ಕನ್ನಡಪ್ರಭ ವಾರ್ತೆ ಬೆಂಗಳೂರು
ತಾಲೂಕು ಕಚೇರಿಗಳಲ್ಲಿ ಆದಾಯ, ಜಾತಿ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲೆಗಳನ್ನು ನೀಡಲು ಲಂಚಕ್ಕೆ ಬೇಡಿಕೆ, ಮಧ್ಯವರ್ತಿಗಳ ಹಾವಳಿ ಹೆಚ್ಚಳ ಇರುವುದಕ್ಕೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಂಭತ್ತು ತಾಲೂಕು ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಒಂಭತ್ತು ತಂಡಗಳಾಗಿ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು.
ತಾಲೂಕು ಕಚೇರಿಯಲ್ಲಿ ಖಾತಾ, ಭೂ ಪರಿವರ್ತನೆ ಮಾಡಲು ಹಣ ಬೇಡಿಕೆ ಹಾಗೂ ಸಿಬ್ಬಂದಿ ಕೊರತೆ ಬಗ್ಗೆಯೂ ದೂರು ಬಂದಿದ್ದರಿಂದ ದಿಢೀರ್ ಭೇಟಿ ನೀಡಲಾಯಿತು.
ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಮತ್ತು ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಕೆಲವು ತಾಲೂಕು ಕಚೇರಿಗಳಿಗೆ ಭೇಟಿ ಖುದ್ದು ಭೇಟಿ ನೀಡಿ ಕಚೇರಿಯಲ್ಲಿನ ಕಾರ್ಯವೈಖರಿಗೆ ಗರಂ ಆದರು. ಜನರಿಗೆ ಸಮಸ್ಯೆಯಾಗದಂತೆ ಅವರ ಸೇವೆಗಳನ್ನು ಮಾಡಿಕೊಡುವಂತೆ ಸೂಚನೆ ನೀಡಿದರು.
ಬೆಂಗಳೂರು ಉತ್ತರ ತಾಲೂಕು ಕಚೇರಿಗೆ ಲೋಕಾಯುಕ್ತರು ಭೇಟಿ ನೀಡಿದಾಗ ತಹಸೀಲ್ದಾರ್ ಕಚೇರಿಯಲ್ಲಿರಲಿಲ್ಲ. ಅವರು ಹೈಕೋರ್ಟ್ ಕೆಲಸ ನಿಮಿತ್ತ ತೆರಳಿರುವುದಾಗಿ ಕಚೇರಿಯ ಸಿಬ್ಬಂದಿ ಸ್ಪಷ್ಟನೆ ನೀಡಿದರು.
ಈ ವೇಳೆ ತಹಸೀಲ್ದಾರ್ ವಿರುದ್ಧ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಬಳಿ ಸಾರ್ವಜನಿಕರು ದೂರುಗಳನ್ನು ನೀಡಿದರು. ಈ ವೇಳೆ ಸೋಮವಾರ ಖುದ್ದು ಲೋಕಾಯುಕ್ತ ಕಚೇರಿಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.
ಯಲಹಂಕ ತಾಲೂಕು ಕಚೇರಿಗೆ ಭೇಟಿ ನೀಡಿದ ವೇಳೆ ಸಿಬ್ಬಂದಿ ಕ್ರಿಕೆಟ್ ಆಡಲು ಹೋಗಿದ್ದರು. ಈ ವಿಷಯ ತಿಳಿದ ಲೋಕಾಯುಕ್ತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿರುವ ಎಲ್ಲಾ ಇಲಾಖೆಗಳ ದಾಖಲೆ ಪರಿಶೀಲನೆ ನಡೆಸಲಾಯಿತು. ಕಡತ ವಿಲೇವಾರಿ ಮಾಡದ ಬಗ್ಗೆ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್, ತಹಸೀಲ್ದಾರ್ ಕಚೇರಿಗಳ ವಿರುದ್ಧ ಸುಮಾರು 500ಕ್ಕೂ ಹೆಚ್ಚು ದೂರುಗಳು ಬಂದಿವೆ. ಹಲವು ಸುಮೋಟೋ ಪ್ರಕರಣಗಳಿವೆ.
ಮಧ್ಯವರ್ತಿಗಳ ಹಾವಳಿ, ಲಂಚಕ್ಕೆ ಬೇಡಿಕೆ ಎಂಬ ದೂರುಗಳು ಹೆಚ್ಚಾಗಿ ಬಂದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಲೋಕಾಯುಕ್ತ ಕಾಯ್ದೆಯಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಮಾತನಾಡಿ, ಪ್ರತಿ ದಿನ ನಮಗೆ ಎಲ್ಲ ತಾಲೂಕು ಕಚೇರಿಗಳಲ್ಲಿ ಮಂದಗತಿಯಲ್ಲಿ ಕೆಲಸ ನಡೆಯುತ್ತಿರುವುದು, ಕಡತಗಳ ವಿಲೇವಾರಿ ಆಗದಿರುವುದಿರುವ ಬಗ್ಗೆ ದೂರುಗಳು ಬಂದಿದ್ದವು. ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಎಲ್ಲಾ ಕಡತಗಳನ್ನು ಪರಿಶೀಲನೆ ನಡೆಸಿದ್ದೇವೆ.
ಯಾವ ಯಾವ ಕಡತಗಳು ನಿಧಾನವಾಗುತ್ತಿದೆ ಮತ್ತು ಅದಕ್ಕೆ ಕಾರಣ ಏನು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗಿದೆ. ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.