ಮುಖ್ಯಮಂತ್ರಿ ಚಿನ್ನದ ಪದಕ್ಕೆ ಭಾಜನವಾಗಿದ್ದ ಇನ್‌ಸ್ಪೆಕ್ಟರ್‌ ಮೇಲೆ ಬೇನಾಮಿ ಆಸ್ತಿ ವಿಚಾರಕ್ಕೆ ಲೋಕಾ ದಾಳಿ

KannadaprabhaNewsNetwork | Updated : Apr 03 2025, 05:33 AM IST

ಸಾರಾಂಶ

ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಬೇನಾಮಿ ಆಸ್ತಿ ವಿಚಾರದ ಸುಳಿಯಲ್ಲಿ ಸಿಲುಕಿದ್ದು, ಲೋಕಾಯುಕ್ತ ಪೊಲೀಸರು ದಾಳಿ ನಡೆಸುವ ಮಾಹಿತಿ ತಿಳಿಯುತ್ತಿದ್ದಂತೆ ಬಂಧನ ಭೀತಿಯಿಂದ ಪರಾರಿಯಾಗಿ ಮರಳಿ ಠಾಣೆಗೆ ಹಾಜರಾಗಿರುವ ಘಟನೆ ನಡೆದಿದೆ.

 ಬೆಂಗಳೂರು : ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಬೇನಾಮಿ ಆಸ್ತಿ ವಿಚಾರದ ಸುಳಿಯಲ್ಲಿ ಸಿಲುಕಿದ್ದು, ಲೋಕಾಯುಕ್ತ ಪೊಲೀಸರು ದಾಳಿ ನಡೆಸುವ ಮಾಹಿತಿ ತಿಳಿಯುತ್ತಿದ್ದಂತೆ ಬಂಧನ ಭೀತಿಯಿಂದ ಪರಾರಿಯಾಗಿ ಮರಳಿ ಠಾಣೆಗೆ ಹಾಜರಾಗಿರುವ ಘಟನೆ ನಡೆದಿದೆ.

ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಕುಮಾರ್‌ ಆರೋಪಿ. ಈ ನಡುವೆ, ಅವರು ಮುಖ್ಯಮಂತ್ರಿ ಚಿನ್ನದ ಪದಕ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದು, ತನಿಖೆ ಮುಂದುವರಿಸಲಾಗಿದೆ. ಚನ್ನೇಗೌಡ ಎಂಬುವರು ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ವಂಚನೆ ಪ್ರಕರಣವೊಂದರಲ್ಲಿ ಬಿ ರಿಪೋರ್ಟ್‌ ಸಲ್ಲಿಸಲು ₹4 ಕೋಟಿ ಮೌಲ್ಯದ ಮನೆಯನ್ನು ಗವಿಗೌಡ ಎಂಬುವವರ ಹೆಸರಿಗೆ ಬೇನಾಮಿಯಾಗಿ ಮಾಡಿಕೊಡಲು ಗುತ್ತಿಗೆದಾರ ಚನ್ನೇಗೌಡ ದಂಪತಿಗೆ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ನಾಗರಬಾವಿ ಬಳಿ ಇಬ್ಬರು ಪೊಲೀಸರು ಮಾತುಕತೆಗೆ ಕರೆದಿದ್ದರು. ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಲೋಕಾಯುಕ್ತ ಪೊಲೀಸರು 2 ತಂಡಗಳಾಗಿ ದಾಳಿ ನಡೆಸಿವೆ. ಒಂದು ತಂಡ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆ ಮೇಲೆ ಕಾರ್ಯಾಚರಣೆ ಕೈಗೊಂಡರೆ, ಮತ್ತೊಂದು ತಂಡ ನಾಗರಬಾವಿಯಲ್ಲಿ ದಾಳಿ ನಡೆಸಿದೆ. ಈ ಬಗ್ಗೆ ಮಾಹಿತಿ ಪಡೆದ ಕುಮಾರ್‌ ನಾಪತ್ತೆಯಾಗಿದ್ದರು. ಮಾತುಕತೆಗಾಗಿ ಹೋಗಿದ್ದ ಹೆಡ್‌ಕಾನ್ಸ್‌ಟೇಬಲ್‌ ಉಮೇಶ್‌ ಮತ್ತು ಕಾನ್ಸ್‌ಟೇಬಲ್‌ ಅನಂತ್‌ ಎಂಬುವವರು ಲೋಕಾ ಬಲೆಗೆ ಬಿದ್ದಿದ್ದು, ವಿಚಾರಣೆಗೊಳಪಡಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ಸೋಮಶೇಖರ್ ಆರಾಧ್ಯ ಎಂಬುವರು ಗುತ್ತಿಗೆದಾರ ಚೆನ್ನಗೌಡ ಮತ್ತು ಆತನ ಪತ್ನಿ ಅನುಷಾ ವಿರುದ್ಧ ಅನ್ನಪೂಣೇಶ್ವರಿನಗರ ಠಾಣೆಗೆ ವಂಚನೆ ಕೇಸ್ ದಾಖಲಿಸಿದ್ದರು. ಪ್ರಕರಣ ಸಂಬಂಧ ಬಿ ರಿಪೋರ್ಟ್‌ ಸಲ್ಲಿಕೆಗೆ ಪ್ರತಿಯಾಗಿ ₹4 ಕೋಟಿ ಮೌಲ್ಯದ ಮನೆಯನ್ನು ಮಾರಾಟ ಮಾಡಲು ಒತ್ತಡ ಹಾಕಿ ಕರಾರು ಪತ್ರಕ್ಕೆ ಸಹಿ ಮಾಡಲು ಒತ್ತಾಯ ಹಾಕಲಾಗಿತ್ತು ಎಂದು ಹೇಳಲಾಗಿದೆ.

ಗುತ್ತಿಗೆದಾರ ದಂಪತಿ ವಿರುದ್ಧ ಪ್ರಕರಣ:

ಗುತ್ತಿಗೆದಾರ ಚನ್ನೇಗೌಡ ಪತ್ನಿ ಅನುಷಾ ಸರ್ಕಾರಿ ನೌಕರಿಯಲ್ಲಿದ್ದು, ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಡಿ ಗ್ರೂಪ್‌ ಲೇಔಟ್‌ನಲ್ಲಿನ ಮನೆ ಭೋಗ್ಯಕ್ಕೆ ನೀಡುವುದಾಗಿ ಸೋಮಶೇಖರ್‌ ಅವರಿಂದ 60 ಲಕ್ಷ ರು. ಪಡೆದುಕೊಂಡಿದ್ದರು. ಆದರೆ, ಮನೆಯನ್ನು ನೀಡದೆ 30 ಲಕ್ಷ ರು. ವಾಪಸ್‌ ನೀಡಿ ಉಳಿದ ಹಣವನ್ನು ನೀಡಿಲ್ಲ. ಈ ಸಂಬಂಧ ಸೋಮಶೇಖರ್‌ ದೂರು ನೀಡಿದ್ದರು. ಈ ಸಂಬಂಧ ತನಿಖೆ ಕೈಗೊಳ್ಳಲಾಗಿತ್ತು.

Share this article