ಕೋರ್ಟಿನಲ್ಲಿ ನೌಕರಿಯ ಆಮಿಷ: ರೈತನಿಗೆ ₹1.80 ಲಕ್ಷ ವಂಚನೆ

KannadaprabhaNewsNetwork |  
Published : Feb 09, 2024, 01:51 AM ISTUpdated : Feb 09, 2024, 12:34 PM IST
Vidhana Soudha Police Station

ಸಾರಾಂಶ

ರೈತರೊಬ್ಬರ ಮಗನಿಗೆ ನ್ಯಾಯಾಲಯದಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ₹1.80 ಲಕ್ಷ ಪಡೆದು ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೈತರೊಬ್ಬರ ಮಗನಿಗೆ ನ್ಯಾಯಾಲಯದಲ್ಲಿ ಸರ್ಕಾರಿ ನೌಕರಿ ಕೊಡಿಸುವುದಾಗಿ ₹1.80 ಲಕ್ಷ ಪಡೆದು ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದ ದುಂಡಯ್ಯ(63) ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಗೌರಿಬಿದನೂರಿನ ಪದ್ಮರಾಜ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:
ದೂರುದಾರ ದುಂಡಯ್ಯ 2021ನೇ ಸಾಲಿನಲ್ಲಿ ವಿಧಾನಸೌಧದ ಬಳಿ ಇರುವ ಮಾಹಿತಿ ಆಯೋಗದ ಬಳಿಗೆ ಬಂದಿದ್ದರು. ಈ ವೇಳೆ ಪದ್ಮರಾಜ್‌ ಎಂಬಾತ ಸಿಕ್ಕಿ ಪರಿಚಯ ಮಾಡಿಕೊಂಡಿದ್ದಾನೆ.

‘ನಾನು ಮಾಹಿತಿ ಆಯೋಗದಲ್ಲಿ ಕೆಲಸ ಮಾಡುತ್ತಿದ್ದೇನೆ. ನ್ಯಾಯಾಲಯಗಳಲ್ಲಿ ಕೆಲಸಗಳು ಖಾಲಿಯಿವೆ. 10ನೇ ತರಗತಿ ಪಾಸ್‌ ಆದವರಿಗೆ ಕೆಲಸ ಕೊಡಿಸುತ್ತೇನೆ. ಮೂರು ಲಕ್ಷ ರುಪಾಯಿ ಕೊಟ್ಟರೆ ಕೆಲಸ ಕೊಡಿಸುತ್ತೇನೆ. ಯಾರಾದರೂ ಇದ್ದರೆ ತಿಳಿಸಿ’ ಎಂದು ಹೇಳಿದ್ದಾನೆ.

₹1.80 ಲಕ್ಷ ಪಡೆದ: ಆಗ ದುಂಡಯ್ಯ ತನ್ನ ಮಗನಿಗೆ ಆ ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ನಾನು ಬಡವನಾಗಿದ್ದು, ₹3 ಲಕ್ಷ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಆಗ ಪದ್ಮರಾಜ್‌, ‘ನೀವು ₹2 ಲಕ್ಷ ಕೊಡಿ ಸಾಕು. ನಿಮ್ಮ ಮಗನಿಗೆ ಕೆಲಸ ಕೊಡಿಸುತ್ತೇನೆ’ ಎಂದಿದ್ದಾನೆ. 

ಇದೇ ವೇಳೆ ಯಾವುದೋ ಅಧಿಕಾರಿಗೆ ಫೋನ್‌ ಮಾಡುವ ಹಾಗೆ ಅಪರಿಚಿತನಿಗೆ ಕರೆ ಮಾಡಿ, ‘ನಮ್ಮ ದುಂಡಯ್ಯನ ಮಗನಿಗೆ ನ್ಯಾಯಾಲಯದಲ್ಲಿ ಒಂದು ಕೆಲಸ ಕೊಡಬೇಕು’ ಎಂದು ಹೇಳಿ ನಂಬಿಕೆ ಹುಟ್ಟಿಸಿದ್ದಾನೆ. ಬಳಿಕ ದುಂಡಯ್ಯ ಅವರು ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ₹1.80 ಲಕ್ಷ ಸಾಲ ಪಡೆದು ಪದ್ಮರಾಜ್‌ಗೆ ಆ ಹಣವನ್ನು ನೀಡಿದ್ದಾರೆ.

2 ವರ್ಷ ಅಲೆದಾಡಿಸಿದ: ಕೆಲ ದಿನಗಳ ಬಳಿಕ ಕೆಲಸದ ಬಗ್ಗೆ ಪದ್ಮರಾಜ್‌ನನ್ನು ಪ್ರಶ್ನಿಸಿದಾಗ ಇಂದು-ನಾಳೆ ಎಂದು ಸುಮಾರು ಎರಡು ವರ್ಷಗಳ ಕಾಲ ಸಬೂಬು ಹೇಳಿ ದುಂಡಯ್ಯನನ್ನು ಅಲೆದಾಡಿಸಿದ್ದಾನೆ. 

ಬಳಿಕ ಕೆಲಸ ಕೊಡಿಸಿ, ಇಲ್ಲವೇ ನನ್ನ ಹಣ ವಾಪಾಸ್‌ ಕೊಡಿ ಎಂದು ದುಂಡಯ್ಯ ಕೇಳಿದ್ದಾರೆ. ಈ ವೇಳೆ ಪದ್ಮರಾಜ್‌ ಒಂದು ಲಕ್ಷ ರು. ಮೊತ್ತದ ಚೆಕ್‌ ಬರೆದುಕೊಟ್ಟಿದ್ದಾನೆ. ಆ ಚೆಕ್‌ ಅನ್ನು ದುಂಡಯ್ಯ ಬ್ಯಾಂಕ್‌ಗೆ ಹಾಕಿದ್ದಾಗ ಚೆಕ್‌ ಬೌನ್ಸ್‌ ಆಗಿದೆ.

‘ಹಣ ಕೇಳಿದರೆ ಗತಿ ಕಾಣಿಸುವೆ’
ಬಳಿಕ ದುಂಡಯ್ಯ ಕರೆ ಮಾಡಿದಾಗ ಪದ್ಮರಾಜ್‌ ಕರೆ ಸ್ವೀಕರಿಸಿಲ್ಲ. ಬಳಿಕ ಆತನನ್ನು ಭೇಟಿ ಮಾಡಿ ಹಣದ ಬಗ್ಗೆ ಪ್ರಶ್ನಿಸಿದಾಗ, ‘ಯಾರು ನೀನು? ನಾನು ನಿನಗೆ ಯಾವುದೇ ಹಣ ಕೊಡಬೇಕಿಲ್ಲ. ಮತ್ತೊಮ್ಮೆ ನೀನು ನನಗೆ ಹಣ ಕೇಳಿದರೆ ಒಂದು ಗತಿ ಕಾಣಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.

ಹೀಗಾಗಿ ದುಂಡಯ್ಯ ಅವರು ವಂಚಕ ಪದ್ಮರಾಜ್‌ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌