ಯುವಕನನ್ನು ಕೊಲೆಗೈದು ಕಾವೇರಿ ನದಿಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಶ್ರೀರಂಗಪಟ್ಟಣ ಟೌನ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮಳವಳ್ಳಿ ತಾಲೂಕಿನ ಭೀಮನಹಳ್ಳಿಯ ಗೂಡ್ಸ್ ಆಟೋ ಚಾಲಕ ಅನುಕುಮಾರ್ ಬಂಧಿತ ಆರೋಪಿ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಯುವಕನನ್ನು ಕೊಲೆಗೈದು ಕಾವೇರಿ ನದಿಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಟೌನ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಳವಳ್ಳಿ ತಾಲೂಕಿನ ಭೀಮನಹಳ್ಳಿಯ ಗೂಡ್ಸ್ ಆಟೋ ಚಾಲಕ ಅನುಕುಮಾರ್ ಬಂಧಿತ ಆರೋಪಿ.
ಕಳೆದ ಸೆ.15ರಂದು ಗಂಜಾಂ ನಿಮಿಷಾಂಬ ರಸ್ತೆಯ ಆನಂದ ರೈಸ್ ಮಿಲ್ ಹಿಂಭಾಗದ ಕಾವೇರಿ ನದಿ ಸ್ನಾನ ಘಟ್ಟದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಬಿ.ನ್.ದೀಪಕ್ ಶವ ಪತ್ತೆಯಾಗಿತ್ತು. ಪೊಲೀಸರು ತನಿಖೆ ವೇಳೆ ಕೊಲೆಯಾದ ವ್ಯಕ್ತಿ ಹಾಸನ ಜಿಲ್ಲೆ ಆಲೂರು ತಾಲೂಕಿನ ಹಳೆ ಸಂತೆ ಬೀದಿ ನಿವಾಸಿ ಗೂಡ್ಸ್ ಆಟೋ ಚಾಲಕ ಬಿ.ಎನ್.ದೀಪಕ್ (32) ಎಂಬುದು ಪತ್ತೆಯಾಗಿತ್ತು. ಪ್ರಕರಣದ ಜಾಡು ಹಿಡಿದು ತನಿಖೆ ಕೈಗೊಂಡಿದ್ದ ಪೊಲೀಸರು ಕೃತ್ಯ ಎಸೆಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಅನುಕುಮಾರ್ ಮತ್ತು ಮೃತ ದೀಪಕ್ ಸ್ನೇಹಿತರಾಗಿದ್ದು, ಸುಮಾರು ಎರಡೂವರೆ ತಿಂಗಳ ಹಿಂದೆ ಅನುಕುಮಾರ್ ಹಾಸನಕ್ಕೆ ಹೋಗಿದ್ದ ವೇಳೆ ದೀಪಕ್ ನೊಂದಿಗೆ ಮದ್ಯಪಾನ ಮಾಡಿದ್ದನು. ಈ ವೇಳೆ ಅನುಕುಮಾರ್‌ನ ಮೊಬೈಲ್‌ನಿಂದ ಆತನ ಹೆಂಡತಿಗೆ ಕರೆ ಹೋಗಿದ್ದು, ದೀಪಕ್ ಅನುಕುಮಾರ್‌ರಂತೆ ನಟಿಸಿ ಆಕೆಯೊಂದಿಗೆ ಕೆಟ್ಟದಾಗಿ ಮಾತನಾಡಿದ್ದನು.
ಮರುದಿನ ಈ ವಿಷಯನ್ನು ಪತ್ನಿ ಅನುಕುಮಾರ್‌ಗೆ ತಿಳಿಸಿದ್ದು, ಆತ ದೀಪಕ್‌ನನ್ನು ಪ್ರಶ್ನಿಸಿದ್ದಾನೆ. ತಾನೇ ಕುಡಿದ ಮತ್ತಿನಲ್ಲಿ ಮಾತನಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದರಿಂದ ಅನುಕುಮಾರ್ ಆಕ್ರೋಶಗೊಂಡಿದ್ದನು. ಇದರಂತೆಯೇ ಕೊಲೆಯಾದ ದೀಪಕ್ ರಾಮನಾಥಮೋಳೆ ಗ್ರಾಮದ ಮತ್ತೊಬ್ಬ ಸ್ನೇಹಿತ ಶಿವ ಅಲಿಯಾಸ್ ಬ್ಲೇಡ್ ಶಿವ ಎಂಬಾತನಿಗೂ ಇದೇ ರೀತಿ ನಿಂಧಿಸಿದ್ದಾನೆ.
ಆತನ ಕೂಡ ಈತನೊಂದಿಗೆ ದ್ವೇಷ ಕಟ್ಟಿಕೊಂಡಿದ್ದನು. ಅನುಕುಮಾರ್ ಹಾಗೂ ಶಿವ ಇಬ್ಬರು ಜೊತೆಯಾಗಿ ದೀಪಕನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.
ಕಳೆದ ಸೆ.12 ರಂದು ಬೆಂಗಳೂರಿನಿಂದ ಮಂಡ್ಯದ ಭೀಮನಹಳ್ಳಿಗೆ ಸೋಫಾ ಸೆಟ್ ತರಲೆಂದು ದೀಪಕ್‌ನನ್ನು ಆತನ ಗೂಡ್ಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು. ಸೆ.14ರ ಸಂಜೆ ಹಿಂದಿರುಗುವ ವೇಳೆ ತಾಲೂಕಿನ ಗಾಮನಹಳ್ಳಿ ಅರಣ್ಯ ವಲಯದ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ಅನುಕುಮಾರ್ ಮತ್ತು ದೀಪಕ್ ಇಬ್ಬರೂ ಮದ್ಯಪಾನ ಮಾಡಿದ್ದಾರೆ. ದೀಪಕ್ ಮದ್ಯದ ಅಮಲಿನಲ್ಲಿ ನಿತ್ರಾಂಣಗೊಂಡಾಗ ಸ್ಥಳಕ್ಕೆ ಮತ್ತೋರ್ವ ಆರೋಪಿ ಶಿವುಗೆ ಕರೆಮಾಡಿ ಕರೆಸಿಕೊಂಡು ಅನುಕುಮಾರ್ ಬಳಿಕ ಲಾಂಗ್‌ನಿಂದ ದೀಪಕ್‌ನನ್ನು ಕೊಚ್ಚಿ ಕೊಲೆ ಮಾಡಿ ಮೃತದೇಹವನ್ನು ಕಾವೇರಿ ನದಿಗೆ ಎಸೆದು ಪರಾರಿಯಾಗಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಆರೋಪಿಗಳ ಜೊತೆಗೆ ಕೊಲೆಗೆ ಬಳಸಿದ್ದ ಮಾರಕಾಸ್ತ್ರ ಹಾಗೂ ಗೂಡ್ಸ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಧ್ಯ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಶಿವ ಅಲಿಯಾಸ್ ಬ್ಲೇಡ್ ಪತ್ತೆಗೆ ಜಾಲ ಬೀಸಲಾಗಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಎಸ್ಪಿ ಶೋಭ ರಾಣಿ ಶ್ಲಾಘಿಸಿದ್ದಾರೆ.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.