ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಎಂಜಿನಿಯರ್‌ಗಳಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇರೆಗೆ ಸ್ಥಳೀಯ ಪತ್ರಿಕೆಯ ಪತ್ರಕರ್ತರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ನಾಡಪ್ರಭು ಕೆಂಪೇಗೌಡ ಲೇಔಟ್ ವಿಭಾಗದಲ್ಲಿ ಕಳಪೆ ಕಾಮಗಾರಿ ನಡೆಸಿ ಹಣ ಪಡೆದಿದ್ದಾರೆ ಎಂದು ಲೋಕಾಯುಕ್ತರಿಗೆ ದೂರು ಕೊಡುವುದಾಗಿ ಬೆದರಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಎಂಜಿನಿಯರ್‌ಗಳಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇರೆಗೆ ಸ್ಥಳೀಯ ಪತ್ರಿಕೆಯ ಪತ್ರಕರ್ತರ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸತ್ಯದಾರಿ’ ಮಾಸ ಪತ್ರಿಕೆಯ ಶರತ್ ಬಾಬು ಹಾಗೂ ಗುರುಮೂರ್ತಿ ಮೇಲೆ ಆರೋಪ ಬಂದಿದ್ದು, ಈ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಿಡಿಎ ಎಇ ಸಿ.ಎನ್.ಅಶೋಕ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಂಪೇಗೌಡ ಲೇಔಟ್‌ನ ವಿಭಾಗದಲ್ಲಿ ನಿಯಮಾನುಸಾರ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಆದರೆ ಕಳೆದ ನವೆಂಬರ್‌ನಲ್ಲಿ ನಮ್ಮ ಕಚೇರಿಗೆ ಬಂದು ಕಾಮಗಾರಿ ನಡೆಸದೆ ಗುತ್ತಿಗೆದಾರರಿಂದ ಹಣ ಪಡೆದು ಕಳಪೆ ಕೆಲಸ ಮಾಡುತ್ತಿದ್ದೀರಿ ಎಂದು ಸತ್ಯದಾರಿ ಕನ್ನಡ ಮಾಸ ಪತ್ರಿಕೆಯ ಶರತ್ ಬಾಬು ಹಾಗೂ ಗುರುಮೂರ್ತಿ ಬೆದರಿಕೆ ಹಾಕಿದ್ದರು. ಇದಾದ ನಂತರ ಮತ್ತೆ ನಮಗೆ ಪದೇ ಪದೇ ಕರೆ ಮಾಡಿ ಹಣಕ್ಕಾಗಿ ಆರೋಪಿಗಳು ಪೀಡಿಸುತ್ತಿದ್ದರು. ಕೊನೆಗೆ ₹27 ಲಕ್ಷ ಕೊಡದೆ ಹೋದರೆ ಲೋಕಾಯುಕ್ತಕ್ಕೆ ದೂರು ಕೊಡುವುದಾಗಿ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎಂದು ದೂರಿದ್ದಾರೆ.
ಈ ಬೆದರಿಕೆಗೆ ಬಗ್ಗದೆ ಹೋದಾಗ ಆರ್‌ಟಿಐನಲ್ಲಿ ಆರೋಪಿಗಳು ಸಲ್ಲದ ವಿಚಾರಗಳಿಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸುತ್ತಿದ್ದರು. ಅಲ್ಲದೆ ಹಣ ಕೊಡದೆ ಹೋದರೆ ರಾಮನಗರದಲ್ಲಿ ತಾವು ಹೇಳಿದ ಜಾಗದಲ್ಲಿ ಕೊಠಡಿ ನಿರ್ಮಿಸಿ ಕೊಡುವಂತೆ ಮತ್ತೆ ಬೇಡಿಕೆ ಇಟ್ಟಿದ್ದರು. ಕಳೆದ ತಿಂಗಳು ಲೋಕಾಯುಕ್ತಕ್ಕೆ ದೂರು ನೀಡುತ್ತಿರುವುದಾಗಿ ಪತ್ರವೊಂದನ್ನು ವಾಟ್ಸಾಪ್ ಮೂಲಕ ಕಳುಹಿಸಿ ಶರತ್ ಹಾಗೂ ಗುರುಮೂರ್ತಿ ಬೆದರಿಸಿದ್ದರು ಎಂದು ಎಇ ಆರೋಪಿಸಿದ್ದಾರೆ.