;Resize=(412,232))
ಬೆಂಗಳೂರು : ಮೂರು ಪ್ರತ್ಯೇಕ ಪ್ರಕರಣದಲ್ಲಿ ಪೊಲೀಸರು ಮಹಿಳೆ, ಎರಡು ವರ್ಷದ ಮಗುವಿನ ರಕ್ಷಣೆ ಹಾಗೂ ಗಾಯಗೊಂಡಿದ್ದ ವ್ಯಕ್ತಿಗೆ ತ್ವರಿತ ಚಿಕಿತ್ಸೆಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜ.12 ರ ಮಧ್ಯಾಹ್ನ 12. 30 ರ ಸುಮಾರಿಗೆ ಠಾಣಾ ವ್ಯಾಪ್ತಿಯ ಕನಕನಗರದ ಅಪಾರ್ಟ್‌ಮೆಂಟ್‌ವೊಂದರ ಬಳಿ ಸುಮಾರು 40-45 ವರ್ಷ ವಯಸ್ಸಿನ ಮಹಿಳೆಯೊಬ್ಬರು ಮಾನಸಿಕ ಸಮತೋಲನ ಕಳೆದುಕೊಂಡು ರಸ್ತೆಯಲ್ಲಿ ಬಿದ್ದಿರುವ ಬಗ್ಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದರು. 112 ಸಿಬ್ಬಂದಿ, ರಾಮಮೂರ್ತಿನಗರ ಪೊಲೀಸ್ ಠಾಣೆಯ ಎಎಸ್‌ಐ ಬುಡ್ಡೆಗೌಡ ಮತ್ತು ಪಿ.ಸಿ ಸಿದ್ದಲಿಂಗೇಶ್ ಅವರು ಹೊಯ್ಸಳ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ವಿಚಾರಿಸಿದಾಗ, ತಾನು ಯಾದಗಿರಿ ಜಿಲ್ಲೆಯವಳು, ತನಗೆ ಕುಟುಂಬದ ಸಹಾಯ ಇಲ್ಲವೆಂದು ತಿಳಿಸಿದ್ದರು. ಆ ಮಹಿಳೆಯನ್ನು ಸಮಾಧಾನ ಪಡಿಸಿದ ನಂತರ ಪೊಲೀಸರು ಆಕೆಯನ್ನು ಆರೈಕೆ ಮತ್ತು ಆಶ್ರಯಕ್ಕಾಗಿ ವೃದ್ಧಾಶ್ರಮಕ್ಕೆ ದಾಖಲಿಸಿದ್ದಾರೆ.
ರಸ್ತೆಯಲ್ಲಿ ಒಂಟಿಯಾಗಿ ಓಡಾಡುತ್ತಿದ್ದ ಎರಡು ವರ್ಷದ ಮಗುವನ್ನು ರಕ್ಷಿಸಿದ ಗಿರಿನಗರ ಠಾಣೆ ಪೊಲೀಸರು ಸುರಕ್ಷಿತವಾಗಿ ಪಾಲಕರಿಗೆ ಹಸ್ತಾಂತರಿಸಿದ್ದಾರೆ.
ಜ.14 ರ ಬೆಳಿಗ್ಗೆ 10.45 ಸುಮಾರಿಗೆ ಹೊಸಕೆರೆಹಳ್ಳಿ ಫ್ಲೈಓವರ್ ಸಮೀಪದ ರಸ್ತೆಯಲ್ಲಿ ಎರಡು ವರ್ಷದ ಮಗುವೊಂದು ಪಾಲಕರಿಲ್ಲದೇ ರಸ್ತೆ ಮೇಲೆ ಒಂಟಿಯಾಗಿ ಓಡಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರೊಬ್ಬರು 112 ಗೆ ಕರೆ ಮಾಡಿ ತಿಳಿಸಿದ್ದರು. ನಂತರ 112 ಸಿಬ್ಬಂದಿ, ಗಿರಿನಗರ ಪೊಲೀಸ್ ಠಾಣೆಯ ಹೊಯ್ಸಳದಲ್ಲಿ ಕರ್ತವ್ಯದಲ್ಲಿದ್ದ ಎಚ್.ಸಿ ಮಾರುತಿ ಹಾಗೂ ತಂಡ ಸ್ಥಳಕ್ಕೆ ಹೋಗಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿನ ಬಗ್ಗೆ ವಿಚಾರಣೆ ನಡೆಸಿ ನಂತರ ಸಿಎಫ್‌ಎಸ್ ತಂಡ ಹಾಗೂ ಪೊಲೀಸರು ಜಂಟಿಯಾಗಿ ಮಗುವಿನ ಪಾಲಕರನ್ನು ಪತ್ತೆ ಮಾಡಿ ಸುರಕ್ಷಿತವಾಗಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
ಜ.15 ರ ಬೆಳಗಿನ ಜಾವ 1.15 ಸುಮಾರಿಗೆ ಸುಂಕದಕಟ್ಟೆಯ ಚಂದನ ಲೇಔಟ್ ಬಳಿಯ ಮಾಗಡಿ ರಸ್ತೆಯಲ್ಲಿ ಬೈಕ್ ಅಪಘಾತಕ್ಕೀಡಾಗಿ ಬೈಕ್ ಸವಾರ ಹಾಗೂ ಹಿಂಬದಿಯ ಸವಾರ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಸಾರ್ವಜನಿಕರೊಬ್ಬರು ನೀಡಿದ ಮಾಹಿತಿ ಆಧರಿಸಿ ಕಾಮಾಕ್ಷಿಪಾಳ್ಯ ಠಾಣೆಯ ಎಎಸ್‌ಐ ರಾಮಕೃಷ್ಣ ಮತ್ತು ಪಿ.ಸಿ ಕಾರ್ತಿಕ್ ಬದರಿ ಅವರು ಸ್ಥಳಕ್ಕೆ ಬಂದ ಪೊಲೀಸರು ರಸ್ತೆ ಅಪಘಾತದಲ್ಲಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸವಾರ ಹಾಗೂ ಹಿಂಬದಿಯ ಸವಾರನನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಿದ್ದಾರೆ.