ಶಾಸಕ ಮುನಿರತ್ನ ವಿರುದ್ಧ ಕಿಡ್ನಾಪ್‌ ಆರೋಪ; ಎಫ್‌ಐಆರ್‌ ದಾಖಲು

KannadaprabhaNewsNetwork | Updated : Apr 04 2024, 05:28 AM IST

ಸಾರಾಂಶ

ತನ್ನನ್ನು ಮಾತುಕತೆಗೆ ಕರೆಯಿಸಿ ಬಳಿಕ ಬೆದರಿಸಿ ಬಿಜೆಪಿಗೆ ಸೇರಿಸಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಆರೋಪ ಮಾಡಿದ್ದಾರೆ. ಈ ಸಂಬಂಧ ಎಫ್‌ಐಆರ್‌ ಸಲ್ಲಿಕೆ ಆಗಿದೆ.

 ಬೆಂಗಳೂರು :  ಬಿಜೆಪಿಗೆ ಕಾಂಗ್ರೆಸ್ ಕಾರ್ಯಕರ್ತನನ್ನು ಬೆದರಿಸಿ ಸೇರ್ಪಡೆಗೊಳಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಎಂ.ಮುನಿರತ್ನ ಹಾಗೂ ಇತರರ ವಿರುದ್ಧ ನಂದಿನಿ ಲೇಔಟ್ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಲಕ್ಷ್ಮೀದೇವಿನಗರದ ಪೇಂಟರ್‌ ಸ್ಯಾಮ್ಯುಯಲ್ ಆರೋಪ ಮಾಡಿದ್ದು, ಸಂತ್ರಸ್ತ ನೀಡಿದ ದೂರಿನ ಮೇರೆಗೆ ಮುನಿರತ್ನ ಹಾಗೂ ಅವರ ಬೆಂಬಲಿಗರಾದ ಸುರೇಶ್‌, ವಸಂತ್‌, ವಾಸೀಂ ಹಾಗೂ ಸೀನ ವಿರುದ್ಧ ಅಪಹರಣ ಆರೋಪದಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಎರಡು ದಿನಗಳಿಂದ ಮಾತನಾಡುವ ನೆಪದಲ್ಲಿ ಶಾಸಕ ಮುನಿರತ್ನ ಅವರ ಕಚೇರಿಗೆ ಬಲವಂತವಾಗಿ ಶಾಸಕರ ಹಿಂಬಾಲಕರು ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಬಿಜೆಪಿ ಸೇರಿಸಿದ್ದರು ಎಂದು ಸಂತ್ರಸ್ತ ಆರೋಪಿಸಿದ್ದಾರೆ. ಆದರೆ ತಮ್ಮ ಮೇಲಿನ ಆರೋಪವನ್ನು ಶಾಸಕ ಮುನಿರತ್ನ ನಿರಾಕರಿಸಿದ್ದಾರೆ.

ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದೇನೆ. ಏ.1ರಂದು ಶಾಸಕ ಮುನಿರತ್ನ ಅವರು ಮಾತನಾಡಲು ಕರೆಯುತ್ತಿದ್ದಾರೆ ಎಂದು ಹೇಳಿ ಡಾ। ರಾಜ್‌ ಕುಮಾರ್ ಸಮಾಧಿ ಬಳಿಗೆ ಸುರೇಶ್‌, ವಸಂತ್‌, ವಾಸೀಂ ಹಾಗೂ ಸೀನ ಕರೆಸಿಕೊಂಡರು. ಬಳಿಕ ಅಲ್ಲಿಂದ ವೈಯಾಲಿಕಾವಲ್‌ನಲ್ಲಿರುವ ಶಾಸಕರ ಕಚೇರಿಗೆ ನನ್ನನ್ನು ಕರೆದುಕೊಂಡು ಹೋದರು. ಅಲ್ಲಿ ನನಗೆ ಶಾಸಕ ಮುನಿರತ್ನ ಜೀವ ಬೆದರಿಕೆ ಹಾಕಿದರು ಎಂದು ಸಾಮ್ಯುಯಲ್ ದೂರಿದ್ದಾರೆ.ಸ್ವಯಂ ಪ್ರೇರಿತನಾಗಿ ಬಿಜೆಪಿ ಸೇರಿದ್ದ: ಮುನಿರತ್ನ ಸ್ಪಷ್ಟನೆ

ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಮಂತ್ರಿ ಆಗಬೇಕು ಹಾಗೂ ಡಾ। ಸಿ.ಎನ್‌.ಮಂಜುನಾಥ್‌ ಅವರು ಸಂಸದರಾಗಬೇಕು ಎಂದು ಹೇಳಿ ಸ್ವಯಂ ಬಿಜೆಪಿ ಸೇರಿದ ವ್ಯಕ್ತಿ ಈಗ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾನೆ ಎಂದು ಮಾಜಿ ಸಚಿವ ಮುನಿರತ್ನ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಪಕ್ಷಕ್ಕೆ ಸೇರುತ್ತೇನೆ ಎಂದಾಗ ಸೇರಿಸಿಕೊಳ್ಳುವುದು ನಮ್ಮ ಧರ್ಮ. ಬಿಜೆಪಿ ಸೇರಿದ ಬಳಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನುಮಂತರಾಯಪ್ಪನನ್ನು ಭೇಟಿಯಾಗಿದ್ದ. ನಂದಿನಿ ಲೇಔಟ್ ಪೊಲೀಸರು ಯಾವುದೇ ತನಿಖೆ ನಡೆಸದೆ ಎಫ್‌ಐಆರ್ ದಾಖಲು ಮಾಡಿದ್ದಾರೆ. ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡದಂತೆ ತಡೆಯಲು ಈ ಕುತಂತ್ರ ಮಾಡಿದ್ದಾರೆ. ಈ ರೀತಿಯ ಬೆದರಿಕೆ ತಂತ್ರಗಾರಿಕೆ ಮೊದಲು ಕನಕಪುರದಲ್ಲಿ ಮಾಡುತ್ತಿದ್ದರು. ಈಗ ಅದನ್ನು ಬೆಂಗಳೂರಿನಲ್ಲಿ ಶುರು ಮಾಡಿದ್ದಾರೆ ಎಂದು ಪರೋಕ್ಷವಾಗಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕಿಡಿಕಾರಿದರು.

Share this article