ಮನೆಯಲ್ಲಿ ಏಕಾಂಗಿಯಾಗಿದ್ದ ಮಹಿಳೆ ಕೊಂದು, ಚಿನ್ನಾಭರಣ ದೋಚಿ ಪರಾರಿ

KannadaprabhaNewsNetwork |  
Published : Apr 21, 2024, 02:26 AM ISTUpdated : Apr 21, 2024, 06:50 AM IST
ಶೋಭಾ | Kannada Prabha

ಸಾರಾಂಶ

ಮನೆಯಲ್ಲಿ ಏಕಾಂಗಿಯಾಗಿ ವಾಸವಿದ್ದ ಡ್ರೈವಿಂಗ್‌ ಸ್ಕೂಲ್‌ ಮಾಲಕಿಯನ್ನು ಉಸಿರುಗಟ್ಟಿಸಿ ಕೊಂದು ಚಿನ್ನಾಭರಣವನ್ನು ದೋಚಿ ಪರಾರಿ ಆಗಿರುವ ಘಟನೆ ನಗರದಲ್ಲಿ ನಡೆದಿದೆ.

  ಬೆಂಗಳೂರು :  ಮನೆಯಲ್ಲಿ ಏಕಾಂಗಿಯಾಗಿದ್ದ ಖಾಸಗಿ ಚಾಲನಾ ತರಬೇತಿ ಶಾಲೆಯ ಮುಖ್ಯಸ್ಥೆಯೊಬ್ಬರನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗಣೇಶನಗರದ ನಿವಾಸಿ ಶೋಭಾ (48) ಮೃತ ದುರ್ದೈವಿ. ಎರಡು ದಿನಗಳ ಹಿಂದೆ ಮನೆಯಲ್ಲಿ ಶೋಭಾ ಏಕಾಂಗಿಯಾಗಿದ್ದಾಗ ಹತ್ಯೆ ನಡೆದಿದ್ದು, ಮರುದಿನ ಮೃತರ ಪುತ್ರಿ ಮನೆಗೆ ಮರಳಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಕೊಡಿಗೇಹಳ್ಳಿ ಸಮೀಪ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದ ಶೋಭಾ ಅವರು, ಕಳೆದ ಡಿಸೆಂಬರ್ ತಿಂಗಳಿಂದ ತಮ್ಮ ಎರಡನೇ ಪುತ್ರಿ ಜತೆ ಗಣೇಶ ನಗರದಲ್ಲಿ ವಾಸವಾಗಿದ್ದರು. ಚಿಕ್ಕಪೇಟೆಯಲ್ಲಿ ಅವರ ಪತಿ ಹಾಗೂ ಹಿರಿಯ ಪುತ್ರಿ ವಾಸವಾಗಿದ್ದರು. ಹದಿನೈದು ದಿನಗಳ ಹಿಂದೆ ಅವರ ಪುತ್ರಿಗೆ ವಿವಾಹವಾಗಿತ್ತು.

ಏ.18ರಂದು ತವರು ಮನೆಯಿಂದ ಜೆ.ಪಿ.ನಗರದಲ್ಲಿದ್ದ ಗಂಡನ ಮನೆಗೆ ಶೋಭಾ ಪುತ್ರಿ ಹರ್ಷಿತಾ ತೆರಳಿದ್ದರು. ಮರುದಿನ ತಮ್ಮ ತಾಯಿಗೆ ಅವರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಹರ್ಷಿತಾ ಅವರು, ಕೂಡಲೇ ತಾಯಿ ಮನೆಗೆ ಬಂದಿದ್ದಾರೆ. ಬಳಿಕ ಮನೆಯ ಬೆಡ್‌ ರೂಮ್‌ನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಶೋಭಾ ಮೃತಪಟ್ಟಿದ್ದರು. ಆದರೆ ಅವರು ಧರಿಸಿದ್ದ ಮಾಂಗಲ್ಯ, ಚಿನ್ನದ ಸರ, ಮೊಬೈಲ್ ಹಾಗೂ ಕಾರು ನಾಪತ್ತೆಯಾಗಿದ್ದವು. ಹೀಗಾಗಿ ತಮ್ಮ ತಾಯಿಯನ್ನು ಯಾರೋ ಕೊಂದು ಚಿನ್ನಾಭರಣ ದೋಚಿದ್ದಾರೆ ಎಂದು ಕೊಡಿಗೇಹಳ್ಳಿ ಠಾಣೆ ಪೊಲೀಸರಿಗೆ ಮೃತರ ಪುತ್ರಿ ದೂರು ನೀಡಿದ್ದಾರೆ.

ಪರಿಚಿತನ ಕೈವಾಡ ಶಂಕೆ?

ಶೋಭಾ ಅವರ ಮನೆಗೆ ಯಾರೂ ಬಲವಂತವಾಗಿ ಒಳ ಪ್ರವೇಶಿಸಿಲ್ಲ. ಹೀಗಾಗಿ ಹತ್ಯೆ ಕೃತ್ಯದಲ್ಲಿ ಪರಿಚಿತರ ಕೈವಾಡ ಶಂಕೆ ಇದೆ. ಮನೆಗೆ ಮಂಗಳವಾರ ರಾತ್ರಿ ಬಂದು ಉಸಿರುಗಟ್ಟಿಸಿ ಶೋಭಾ ಅವರನ್ನು ಹತ್ಯೆಗೈದು ಆರೋಪಿ ಪರಾರಿಯಾಗಿದ್ದಾನೆ. ಹತ್ಯೆಗೆ ವೈಯಕ್ತಿಕ ಕಾರಣಗಳಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

PREV

Recommended Stories

ತಾಯಿಗೆ ಕ್ಷಮೆ ಕೋರಿ ಪತ್ರ ಬರೆದಿಟ್ಟು ನೇ*ಗೆ ಶರಣಾದ ಕನ್ನಡ ಗಾಯಕಿ ಸವಿತಾ ಮಗ
ಐಎಸ್‌ಡಿ ಕರೆಗಳ ಗೋಲ್‌ಮಾಲ್‌ : ಕೋಟ್ಯಂತರ ರು. ವಂಚಿಸಿದ್ದ ಇಬ್ಬರ ಬಂಧನ