದುರಾಗಿ ಕೂರಿಸಿ ಹೇಳಿಕೆ ಪಡೆದುಕೊಂಡು ನಂತರದಲ್ಲಿ ಶಿವಕುಮಾರ್ ಅವರನ್ನು ಬಂಧಿಸುವುದು ಪೊಲೀಸರ ಯೋಜನೆ. ಆದರೆ, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಎಡವುತ್ತಿದ್ದಾರೆ ಎನ್ನುವುದು ಪ್ರಬಲವಾಗಿ ಕೇಳಿಬರುತ್ತಿರುವ ಆರೋಪ.

ಹಾಲಿನಪುಡಿ ಕಲಬೆರಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯ ವಿಚಾರಣೆ ಅಗತ್ಯವಿರುವಾಗ ಜಾಧವ್ ಅವರನ್ನು ಪೊಲೀಸ್ ವಶಕ್ಕೆ ಪಡೆಯುವುದು ಅಗತ್ಯವಾಗಿದೆ. ಆದರೆ, ಜಾಧವ್ ಅವರನ್ನು ವಶಕ್ಕೆ ನೀಡದಂತೆ ಪೊಲೀಸರೇ ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆಯೇ, ಇದಕ್ಕೆ ರಾಜಕೀಯ ಪ್ರಭಾವಿಗಳ ಕೈವಾಡವಿರುವಂತೆ ಕಂಡುಬರುತ್ತಿದೆ.

ಕಳೆದ ಮೂರು ದಿನಗಳಿಂದ ಯು.ಸಿ.ಶಿವಕುಮಾರ್ ಅವರನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆತರುವುದು, ಸಂಜೆ ವಾಪಸ್ ಕಳುಹಿಸುವುದು ನಿರಂತರವಾಗಿ ನಡೆಯುತ್ತಿದೆ. ಮೂರು ದಿನಗಳಿಂದ ನಡೆಸುತ್ತಿರುವ ವಿಚಾರಣೆಯಾದರೂ ಏನು? ಬಂಧನವನ್ನು ತೋರಿಸುವುದಕ್ಕೆ ಪೊಲೀಸರು ಹಿಂಜರಿಯುತ್ತಿರುವುದೇಕೆ?. ಈ ಹಗರಣದ ಹಿಂದೆ ಇನ್ನೂ ಪ್ರಭಾವಿಗಳು ಇದ್ದಾರೆಯೇ? ಎಂಬ ಅನುಮಾನಗಳು ದಟ್ಟವಾಗಿ ಜನಮಾನಸದಲ್ಲಿ ಮೂಡಿವೆ.

ಪ್ರಕರಣದ ಪ್ರಾಥಮಿಕ ವರದಿಯಿಂದ ಹಿಡಿದು ಪ್ರಮುಖ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವವರೆಗೆ ಇಲಾಖೆ ಅನುಸರಿಸಿದ ನಡೆ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಜಾಧವ್ ಮತ್ತು ಡಾಲು ರವಿ ಸಂಭಾಷಣೆಯ ಆಡಿಯೋ ಬಾಂಬ್ ಮನ್‌ಮುಲ್ ಆಡಳಿತ ಮಂಡಳಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಹಲವು ಪ್ರಭಾವಿಗಳ ಹೆಸರು ಈ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿರುವುದರಿಂದ ಜಾಧವ್‌ರನ್ನು ಪೊಲೀಸ್ ವಶಕ್ಕೆ ಪಡೆದರೆ ಮುಂಬರುವ ದಿನಗಳಲಿ ಇನ್ನಷ್ಟು ದೊಡ್ಡ ನಾಯಕರ ಕುತ್ತಿಗೆಗೆ ಪ್ರಕರಣ ಸುತ್ತಿಕೊಳ್ಳುವ ಸಾಧ್ಯತೆಗಳನ್ನು ಅರಿತು ಪೊಲೀಸರು ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆ ಎನ್ನುವುದು ಪ್ರಮುಖವಾಗಿ ಕೇಳಿಬರುತ್ತಿರುವ ಆರೋಪವಾಗಿದೆ.

ಮಾಜಿ ಎಂಡಿ ಡಾ.ಮಂಜೇಶ್ ವಿಚಾರಣೆ

ಹಾಲಿನಪುಡಿ ನಾಪತ್ತೆ, ಕಲಬೆರಕೆ ಹಗರಣ ಸಂಬಂಧ ಮನ್‌ಮುಲ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಅವರನ್ನು ಮದ್ದೂರು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಬುಧವಾರ ಡಾ.ಮಂಜೇಶ್ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ ಪೊಲೀಸರು ಹಾಲಿನ ಪುಡಿ ನಾಪತ್ತೆ, ಕಲಬೆರಕೆ ಪ್ರಕರಣದಲ್ಲಿ ಅವರ ಪಾತ್ರವಿರುವ ಬಗ್ಗೆ ಲಭ್ಯವಿರುವ ಅಂಶಗಳನ್ನು ಮುಂದಿಟ್ಟುಕೊಂಡು ಪೊಲೀಸರು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. ತನಿಖೆಯ ಸೂಕ್ಷ್ಮತೆಯನ್ನು ಪರಿಗಣಿಸಿ ವಿವರ ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಜಾಧವ್-ಡಾಲು ರವಿ ನಡುವಿನ ಸಂಭಾಷಣೆ ಆಡಿಯೋದಲ್ಲೂ ಡಾ.ಮಂಜೇಶ್ ಹೆಸರು ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಮಿಮ್ಸ್ ಸಾರ್ವಜನಿಕ ಸಂಪರ್ಕಾಧಿಕಾರಿಗೆ ಅಂತಿಮ ನೋಟಿಸ್
ಮಾಫಿ ಸಾಕ್ಷಿ ಪ್ರದೂಷ್‌ ಹೇಳಿಕೆ ದಾಖಲು ಅ. 5ರಂದು ಮುಂದುವರಿಕೆ