ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ: ೨.೮೦ ಲಕ್ಷ ರು. ದಂಡ

KannadaprabhaNewsNetwork |  
Published : Mar 22, 2024, 02:16 AM ISTUpdated : Mar 22, 2024, 03:13 PM IST
rape case up

ಸಾರಾಂಶ

ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಮೂವರಿಗೆ ಮಂಡ್ಯದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ೨.೮೦ ಲಕ್ಷ ರು. ದಂಡ ವಿಧಿಸಿ ತೀರ್ಪು ನೀಡಿದೆ. ಮೈಸೂರಿನ ಕೆ.ಆರ್.ಮಿಲ್ ಕಾಲೋನಿ ನಿವಾಸಿಗಳಾದ ಕೀರ್ತಿಗೌಡ, ಕಿರಣ್‌ಗೌಡ, ಮೋಹನ ಶಿಕ್ಷೆಗೊಳಗಾದ ಆರೋಪಿಗಳು.

ಕನ್ನಡಪ್ರಭ ವಾರ್ತೆ ಮಂಡ್ಯ

ಯುವತಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಮೂವರಿಗೆ ಮಂಡ್ಯದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ೨.೮೦ ಲಕ್ಷ ರು. ದಂಡ ವಿಧಿಸಿ ತೀರ್ಪು ನೀಡಿದೆ. ಮೈಸೂರಿನ ಕೆ.ಆರ್.ಮಿಲ್ ಕಾಲೋನಿ ನಿವಾಸಿಗಳಾದ ಕೀರ್ತಿಗೌಡ, ಕಿರಣ್‌ಗೌಡ, ಮೋಹನ ಶಿಕ್ಷೆಗೊಳಗಾದ ಆರೋಪಿಗಳು. 

ನ್ಯಾಯಾಧೀಶೆ ಕೆ.ನಿರ್ಮಲಾ ತೀರ್ಪು ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ.ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದ ಯುವತಿ ಹಾಗೂ ಕೀರ್ತಿಗೌಡ ಸ್ನೇಹಿತರಾಗಿದ್ದು, ಕೆಆರ್‌ಎಸ್, ಮೇಲುಕೋಟೆ, ಕರಿಘಟ್ಟ ಸ್ಥಳಗಳಿಗೆ ಕರೆದುಕೊಂಡು ಹೋಗಿ ಆಕೆಯ ಪ್ರೀತಿ-ವಿಶ್ವಾಸ ಗಳಿಸಿದ್ದನು. ೯ ಅಕ್ಟೋಬರ್ ೨೦೧೫ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾರಾಣಿ ಕಾಲೇಜು ಬಳಿ ಹೋಗಿ ಕೆಆರ್‌ಎಸ್‌ಗೆ ಹೋಗಿಬರೋಣವೆಂದು ಯುವತಿಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ತೆರಳಿದ್ದಾನೆ. ಪಂಪ್‌ಹೌಸ್ ಬಳಿಯ ಡಾಬಾದಲ್ಲಿ ಊಟ ಮಾಡಿ ಕೆಆರ್‌ಎಸ್‌ಗೆ ತೆರಳುವ ಮಾರ್ಗಮಧ್ಯದಲ್ಲಿರುವ ಬೇಬಿಬೆಟ್ಟದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದನು.

ಅತ್ಯಾಚಾರವೆಸಗಿ ಹಿಂತಿರುಗುವ ಸಮಯದಲ್ಲಿ ಕೀರ್ತಿಗೌಡನ ಸ್ನೇಹಿತರಾದ ಕಿರಣ್, ಮೋಹನ, ಮಂಜುನಾಥ್ ರಸ್ತೆಯಲ್ಲಿ ನಿಂತಿದ್ದರು. ಬಳಿಕ ಕಿರಣ್, ಮೋಹನ ಯುವತಿ ಜೊತೆ ಮಾತನಾಡುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದರು. ಆದರೆ, ಮಂಜುನಾಥ್ ಎಂಬಾತ ಯುವತಿ ಬಳಿ ತೆರಳಿದಾಗ ಆಕೆ ಜೋರಾಗಿ ಅಳಲಾರಂಭಿಸಿದಳು. ನಂತರ ನಾಲ್ವರು ಆಕೆಯನ್ನು ಶ್ರೀರಂಗಪಟ್ಟಣ ಬಸ್ ನಿಲ್ದಾಣಕ್ಕೆ ಕರೆತಂದು ಬಿಟ್ಟು ಪರಾರಿಯಾಗಿದ್ದರು.

೧೦ ಅಕ್ಟೋಬರ್ ೨೦೧೫ರಂದು ಯುವತಿ ಪಾಂಡವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣದ ತನಿಖೆಯನ್ನು ಶ್ರೀರಂಗಪಟ್ಟಣ ಉಪವಿಭಾಗದ ಡಿವೈಎಸ್ಪಿ ಎನ್.ಸಿದ್ದೇಶ್ವರ್ ನಡೆಸಿ ಆರೋಪಿಗಳ ವಿರುದ್ಧ ಮಂಡ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನಂತರ ಪ್ರಕರಣ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು ಆರೋಪಿಗಳಾದ ಕೀರ್ತಿಗೌಡ, ಕಿರಣ್‌ಗೌಡ, ಮೋಹನ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ೩ (೨ಮತ್ತು೫) ರಡಿ ಜೀವಾವಧಿ ಶಿಕ್ಷೆ ಮತ್ತು ತಲಾ ೫೦ ಸಾವಿರ ರು. ದಂಡ., ಪಿಒಎ ಕಾಯ್ದೆಯಡಿ ಕಠಿಣ ಶಿಕ್ಷೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ ೩೭೬ ಡಿ ಅಡಿಯಲ್ಲಿ ೨೦ ವರ್ಷ ಕಠಿಣ ಶಿಕ್ಷೆ, ೪೦ ಸಾವಿರ ರು. ದಂಡ, ಭಾದಂಸಂ ಕಲಂ ೫೦೬ರಡಿ ೫ ಸಾವಿರ ರು. ದಂಡ ಮತ್ತು ಕಠಿಣ ಶಿಕ್ಷೆ, ನೊಂದ ಸಂತ್ರಸ್ತ ಯುವತಿಗೆ ೨.೮೦ ಲಕ್ಷ ರು. ಪರಿಹಾರ ನೀಡುವಂತೆ ನ್ಯಾಯಾಧೀಶೆ ಕೆ.ನಿರ್ಮಲಾ ಆದೇಶಿಸಿದ್ದಾರೆ. ನಾಲ್ಕನೇ ಆರೋಪಿ ಮಂಜುನಾಥ್‌ನನ್ನು ಪ್ರಕರಣದಿಂದ ಕೈಬಿಡಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಚ್.ಸಿ.ರಾಮಲಿಂಗೇಗೌಡ ವಾದ ಮಂಡಿಸಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ನಾಯಿ ಮೂತ್ರ ವಿಸರ್ಜನೆ ವಿಚಾರಕ್ಕೆ ಅಪಾರ್ಟ್‌ಮೆಂಟ್‌ ನಿವಾಸಿಗಳ ಮಧ್ಯೆ ಮಾರಾಮಾರಿ
25 ಅಡಿ ಆಳದ ಗುಂಡಿಗೆ ಬಿದ್ದಿದ್ದ ಮಹಿಳೆ ರಕ್ಷಿಸಿದ ಪೊಲೀಸರು!