ಪತ್ನಿ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Feb 16, 2024, 01:46 AM ISTUpdated : Feb 16, 2024, 03:04 PM IST
Jail

ಸಾರಾಂಶ

ಪತ್ನಿಯನ್ನು ಹತ್ಯೆಗೈದ ಪತಿರಾಯನಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಮಂಡ್ಯದ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪತ್ನಿಯನ್ನು ಹತ್ಯೆಗೈದ ಪತಿರಾಯನಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಮಂಡ್ಯದ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಮಳವಳ್ಳಿ ತಾಲೂಕು ಕಲ್ಕುಣಿ ಗ್ರಾಮದ ಕುಮಾರಸ್ವಾಮಿ (೩೫) ಶಿಕ್ಷೆಗೊಳಗಾದ ಆರೋಪಿ. ಈತ ೨೦೧೯ರಲ್ಲಿ ತನ್ನ ಪತ್ನಿ ಸೌಮ್ಯ ಅವರನ್ನು ಆಕ್ಸಲ್ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದನು.

ಕಿರುಗಾವಲು ಗಾಮದ ರಾಜಣ್ಣ ಅವರ ಪುತ್ರಿ ಸೌಮ್ಯಳನ್‌ನು ೩ ಮೇ ೨೦೦೯ರಂದು ಕಲ್ಕುಣಿ ಗ್ರಾಮದ ನಿಂಗಯ್ಯ ಅವರ ಮಗ ಕುಮಾರಸ್ವಾಮಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. 

ಮದುವೆಯಾದ ನಂತರದ ಸ್ವಲ್ಪ ದಿನಗಳ ಕಾಲ ಸೌಮ್ಯಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದ. ನಂತರದ ದಿನಗಳಲ್ಲಿ ಕುಡಿದು ಬಂದು ಆಕೆಯೊಂದಿಗೆ ಜಗಳ ತೆಗೆಯುತ್ತಿದ್ದನು.

ಪತಿಯ ವರ್ತನೆಯಿಂದ ಬೇಸತ್ತ ಸೌಮ್ಯ ೨೦೧೯ರ ಶಿವರಾತ್ರಿ ಹಬ್ಬದ ದಿನ ತನ್ನ ಮಕ್ಕಳಾದ ಬಿಂದುಧರ ಮತ್ತು ಯಮುನಾಳನ್ನು ಕರೆದುಕೊಂಡು ತನ್ನ ತವರು ಮನೆಯಾದ ಕಿರುಗಾವಲಿಗೆ ಬಂದು ತಂದೆ-ತಾಯಿಯೊಂದಿಗೆ ವಾಸವಾಗಿದ್ದಳು. ಕಿರುಗಾವಲಿನಿಂದ ಮಳವಳ್ಳಿಯ ಬಟ್ಟೆ ಅಂಗಡಿಗೆ ನಿತ್ಯ ಕೆಲಸಕ್ಕೆ ಹೋಗಿ ಬರುತ್ತಿದ್ದಳು.

೨೩ ಜೂನ್‌೨೦೧೯ರಂದು ರಾತ್ರಿ ೯ ಗಂಟೆ ಸಮಯದಲ್ಲಿ ಸೌಮ್ಯಳ ಮನೆಗೆ ಬಂದ ಪತಿ ಕುಮಾರಸ್ವಾಮಿ ಊಟ ಮಾಡಿ ಗಂಡ-ಹೆಂಡತಿ ಇಬ್ಬರೂ ಹಿಂದಿನ ಮನೆಯಲ್ಲಿ ಮಲಗಿದ್ದರು. 

ಬೆಳಗ್ಗೆ ೬.೫೦ರ ಸಮಯದಲ್ಲಿ ಕುಮಾರಸ್ವಾಮಿ ಹಣದ ವಿಚಾರವಾಗಿ ಸೌಮ್ಯಳ ಜೊತೆ ಜಗಳ ತೆಗೆದಿದ್ದಾನೆ. ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಕುಮಾರಸ್ವಾಮಿ ಆಕ್ಸಲ್ ಬ್ಲೇಡ್‌ನಿಂದ ಸೌಮ್ಯಳ ಕತ್ತನ್ನು ಕೊಯ್ದು ಕೊಲೆ ಮಾಡಿರುವುದು ತನಿಖೆ ಹಾಗೂ ಸಾಕ್ಷ್ಯಾಧಾರಗಳಿಂದ ದೃಢಪಟ್ಟಿತ್ತು.

ತನಿಖಾಧಿಕಾರಿಯಾಗಿದ್ದ ಮಳವಳ್ಳಿ ಸಿಪಿಐ ಎಂ. ಧರ್ಮೇಂದ್ರ ಅವರು ಆರೋಪಿ ಕುಮಾರಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ ೪೯೮ (ಎ), ೩೦೨ರ ಅಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಮಂಡ್ಯದ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ನಿರ್ಮಲ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ೪೦ ಸಾವಿರ ರು. ದಂಡ ವಿಧಿಸಿದ್ದಾರೆ. 

ದಂಡ ಪಾವತಿಸದಿದ್ದರೆ ೬ ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಜಯಶ್ರೀ ಎಸ್.ಶೆಣೈ ಅವರು ಪಿರ್ಯಾದುದಾರರ ಪರ ವಾದ ಮಂಡಿಸಿದ್ದರು.

PREV

Recommended Stories

ತಾಯಿಗೆ ಕ್ಷಮೆ ಕೋರಿ ಪತ್ರ ಬರೆದಿಟ್ಟು ನೇ*ಗೆ ಶರಣಾದ ಕನ್ನಡ ಗಾಯಕಿ ಸವಿತಾ ಮಗ
ಐಎಸ್‌ಡಿ ಕರೆಗಳ ಗೋಲ್‌ಮಾಲ್‌ : ಕೋಟ್ಯಂತರ ರು. ವಂಚಿಸಿದ್ದ ಇಬ್ಬರ ಬಂಧನ