ರೌಡಿ ಹತ್ಯೆ ಕೇಸ್‌ನಲ್ಲಿ ಕೆ.ಆರ್‌.ಪುರ ಎಂಎಲ್‌ಎ ಸಿಐಡಿ ಬಲೆಗೆ

Published : Feb 13, 2026, 07:30 AM IST
Byrati Basavaraj

ಸಾರಾಂಶ

ಬೆಂಗಳೂರಿನ ಭಾರತಿ ನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲುಶಿವ ಹತ್ಯೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ, ಬೈರತಿ ಬಸವರಾಜು ಅ‍ವರು ವಿಮಾನದಲ್ಲಿ ರಾಜ್ಯಕ್ಕೆ ಮರಳಿದ ತಕ್ಷಣವೇ ಬಂಧನಕ್ಕೊಳಗಾಗಿದ್ದಾರೆ.

  ಬೆಂಗಳೂರು :  ಬೆಂಗಳೂರಿನ ಭಾರತಿ ನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲುಶಿವ ಹತ್ಯೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ, ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅ‍ವರು ವಿಮಾನದಲ್ಲಿ ರಾಜ್ಯಕ್ಕೆ ಮರಳಿದ ತಕ್ಷಣವೇ ಬಂಧನಕ್ಕೊಳಗಾಗಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನಿಂದ ವಿಮಾನದಲ್ಲಿ ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಸವರಾಜು ಅವರನ್ನು ತಕ್ಷಣವೇ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆನಂತರ ಸಿಐಡಿ ಕೇಂದ್ರ ಕಚೇರಿಗೆ ಕರೆತಂದು ಅವರನ್ನು ಬಂಧನಕ್ಕೊಳಪಡಿಸಿದ ಅಧಿಕಾರಿಗಳು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗುಪಡಿಸಲಿದ್ದಾರೆ. ಹತ್ಯೆ ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಮತ್ತೆ ಬೈರತಿ ಬಸವರಾಜು ಅವರ ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಸಿಐಡಿ ಅರ್ಜಿ ಸಲ್ಲಿಸಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಶಾಸಕರ ಬಂಧನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಐಡಿ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಕಾನೂನು ಹೋರಾಟದಲ್ಲಿ ಸೋಲು:

ರೌಡಿ ಬಿಕ್ಲು ಶಿವನ ಹತ್ಯೆ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ರಕ್ಷಣೆ ಸಿಗದೆ ಹೋದಾಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಶಾಸಕರಿಗೆ ಜಾಮೀನು ಸಿಗದೆ ಭಾರಿ ನಿರಾಸೆ ಉಂಟಾಯಿತು. ಕೊನೆಗೆ ಕಾನೂನು ಹೋರಾಟದಲ್ಲಿ ಅಪಜಯದಿಂದ ವಿಧಿ ಇಲ್ಲದೆ ಪೊಲೀಸರ ಮುಂದೆ ಶರಣಾಗಲು ಅವರು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಐಡಿ ಅಧಿಕಾರಿಗಳು, ಸುಪ್ರೀಂಕೋರ್ಟ್‌ನಲ್ಲಿ ಗುರುವಾರ ಬೆಳಗ್ಗೆ ಅರ್ಜಿ ವಜಾಗೊಂಡ ಬೆನ್ನಲ್ಲೇ ಶಾಸಕರ ಬಂಧನಕ್ಕೆ ಕಾರ್ಯಾಚರಣೆಗಿಳಿದರು. ಸಿಐಡಿ ಕೇಂದ್ರ ಕಚೇರಿ, ನ್ಯಾಯಾಲಯ ಹಾಗೂ ವಿಮಾನ ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.

ಬಂಧನ ಭೀತಿಯಿಂದ ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದ ಶಾಸಕ ಬೈರತಿ ಬಸವರಾಜು ಅವರು ಸಂಜೆ ನಗರಕ್ಕೆ ಮರಳುವ ಬಗ್ಗೆ ಸಿಐಡಿಗೆ ಖಚಿತ ಬಾತ್ಮಿ ಲಭ್ಯವಾಯಿತು. ಅಂತೆಯೇ ಕೆಐಎನಲ್ಲಿ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದ ಸಿಐಡಿ ಅಧಿಕಾರಿಗಳು, ದೇವನಹಳ್ಳಿ ಉಪವಿಭಾಗದ ಪೊಲೀಸರ ನೆರವು ಪಡೆದು ವಿಮಾನದಿಂದಿಳಿದು ಹೊರಬರುತ್ತಿದ್ದಂತೆ ಬಸವರಾಜು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಹತ್ಯೆ ಪ್ರಕರಣ?

ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್‌.ಪುರ ಸಮೀಪದ ಕಿತ್ತಗನೂರು ಗ್ರಾಮದ ಸರ್ವೆ ನಂ.212ರ 12 ಗುಂಟೆ ಭೂಮಿ ಸಂಬಂಧ ರೌಡಿ ಬಿಕ್ಲು ಶಿವ ಹಾಗೂ ಶಾಸಕ ಬೈರತಿ ಬಸವರಾಜು ಅವರ ಆಪ್ತ ಎನ್ನಲಾದ ಹೆಣ್ಣೂರು ಜಗದೀಶ್ ಅಲಿಯಾಸ್ ಜಗ್ಗನ ಮಧ್ಯೆ ವಿವಾದವಾಗಿತ್ತು. ಈ ಭೂಮಿ ವ್ಯಾಜ್ಯ ಹಿನ್ನೆಲೆಯಲ್ಲಿ ಜು.16ರಂದು ಹಲಸೂರು ಕೆರೆ ಹತ್ತಿರದ ತನ್ನ ಮನೆ ಮುಂದಿ ನಿಂತಿದ್ದಾಗ ರೌಡಿ ಬಿಕ್ಲು ಶಿವನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು.

ಈ ಹತ್ಯೆ ಸಂಬಂಧ ಮೃತನ ತಾಯಿ ನೀಡಿದ ದೂರಿನಲ್ಲಿ ಶಾಸಕ ಬೈರತಿ ಬಸವರಾಜು ಹಾಗೂ ಅವರ ಬಂಟ ಜಗ್ಗನ ಹೆಸರು ಉಲ್ಲೇಖವಾಗಿದ್ದವು. ಅಲ್ಲದೆ ತಮ್ಮ ಮಗನ ಹತ್ಯೆಗೆ ಶಾಸಕರು ಕಾರಣರಾಗಿದ್ದಾರೆ ಎಂದು ಮೃತನ ತಾಯಿ ದೂರಿದ್ದರು. ಅದರನ್ವಯ ದಾಖಲಾದ ಎಫ್‌ಐಆರ್‌ನಲ್ಲಿ ಜಗ್ಗ ಎ1 ಆರೋಪಿ ಆಗಿದ್ದರೆ, ಎ5 ಆಗಿ ಶಾಸಕರ ಹೆಸರು ಉಲ್ಲೇಖವಾಯಿತು. ಈ ಹತ್ಯೆಯಲ್ಲಿ ಹೆಣ್ಣೂರು ಜಗ, ಆತನ ಸಹಚರರು ಹಾಗೂ ಶಾಸಕರ ಬೈರತಿ ಸಂಬಂಧಿ ಸೇರಿದಂತೆ 20 ಆರೋಪಿಗಳ ಬಂಧನವಾಯಿತು. ಆದರೆ ಬಂಧನ ಭೀತಿಯಿಂದ ಬಸವರಾಜು ಅವರು ಕಾನೂನು ಹೋರಾಟಕ್ಕಿಳಿದಿದ್ದರು.

ಮೊದಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಆದರೆ ಅಲ್ಲಿ ಅರ್ಜಿ ವಜಾ ಬಳಿಕ ಹೈಕೋರ್ಟ್ ಮೊರೆ ಹೋದರು. ಆಗ ಹೈಕೋರ್ಟ್ ರಜಾ ಕಾಲದ ಪೀಠವು ಬೈರತಿ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಕಾಯಂ ಪೀಠದ ಮುಂದೆ ಸಿಐಡಿ ಮೇಲ್ಮನವಿ ಸಲ್ಲಿಸಿತು. ಆಗ ಶಾಸಕರಿಗೆ ಜಾಮೀನು ರದ್ದುಪಡಿಸಿದ ನ್ಯಾಯಾಲಯವು, ಸಿಐಡಿ ತನಿಖೆಗೆ ಸಮ್ಮತಿಸಿತು. ಈ ತೀರ್ಪು ಬಳಿಕ ಹೊರ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ಬೈರತಿ ಬಸವರಾಜು ಅವರು, ಬಂಧನದಿಂದ ಪಾರಾಗಲು ಅಂತಿಮವಾಗಿ ಸುಪ್ರೀಂ ಕೋರ್ಟ್ ಬಾಗಿಲು ಬಡಿದರು. ಆದರೆ ಶಾಸಕರಿಗೆ ನಿರೀಕ್ಷಣಾ ಜಾಮೀನು ನೀಡಿಕೆಗೆ ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು, ತನಿಖಾಧಿಕಾರಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸೂಚಿಸಿತು. ಕೊನೆಗೆ ಸಿಐಡಿಗೆ ಮುಂದೆ ಶರಣಾಗಲು ಶಾಸಕ ಬಸವರಾಜು ಅವರು ಹೊರರಾಜ್ಯದಿಂದ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಆಗ ಅವರನ್ನು ಸಿಐಡಿ ಬಂಧಿಸಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದು ಬ್ಲೇಡ್‌, ಮನೆಗೆ ಬಂದಿದ್ದು ಹಳೆ ಬಟ್ಟೆ
ತಂದೆ-ತಾಯಿ ಇರಿದು ಕೊಲೆ ಮಾಡಿದ ಪಾಪಿ ಮಗ ನಿಮ್ಹಾನ್ಸ್‌ಗೆ ದಾಖಲು