ನಟನಿಗೆ ಲೈಂಗಿಕ ಶೋಷಣೆ : ನಿರ್ದೇಶಕರೊಬ್ಬರ ವಿರುದ್ಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯಲ್ಲಿ ಎಫ್‌ಐಆರ್‌

KannadaprabhaNewsNetwork | Updated : Oct 29 2024, 05:30 AM IST

ಸಾರಾಂಶ

ಮಲಯಾಳಂ ಚಿತ್ರರಂಗದ ನಟನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಮಲಯಾಳಂ ಚಿತ್ರರಂಗ ನಿರ್ದೇಶಕರೊಬ್ಬರ ವಿರುದ್ಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್‌) ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು : ಬರೋಬ್ಬರಿ ಹನ್ನೆರಡು ವರ್ಷಗಳ ಹಿಂದೆ ಮಲಯಾಳಂ ಚಿತ್ರರಂಗದ ನಟನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಮಲಯಾಳಂ ಚಿತ್ರರಂಗ ನಿರ್ದೇಶಕರೊಬ್ಬರ ವಿರುದ್ಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್‌) ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕೇರಳ ಮೂಲದ 31 ವರ್ಷದ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಕೇರಳ ಕಾಝೀಕೋಡ್‌ ಮೂಲದ ನಿರ್ದೇಶಕ ರಂಜಿತ್‌ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಅನೈಸರ್ಗಿಕ ದೈಹಿಕ ಸಂಭೋಗ ಆರೋಪದಡಿ ಎಫ್‌ಐಆರ್‌ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ದೂರು?: ಸಂತ್ರಸ್ತ 2012ರಲ್ಲಿ ಮಲಯಾಳಂ ಚಿತ್ರರಂಗದ ಖ್ಯಾತನಟ ಮಮ್ಮೂಟಿ ಅವರ ಶೂಟಿಂಗ್‌ ನೋಡಲು ಕೇರಳದ ಈಸ್ಟ್‌ ಹಿಲ್‌ ಸ್ಥಳಕ್ಕೆ ತೆರಳಿದ್ದಾಗ, ನಿರ್ದೇಶಕ ರಂಜಿತ್‌ ಅವರ ಪರಿಚಯವಾಗಿದೆ. ಈ ವೇಳೆ ರಂಜಿತ್‌, ಸಂತ್ರಸ್ತನ ಮೊಬೈಲ್‌ ಸಂಖ್ಯೆ ಪಡೆದುಕೊಂಡಿದ್ದಾರೆ. 2012ರ ಡಿಸೆಂಬರ್‌ನಲ್ಲಿ ಸಂತ್ರನಿಗೆ ಕರೆ ಮಾಡಿರುವ ರಂಜಿತ್‌, ತಾನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಐಷಾರಾಮಿ ಹೋಟೆಲ್‌ವೊಂದರಲ್ಲಿ ಇರುವುದಾಗಿ ಹೇಳಿ, ರೂಮ್‌ಗೆ ಬರುವಂತೆ ಆಹ್ವಾನಿಸಿದ್ದಾರೆ. ಅದರಂತೆ ಸಂತ್ರಸ್ತ ರೂಮ್‌ಗೆ ಬಂದಾಗ, ಕುಡಿಯಲು ಮದ್ಯ ನೀಡಿರುವ ರಂಜಿತ್‌, ಬಳಿಕ ಬಟ್ಟೆ ಬಿಚ್ಚುವಂತೆ ಸಂತ್ರಸ್ತನಿಗೆ ಹೇಳಿದ್ದಾರೆ.

ನಟಿಗೆ ಬಾಲಕನ ಬೆತ್ತಲೆ ಫೋಟೋ ರವಾನೆ: ಬಳಿಕ ಸಂತ್ರಸ್ತನನ್ನು ವಿವಸ್ತ್ರಗೊಳಿಸಿ ದೇಹದ ಅಂಗಾಂಗ ವರ್ಣಿಸಿರುವ ರಂಜಿತ್‌, ಸಂತ್ರಸ್ತನ ಖಾಸಗಿ ಭಾಗಗಳಿಗೆ ಮುತ್ತಿಟ್ಟಿದ್ದಾರೆ. ನಂತರ ಮತ್ತಷ್ಟು ಮದ್ಯ ಕುಡಿಸಿ ಬಲವಂತವಾಗಿ ಸಂಭೋಗಕ್ಕೆ ಒತ್ತಾಯಿಸಿದ್ದಾರೆ. ಸಂತ್ರಸ್ತನ ನಗ್ನ ಫೋಟೋಗಳನ್ನು ಕ್ಲಿಕ್ಕಿಸಿ ಮಲಯಾಳಂ ನಟಿಯೊಬ್ಬರಿಗೆ ಕಳುಹಿಸಿದ್ದಾರೆ. ಆ ದಿನ ಇಡೀ ರಾತ್ರಿ ಸಂತ್ರಸ್ತನನ್ನು ದೈಹಿಕವಾಗಿ ಬಳಸಿಕೊಂಡು ಶೋಷಣೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕೇರಳದಿಂದ ಪ್ರಕರಣ ವರ್ಗಾವಣೆ: ಈ ಸಂಬಂಧ ಸಂತ್ರಸ್ತ ಕೇರಳ ಕಸಬಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಕೇರಳ ಪೊಲೀಸರು ಈ ಪ್ರಕರಣವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದಾರೆ. ಅದರಂತೆ ಆರೋಪಿ ನಿರ್ದೇಶಕ ರಂಜಿತ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ.

Share this article