ಇತ್ತೀಚೆಗೆ ದೂರವಾಗಿದ್ದ ಪ್ರೇಮಿಗಳು : ಮತ್ತೆ ಪ್ರೀತ್ಸೆ ಅಂತ ಹಿಂದೆ ಬಿದ್ದ ಒಪ್ಪದ ಯುವತಿಗೆ ಚಾಕು ಇರಿದ

KannadaprabhaNewsNetwork | Updated : Jan 18 2025, 04:27 AM IST

ಸಾರಾಂಶ

ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದ ಆರೋಪಿಯನ್ನು ಜಗಜೀವನರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು : ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದ ಆರೋಪಿಯನ್ನು ಜಗಜೀವನರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭಕ್ಷಿಗಾರ್ಡನ್‌ ನಿವಾಸಿ ಅಜಯ್‌(29) ಬಂಧಿತ. ಆರೋಪಿಯು ಜ.12ರಂದು ಬಿನ್ನಿಪೇಟೆ ಮುಖ್ಯರಸ್ತೆಯಲ್ಲಿ ಪೂಜಾ(23) ಎಂಬಾಕೆಗೆ ಚಾಕು ಇರಿದು ಹಲ್ಲೆ ಮಾಡಿದ್ದ. ಈ ಸಂಬಂಧ ಗಾಯಾಳು ಪೂಜಾ ಅವರ ತಾಯಿ ರುಕ್ಮಿಣಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಚಾಕು ಇರಿತಕ್ಕೆ ಒಳಗಾದ ಬಿನ್ನಿಲೇಔಟ್‌ ನಿವಾಸಿ ಪೂಜಾ ಪ್ಯಾರಾ ಮೆಡಿಕಲ್‌ ಓಟಿ ಟೆಕ್ನಿಷಿಯನ್‌ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಆರೋಪಿ ಅಜಯ್‌ ಮತ್ತು ಪೂಜಾ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಪ್ರೀತಿಯಲ್ಲಿ ಬಿರುಕು ಮೂಡಿ ದೂರಾಗಿದ್ದರು.

ಮತ್ತೆ ಪ್ರೀತಿಸುವಂತೆ ಅಜಯ್‌, ಪೂಜಾ ಅವರ ಹಿಂದೆ ಬಂದಿದ್ದ. ಪೂಜಾ ಪೋಷಕರು ತಮ್ಮ ಮಗಳ ತಂಟೆಗೆ ಬಾರದಂತೆ ಅಜಯ್‌ಗೆ ಬುದ್ಧಿ ಹೇಳಿದ್ದರು. ಆದರೂ ಅಜಯ್‌ ತನ್ನನ್ನು ಪ್ರೀತಿಸುವಂತೆ ಪೂಜಾಗೆ ಕಿರುಕುಳ ನೀಡುತ್ತಿದ್ದ. ಪೂಜಾ ರಸ್ತೆಯಲ್ಲಿ ಓಡಾಡುವಾಗ ಬೆದರಿಕೆ ಹಾಕುವುದು, ಪದೇ ಪದೇ ಕರೆ ಮಾಡಿ ಹಿಂಸೆ ನೀಡುತ್ತಿದ್ದ.

ರಸ್ತೆಯಲ್ಲಿ ಅಡ್ಡಗಟ್ಟಿ ಚಾಕು ಇರಿದ:

ಜ.12ರಂದು ಸಂಜೆ ವಿ.ಎಸ್‌.ಗಾರ್ಡನ್‌ ಅಕ್ಕನ ಮನೆಗೆ ಹೋಗಿದ್ದ ಪೂಜಾ ಬಳಿಕ ಬಿನ್ನಿಪೇಟೆ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಮನೆಗೆ ಕಡೆಗೆ ಬರುವಾಗ, ಅಡ್ಡಗಟ್ಟಿದ ಅಜಯ್‌ ಏಕಾಏಕಿ ಚಾಕು ತೆಗೆದು ಪೂಜಾಗೆ ಹಲವು ಬಾರಿ ಇರಿದು ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಬಳಿಕ ಸ್ಥಳೀಯರ ನೆರವಿನಿಂದ ಗಾಯಾಳು ಪೂಜಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ಪೂಜಾಳ ತಾಯಿ ರುಕ್ಮಿಣಿ ನೀಡಿದ ದೂರಿನ ಮೇರೆಗೆ ಜೀಗಜೀವನರಾಮನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಅಜಯ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಚಾಕು ಇರಿತದಿಂದ ಗಾಯಗೊಂಡಿದ್ದ ಪೂಜಾ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article