ಬೆಂಗಳೂರು : ಪ್ರಯಾಣಿಕರ ದಟ್ಟಣೆ ಇರುವ ನಗರದ ಬಿಎಂಟಿಸಿ ಬಸ್‌ಗಳು, ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಕುಖ್ಯಾತ ಕುಪ್ಪಂ ಗ್ಯಾಂಗ್‌ನ ಇಬ್ಬರು ಮಹಿಳೆಯರನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ನಿವಾಸಿಗಳಾದ ಲಾವಣ್ಯ(28) ಮತ್ತು ಮೀನಾ(50) ಬಂಧಿತರು. ಆರೋಪಿಗಳಿಂದ ಬರೋಬ್ಬರಿ ₹80 ಲಕ್ಷ ಮೌಲ್ಯದ 899 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ಮಹಿಳೆಯೊಬ್ಬರು ಕುಟುಂಬದ ಜತೆಗೆ ಕೆ.ಆರ್.ಪುರದ ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನಾಭರಣ ಖರೀದಿಸಿದ್ದರು. ಬಳಿಕ ಊರಿಗೆ ತೆರಳಲು ಬಸ್ ಹತ್ತುವಾಗ ದುಷ್ಕರ್ಮಿಗಳು ಮಹಿಳೆಯ ಗಮನ ಬೇರೆಡೆ ಸೆಳೆದು ಬ್ಯಾಗಿನೊಳಗಿದ್ದ 150 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ರಾಮಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರದಿಂದ ಬಂದು ಕೈಚಳಕ:
ಬಂಧಿತ ಆರೋಪಿಗಳು ವೃತ್ತಿಪರ ಕಳ್ಳಿಯರಾಗಿದ್ದಾರೆ. ಇಬ್ಬರೂ ಸಂಬಂಧಿಕರಾಗಿದ್ದು, ಆಂಧ್ರಪ್ರದೇಶದಿಂದ ನಗರಕ್ಕೆ ಬಂದು ಹೆಚ್ಚಿನ ಪ್ರಯಾಣಿಕರ ದಟ್ಟಣೆ ಇರುವ ಬಿಎಂಟಿಸಿ ಬಸ್‌ಗಳು, ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡಿ ಪರಾರಿಯಾಗುತ್ತಿದ್ದರು. ಕದ್ದ ಚಿನ್ನಾಭರಣಗಳನ್ನು ಆಂಧ್ರಪ್ರದೇಶದ ಬ್ಯಾಂಕ್‌ಗಳು, ಫೈನಾನ್ಸ್ ಸಂಸ್ಥೆಗಳಲ್ಲಿ ಅಡಮಾನ ಇರಿಸಿ ಹಣ ಪಡೆದು ಹಂಚಿಕೊಳ್ಳುತ್ತಿದ್ದರು.
ಗಾಂಧಿನಗರದ ಲಾಡ್ಜ್‌ನಲ್ಲಿ ಪೊಲೀಸರ ಬಲೆಗೆ:
ಕೆ.ಆರ್.ಪುರ ಪ್ರಕರಣ ಸಂಬಂಧ ತನಿಖೆಗೆ ಇಳಿದಿದ್ದ ಪೊಲೀಸರು ಬಿಎಂಟಿಸಿ ಬಸ್‌ನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಕಳ್ಳಿಯರ ಸುಳಿವು ಸಿಕ್ಕಿತ್ತು. ಇವರ ಬಂಧನಕ್ಕೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದರು. ಈ ನಡುವೆ ಗಾಂಧಿನಗರದ ಸಾಯಿ ಯಾತ್ರಿ ನಿವಾಸ್ ಲಾಡ್ಜ್‌ನಲ್ಲಿ ಇಬ್ಬರು ಕಳ್ಳಿಯರು ಇರುವ ಬಗ್ಗೆ ಭಾತ್ಮೀದಾರರಿಂದ ಸಿಕ್ಕ ಮಾಹಿತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು. ಬಸ್‌ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದಾಗಿ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಕದ್ದ ಚಿನ್ನಾಭರಣ ಬ್ಯಾಂಕ್‌ನಲ್ಲಿ ಅಡಮಾನ:
ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ತಿರಪತ್ತೂರಿನ ಕರೂರು ವೈಶ್ಯ ಬ್ಯಾಂಕ್‌ನಲ್ಲಿ ಅಡಮಾನವಿರಿಸಿದ್ದ 855 ಗ್ರಾಂ ಚಿನ್ನಾಭರಣ ಹಾಗೂ ಆರೋಪಿಗಳ ಮನೆಯಲ್ಲಿ ಇರಿಸಿದ್ದ 44 ಗ್ರಾಂ ಚಿನ್ನಾಭರಣ ಸೇರಿ ಒಟ್ಟು ₹80 ಲಕ್ಷ ಮೌಲ್ಯದ 899 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಈ ಇಬ್ಬರ ಬಂಧನದಿಂದ ಕೆ.ಆರ್.ಪುರ ನಾಲ್ಕು, ಮಹದೇವಪುರ ಎರಡು, ಯಶವಂತಪುರ, ರಾಮಮೂರ್ತಿನಗರ ತಲಾ ಒಂದು ಸೇರಿ ಒಟ್ಟು 8 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳಿಯರು ಮೊದಲ ಬಾರಿಗೆ ಬಲೆಗೆ:
ಕುಪ್ಪಂ ಗ್ಯಾಂಗ್‌ನ ಲಾವಣ್ಯ ಮತ್ತು ಮೀನಾ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಕಳವು ಕೃತ್ಯಗಳಲ್ಲಿ ತೊಡಗಿದ್ದಾರೆ. ಆದರೆ ಒಮ್ಮೆಯೂ ಪೊಲೀಸರಿಗೆ ಸಿಕ್ಕಿಬಿದ್ದಿರಲಿಲ್ಲ. ಈ ಬಾರಿ ಕೆ.ಆರ್.ಪುರ ಠಾಣೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಈ ಇಬ್ಬರು ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಕುಪ್ಪಂ ಗ್ಯಾಂಗ್?
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಗ್ರಾಮ ಕಳ್ಳತನಕ್ಕೆ ಕುಖ್ಯಾತಿ ಪಡೆದಿದೆ. ಇಲ್ಲಿನ ಕೆಲವರು ಗ್ಯಾಂಗ್ ಕಟ್ಟಿಕೊಂಡು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ, ನಗದು ಕಳ್ಳತನ ಮಾಡುವುದರಲ್ಲಿ ನಿಷ್ಣಾತರಾಗಿದ್ದಾರೆ. ಈ ಗ್ಯಾಂಗ್‌ಗಳಲ್ಲಿ ಸಂಬಂಧಿಕರು ಸೇರಿದಂತೆ ಒಂದೇ ಮನೆಯ ಸದಸ್ಯರು ಇರುತ್ತಾರೆ. ಅಪರಾಧ ಜಗತ್ತಿನಲ್ಲಿ ಕುಪ್ಪಂ ಗ್ಯಾಂಗ್ ಭಾರೀ ಹೆಸರು ಮಾಡಿದೆ.