ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭಕ್ಕೂ ಮುನ್ನ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು, ತೀವ್ರ ಆತಂಕ ಸೃಷ್ಟಿಸಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭಕ್ಕೂ ಮುನ್ನ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು, ತೀವ್ರ ಆತಂಕ ಸೃಷ್ಟಿಸಿದೆ.
ಆ್ಯಸಿಡ್ ದಾಳಿಗೊಳಗಾದ ಮೂವರು ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆಯ ಮುಖ ಭಾಗಶಃ ಸುಟ್ಟಿದ್ದು, ಮತ್ತಿಬ್ಬರ ಮುಖ, ಮೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿ ಕೇರಳ ಮೂಲದ ಯುವಕನೊಬ್ಬನನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಮಲಪುರಂ ಜಿಲ್ಲೆಯ ನೆಳಂಬೂರು ನಿವಾಸಿ ಎಂಬಿಎ ವಿದ್ಯಾರ್ಥಿ ಅಬೀನ್ (೨೩) ಆ್ಯಸಿಡ್ ಎರಚಿದ ಆರೋಪಿಯಾಗಿದ್ದು, ಘಟನೆ ಬಳಿಕ ಅಲ್ಲಿದ್ದವರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರೇಮ ವೈಫಲ್ಯದಿಂದ ಆತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಆ್ಯಸಿಡ್ ದಾಳಿಯಿಂದ ಗಾಯಗೊಂಡ ಮೂವರೂ ವಿದ್ಯಾರ್ಥಿನಿಯರಿಗೆ ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ್ಯಸಿಡ್‌ನ ತೀಕ್ಷ್ಣತೆ ಕಡಿಮೆ ಇದ್ದ ಕಾರಣ ಗಾಯದ ತೀವ್ರತೆ ಕಡಿಮೆ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಸಮವಸ್ತ್ರದಲ್ಲಿ ಬಂದಿದ್ದಾನೆ: ಆರೋಪಿ ಅಬೀನ್ ಬೆಳಗ್ಗೆ ಕಡಬ ಕಾಲೇಜಿನ ಸಮವಸ್ತ್ರ ಹೋಲುವ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿ, ಟೋಪಿ, ಮಾಸ್ಕ್ ಧರಿಸಿಕೊಂಡು ಕಾಲೇಜು ಆವರಣಕ್ಕೆ ಪ್ರವೇಶಿಸಿದ್ದ.
ದ್ವಿತೀಯ ವಾರ್ಷಿಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಇತರ ವಿದ್ಯಾರ್ಥಿಗಳ ಜೊತೆ ಜಗುಲಿಯಲ್ಲಿ ಕೂತಿದ್ದ. ಪರೀಕ್ಷಾ ಕೇಂದ್ರಕ್ಕೆ ಇತರ ಕಾಲೇಜಿನಿಂದ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬಂದಿರುವುದರಿಂದ ಯಾರೂ ಈತನ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ.
ಈತ ಕೂತಿದ್ದ ಜಗುಲಿಯ ಮತ್ತೊಂದು ಭಾಗದಲ್ಲಿ ಈತ ಪ್ರೇಮಿಸುತ್ತಿದ್ದ ವಿದ್ಯಾರ್ಥಿನಿ ಇತರ ವಿದ್ಯಾರ್ಥಿನಿಯರ ಜೊತೆ ಕೂತು ಪರೀಕ್ಷೆಯ ಕೊನೇ ಕ್ಷಣದ ಸಿದ್ಧತೆಯಲ್ಲಿದ್ದಳು.
ಇದೇ ಸಂದರ್ಭದಲ್ಲಿ ಆರೋಪಿ ತಾನು ಬಾಟಲಿಯಲ್ಲಿ ತಂದಿದ್ದ ಆ್ಯಸಿಡ್ ಅನ್ನು ವಿದ್ಯಾರ್ಥಿನಿ ಮೇಲೆ ಎರಚಿದ್ದಾನೆ. ಆಗ ಆ್ಯಸಿಡ್ ಆಕೆಯ ಜತೆಗೆ ಜತೆಗಿದ್ದ ಮತ್ತಿಬ್ಬರು ವಿದ್ಯಾರ್ಥಿನಿಯರ ಮೇಲೂ ಬಿದ್ದಿದೆ.
ಈ ವೇಳೆ ವಿದ್ಯಾರ್ಥಿಗಳು ಏಕಾಏಕಿ ಚೀರಿದ್ದರಿಂದ ಕಾಲೇಜಿನ ಒಳಗಡೆ ಕಚೇರಿಯಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್ ಬಿಚ್ಚುತ್ತಿದ್ದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಹೊರಗೋಡಿ ಬಂದಿದ್ದಾರೆ.
ಆದಾಗಲೇ ಆರೋಪಿ ಓಡಿ ಪರಾರಿಯಾಗಲು ಯತ್ನಿಸಿದ್ದು, ಅಲ್ಲೇ ಇದ್ದ ವಿದ್ಯಾರ್ಥಿಗಳು ಬೆನ್ನಟ್ಟಿ ಆತನನ್ನು ಹಿಡಿದು ಕಡಬ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಾಯಗೊಂಡ ಮೂವರು ವಿದ್ಯಾರ್ಥಿನಿಯರನ್ನು ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದೇ ಊರಿನವರು: ಆರೋಪಿಯು ಸಂತ್ರಸ್ತ ವಿದ್ಯಾರ್ಥಿನಿಯ ತಾಯಿ ಊರಾದ ಕೇರಳದ ಮಲಪ್ಪುರಂ ನಿವಾಸಿಯಾಗಿದ್ದಾನೆ. ಹೀಗಾಗಿ ಆತನಿಗೆ ವಿದ್ಯಾರ್ಥಿನಿಯ ಪರಿಚಯವಿತ್ತು.
ಕಳೆದೆರಡು ವರ್ಷಗಳಿಂದ ಈಕೆಯನ್ನು ಪ್ರೀತಿಸುತ್ತಲೂ ಇದ್ದ ಎನ್ನಲಾಗಿದ್ದು, ಆಕೆ ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
ಕಡಿಮೆ ತೀವ್ರತೆಯ ಆ್ಯಸಿಡ್: ಈ ಆ್ಯಸಿಡ್ ಕಡಿಮೆ ತೀವ್ರತೆ ಹೊಂದಿತ್ತು. ಹಾಗಾಗಿ ಆ್ಯಸಿಡ್ ದಾಳಿಯಿಂದ ಹೆಚ್ಚಿನ ಹಾನಿ ಆಗಿಲ್ಲ. ಆದರೂ ಘಟನೆಯಲ್ಲಿ ಒಬ್ಬಾಕೆಯ ಮುಖ ಭಾಗಶಃ ಹಾಗೂ ಕೈಗೆ ಸುಟ್ಟ ಗಾಯಗಳಾಗಿವೆ.
ಇನ್ನುಳಿದ ಇಬ್ಬರು ವಿದ್ಯಾರ್ಥಿನಿಯರಿಗೆ ಆ್ಯಸಿಡ್ ಸಿಡಿದು ಅಲ್ಪಸುಟ್ಟ ಗಾಯಗಳಾಗಿದೆ. ಮೂವರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ.ರಿಷ್ಯಂತ್ ಸಿ.ಬಿ.ತಿಳಿಸಿದ್ದಾರೆ. ಘಟನೆ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಾಂಗವಾಗಿ ನಡೆದ ಪರೀಕ್ಷೆ: ಸೋಮವಾರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಗಣಿತಶಾಸ್ತ್ರ ಪರೀಕ್ಷೆ ನಡೆಯುತ್ತಿತ್ತು. ಘಟನೆ ಬಳಿಕವೂ ಪರೀಕ್ಷೆ ಸಾಂಗವಾಗಿ ನೆರವೇರಿತು. ಈ ವೇಳೆ ಶಾಲಾ ಆವರಣದಲ್ಲಿ ಬಂದೋಬಸ್ತ್ ಕೂಡ ಕೈಗೊಳ್ಳಲಾಗಿತ್ತು.