ಮಸೂದೆ ಅಂಗೀಕಾರವಾದ ಬೆನ್ನಲ್ಲೆ ವಕ್ಫ್‌ ಕಬಳಿಕೆ ವರದಿ ನೀಡಿದ್ದ ಮಾಣಿಪ್ಪಾಡಿಗೆ ಬೆದರಿಕೆ ಕರೆ!

KannadaprabhaNewsNetwork | Updated : Apr 05 2025, 04:42 AM IST

ಸಾರಾಂಶ

ಸಂಸತ್ತಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದ ಬೆನ್ನಲ್ಲೆ ಮಸೂದೆಗೆ ಕಾರಣಿಕರ್ತರೆನ್ನಲಾದ ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಅವರಿಗೆ ಇಂಟರ್ನೆಟ್ ಮೂಲಕ ಹಲವರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.

 ಮಂಗಳೂರು :  ಸಂಸತ್ತಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದ ಬೆನ್ನಲ್ಲೆ ಮಸೂದೆಗೆ ಕಾರಣಿಕರ್ತರೆನ್ನಲಾದ ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಅವರಿಗೆ ಇಂಟರ್ನೆಟ್ ಮೂಲಕ ಹಲವರು ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.

ಕಳೆದ ಎರಡು-ಮೂರು ದಿನಗಳಿಂದ ಕರೆ ಬೆದರಿಗೆ ಕರೆಗಳು ಬಂದಿದ್ದು, ಉರ್ದು, ಮರಾಠಿ, ಕನ್ನಡ, ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡಿ ಬೈದಿದ್ದಾರೆ. ನಿನ್ನನ್ನು ಬಿಡುವುದಿಲ್ಲ, ಮುಗಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ಮಾಣಿಪ್ಪಾಡಿ ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ ಪೊಲೀಸ್‌ ಭದ್ರತೆ ನೀಡುವಂತೆಯೂ ಮನವಿ ಮಾಡಿದ್ದಾರೆ.

ನನ್ನ ವರದಿ ಆಧಾರದಲ್ಲೇ ಕೇಂದ್ರದ ಈ ತಿದ್ದುಪಡಿ ಮಸೂದೆ ಸಿದ್ಧವಾಗಿದೆ. ಇದರಿಂದ ಕೆಲವು ಐಎಎಸ್‌ ಅಧಿಕಾರಿಗಳಿಗೆ, ಹಲವು ರಾಜಕಾರಣಿಗಳಿಗೆ ಸಂಕಷ್ಟ ಎದುರಾಗಲಿದೆ ಎಂದು ಮಾಣಿಪ್ಪಾಡಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರ ಮಂಡಿಸಿದ ವಕ್ಫ್ ತಿದ್ದುಪಡಿ ಮಸೂದೆಗೆ ಅನ್ವರ್‌ ಮಾಣಿಪ್ಪಾಡಿ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿ ಪ್ರೇರಕ ಶಕ್ತಿಯಾಗಿದೆ. ಇದರಲ್ಲಿನ ಸಲಹೆ ಸೂಚನೆಗಳು ಮಸೂದೆಯಲ್ಲಿ ಅಡಕವಾಗಿವೆ. ಅಲ್ಲದೆ ಅನ್ವರ್‌ ಮಾಣಿಪ್ಪಾಡಿ ದೆಹಲಿಗೆ ತೆರಳಿ ಜೆಪಿಸಿ ಸಭೆಯಲ್ಲಿ ಸಹ ಭಾಗಿಯಾಗಿ ಮಹತ್ವದ ಸಲಹೆ ಸೂಚನೆ ನೀಡಿದ್ದರು. ಈ ನಡುವೆ ತಿದ್ದುಪಡಿ ಮಸೂದೆ ಪರವಾಗಿ ಅನ್ವರ್‌ ಮಾಣಿಪ್ಪಾಡಿ ಮಾತನಾಡಿದ್ದು ಮಸೂದೆ ವಿರೋಧಿಸುವವರನ್ನು ಕೆರಳಿಸಿದೆ. ಹೀಗಾಗಿಯೇ ಹಲವು ಪ್ರದೇಶಗಳಿಂದ ಬೆದರಿಕೆ ಕರೆಗಳು ಬಂದಿವೆ.

ದಾಖಲೆ ಸಹಿತ ದೂರು ನೀಡಿದರೆ ಕ್ರಮ:

ಬೆದರಿಕೆ ಕರೆ ಬಂದಿರುವ ಕುರಿತಂತೆ ಅನ್ವರ್ ಮಾಣಿಪ್ಪಾಡಿ ಅವರು ಲಿಖಿತ ದೂರು, ಪೂರಕೆ ದಾಖಲೆ ನೀಡಿದರೆ ದೂರು ದಾಖಲಿಸಿ ತನಿಖೆಗೆ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Share this article