ಬೆಂಗಳೂರು : ಸಾಲ ವಾಪಾಸ್ ನೀಡಲಾಗದೇ ಸಾಲ ನೀಡಿದ್ದವರ ಮನೆಯಲ್ಲೇ ಕಳ್ಳತನ ಮಾಡಿಸಿದ್ದ ಮಹಿಳೆ ಸೇರಿ 6 ಆರೋಪಿಗಳನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೀಣ್ಯ1ನೇ ಹಂತದ ನಿವಾಸಿ ವೆಂಕಟೇಶ್ (43), ಈತನ ಸಹೋದರಿ ದಾಸರಹಳ್ಳಿ ನಿವಾಸಿ ಕವಿತಾ(33), ಕುಖ್ಯಾತ ಕಳ್ಳ ಕೃಷ್ಣ ಅಲಿಯಾಸ್ ಮೋರಿ ರಾಜ(52), ಈತನ ಸಹಚರರಾದ ತಮಿಳುನಾಡು ಮೂಲದ ಹರೀಶ್(34), ಪ್ರತಾಪ್ (22) ಹಾಗೂ ಬಳ್ಳಾರಿಯ ನಾಗರಾಜ್ ಅಲಿಯಾಸ್ ದೇವ್ರು (29) ಬಂಧಿತರು. ಆರೋಪಿಗಳಿಂದ ₹9.90 ಲಕ್ಷ ಮೌಲ್ಯದ 99 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಜು.12ರಂದು ದಾಸರಹಳ್ಳಿ ಮಲ್ಲಸಂದ್ರದ ನಿವಾಸಿ ಮಂಗಳಾ ಎಂಬುವವರ ಮನೆ ಬೀಗ ಮುರಿದು ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು 6 ಮಂದಿಯನ್ನು ಬಂಧಿಸಲಾಗಿದೆ.
ಪ್ರಕರಣದ ವಿವರ:
ದೂರುದಾರೆ ಮಂಗಳಾ ಅವರು ದಾಸರಹಳ್ಳಿಯಲ್ಲಿ ಸ್ನೇಹ ದಮ್ ಬಿರಿಯಾನಿ ಎಂಬ ಹೋಟೆಲ್ ನಡೆಸುತ್ತಿದ್ದು, ಕವಿತಾಗೆ ಕೆಲ ವರ್ಷಗಳಿಂದ ಪರಿಚಯವಿದ್ದರು. ಕವಿತಾ ಕೆಲ ತಿಂಗಳ ಹಿಂದೆ ಮಂಗಳಾ ಅವರ ಬಳಿ ₹2 ಲಕ್ಷ ಕೈ ಸಾಲ ಪಡೆದಿದ್ದಳು. ಸಾಲ ನೀಡುವಾಗ ಮಂಗಳಾ ಅಗ್ರಿಮೆಂಟ್ ಮಾಡಿಸಿಕೊಂಡಿದ್ದರು. ಬಳಿಕ ನಿಗದಿತ ಸಮಯಕ್ಕೆ ಹಣವನ್ನು ವಾಪಾಸ್ ನೀಡುವಂತೆ ಕವಿತಾಳಿಗೆ ತಾಕೀತು ಮಾಡಿದ್ದಾರೆ. ಇದ್ದಕ್ಕೆ ಆಕೆಯ ಮೇಲೆ ಕೋಪಗೊಂಡ ಕವಿತಾ ಪೀಣ್ಯದಲ್ಲಿರುವ ತನ್ನ ಸಹೋದರ ವೆಂಕಟೇಶ್ ಜತೆ ಸೇರಿ ಮಂಗಳಾ ಮನೆಯಲ್ಲೇ ಕಳ್ಳತನ ಮಾಡಲು ಸಂಚು ರೂಪಿಸಿದ್ದಳು. ಬಳಿಕ ವೆಂಕಟೇಶ್ ತನಗೆ ಪರಿಚಯವಿದ್ದ ಕುಖ್ಯಾತ ಕಳ್ಳ ಮೋರಿ ರಾಜ ಹಾಗೂ ಆತನ ಸಹಚರರು ಜು.12ರಂದು ಹಾಡಹಗಲೇ ಮಂಗಳಾ ಅವರ ಮನೆಯ ಬಾಗಿಲ ಬೀಗ ಮುರಿದು ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಗೆ ಮಂಗಳಾ ದೂರು ನೀಡಿದ್ದರು.
ಸಿಸಿಟಿವಿ ಸುಳಿವು ಆಧರಿಸಿ ಬಂಧನ:
ಪ್ರಕರಣ ದಾಖಲಿಸಿ ತನಿಖೆಗೆ ಇಳಿದ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ, ದೂರುದಾರೆ ಮಂಗಳಾ ಮನೆ ಬಳಿ ವೆಂಕಟೇಶ್ ಮತ್ತು ಕುಖ್ಯಾತ ಕಳ್ಳ ಮೋರಿ ರಾಜನ ಚಲನವಲನ ಸೇರೆಯಾಗಿರುವುದು ಕಂಡು ಬಂದಿದೆ. ಕಾರ್ಯಾಚರಣೆ ಕೈಗೊಂಡು ಮೊದಲಿಗೆ ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ಈ ಮನೆಗಳ್ಳತನದ ರಹಸ್ಯ ಬಯಲಾಗಿದೆ. ಬಳಿಕ ಮೋರಿ ರಾಜ, ಕವಿತಾ ಸೇರಿ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕುಖ್ಯಾತ ಕಳ್ಳತನ ವಿರುದ್ಧ 20ಕ್ಕೂ ಅಧಿಕ ಪ್ರಕರಣ:
ಬಂಧಿತ ಆರೋಪಿಗಳ ಪೈಕಿ ಮೋರಿ ರಾಜನ ವಿರುದ್ಧ ಈ ಹಿಂದೆ ಬೆಂಗಳೂರು, ಮೈಸೂರು, ಆಂಧ್ರಪ್ರದೇಶ ವಿವಿಧ ಪೊಲೀಸ್ ಠಾಣೆಗಳಲ್ಲಿ 20ಕ್ಕೂ ಅಧಿಕ ಮನೆಗಳವು ಪ್ರಕರಣಗಳು ದಾಖಲಾಗಿವೆ. ವೆಂಕಟೇಶ್, ಹರೀಶ್ ಹಾಗೂ ನಾಗರಾಜ್ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಒಂದು ಮನೆಗಳವು ಪ್ರಕರಣ ದಾಖಲಾಗಿದೆ. ಈ ಐವರು ಆರೋಪಿಗಳು ಈ ಹಿಂದೆ ಜೈಲಿನಲ್ಲಿ ಇದ್ದಾಗ ಪರಸ್ಪರ ಪರಿಚಿತರಾಗಿ ಸ್ನೇಹಿತರಾಗಿದ್ದರು. ಕುಖ್ಯಾತ ಕಳ್ಳ ಮೋರಿ ರಾಜ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.