ನೆಂಟರಿಗೆ 30 ಬಾರ್‌ ಲೈಸೆನ್ಸ್ ಕೊಟ್ಟಿದ್ದ ಜಾರಕಿಹೊಳಿ ಭಾವ !

Published : Jul 04, 2026, 06:41 AM IST
Belagavi ed raid excise officer Manjunath

ಸಾರಾಂಶ

ಅಧಿಕಾರ ದುರ್ಬಳಕೆ ಮಾಡಿಕೊಂಡು ಕುಟುಂಬ ಸದಸ್ಯರು ಹಾಗೂ ಆಪ್ತರಿಗೆ ಸುಮಾರು 30 ಮದ್ಯದಂಗಡಿಗಳ ಪರವಾನಗಿಗಳನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಭಾವ ಹಾಗೂ ಅಬಕಾರಿ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ್‌ ವಿತರಿಸಿದ್ದರು

 ಗಿರೀಶ್ ಮಾದೇನಹಳ್ಳಿ

  ಬೆಂಗಳೂರು :  ಅಧಿಕಾರ ದುರ್ಬಳಕೆ ಮಾಡಿಕೊಂಡು ಕುಟುಂಬ ಸದಸ್ಯರು ಹಾಗೂ ಆಪ್ತರಿಗೆ ಸುಮಾರು 30 ಮದ್ಯದಂಗಡಿಗಳ ಪರವಾನಗಿಗಳನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಭಾವ ಹಾಗೂ ಅಬಕಾರಿ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ್‌ ವಿತರಿಸಿದ್ದರು ಎಂಬ ಸಂಗತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಪರವಾನಗಿ ಮಾಹಿತಿ ಬೆನ್ನಲ್ಲೇ ಅಬಕಾರಿ ಇಲಾಖೆಯಲ್ಲಿನ ಐದು ವರ್ಷಗಳ ಅವಧಿಯ (2020-25ರವರೆಗೆ) ‘ಲೈಸೆನ್ಸ್‌ ಮಾಯಾಜಾಲ’ದ ಶೋಧನೆಗೆ ಲೋಕಾಯುಕ್ತ ಪೊಲೀಸರು ಇಳಿದಿದ್ದು, ಇದರ ಭಾಗವಾಗಿಯೇ ಮೂರು ದಿನಗಳ ಹಿಂದೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಅಬಕಾರಿ ಇಲಾಖೆಯ ಉಪ ಆಯುಕ್ತರುಗಳ (ಡಿಸಿ) ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.

ಮದ್ಯದಂಗಡಿಗಳ ಪರವಾನಗಿ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದ್ದು, ಇದಕ್ಕಾಗಿ ಆನ್‌ಲೈನ್‌ ವ್ಯವಸ್ಥೆ ರೂಪಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರಿಗೆ ಅಬಕಾರಿ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಚಾಲಾಕಿ ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದಂತೆ ಅಬಕಾರಿ ಕೋಟೆಯಲ್ಲಿ ‘ಲೈಸೆನ್ಸ್‌ ಮಾಯಾಜಾಲ’ ಕೆಲಸ ಮಾಡುತ್ತಿದೆ ಎಂದು ತಿಳಿದು ಬಂದಿದೆ.

ಆಪ್ತರಿಗೆ ಪರವಾನಗಿ ವಿತರಣೆ:

ಜೂ.24ರಂದು ಬೆಳಗಾವಿ ವಲಯದ ಅಬಕಾರಿ ಹೆಚ್ಚುವರಿ ಆಯುಕ್ತ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಭಾವ ವೈ.ಮಂಜುನಾಥ್ ಮತ್ತು ಅವರ ಆಪ್ತರ ಮನೆ ಸೇರಿ ರಾಜ್ಯದ 14 ಕಡೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿತ್ತು. ಈ ವೇಳೆ 13.3 ಕೋಟಿ ರು. ನಗದನ್ನು ಇ.ಡಿ. ಜಪ್ತಿ ಮಾಡಿತ್ತು. ಮಂಜುನಾಥ್ ಸಾಮ್ರಾಜ್ಯಕ್ಕೆ ಇ.ಡಿ. ಲಗ್ಗೆ ಹಾಕಿದ ಬಳಿಕ ಎಚ್ಚೆತ್ತ ಲೋಕಾಯುಕ್ತ ಪೊಲೀಸರು, ಅಬಕಾರಿ ಇಲಾಖೆಯಲ್ಲಿ ಪರವಾನಗಿ ಜಾಲ ಶೋಧನೆಗಿಳಿದರು. ಆಗ ತಮ್ಮ ಸೋದರ ಸಂಬಂಧಿಗಳು, ಕುಟುಂಬ ಸದಸ್ಯರು, ನಿಷ್ಠರು ಹಾಗೂ ಹಿಂಬಾಲಕರ ಹೆಸರಿನಲ್ಲಿ 30ಕ್ಕೂ ಹೆಚ್ಚಿನ ಜನರಿಗೆ ಪರವಾನಗಿಗಳನ್ನು ಮಂಜುನಾಥ್ ಮಂಜೂರು ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಲಾಭ ಪಡೆದವರಿಗೆ ಲೋಕಾ ತನಿಖೆ ಬಿಸಿ:

ಮಂಜುನಾಥ್ ಅವರ ಪರವಾನಗಿ ಹಂಚಿಕೆ ವಿಷಯ ಪತ್ತೆಯಾದ ಬೆನ್ನಲ್ಲೇ ಉಳಿದ ಅಬಕಾರಿ ಇಲಾಖೆ ಉಪ ಆಯುಕ್ತರ ಹಿಂದೆ ಸಹ ‘ಲೈಸೆನ್ಸ್ ಜಾಲ’ ವಿರುವ ಬಗ್ಗೆ ಲೋಕಾಯುಕ್ತ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಗುಮಾನಿ ಮೇರೆಗೆ ದಿಢೀರ್‌ ಬೆಂಗಳೂರು ನಗರದ 8 ಹಾಗೂ ಗ್ರಾಮಾಂತರ ಸೇರಿ ಒಟ್ಟು 9 ಅಬಕಾರಿ ಉಪ ಆಯುಕ್ತರುಗಳ ಕಚೇರಿ ಮೇಲೆ ದಾಳಿ ನಡೆಸಿ ಕಡತಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಇನ್ನು ಕೆಲ ದಿನಗಳ ಹಿಂದೆ ಬೆಂಗಳೂರು ನಗರದಲ್ಲಿ ಬಾರ್‌ಗೆ ಪರವಾನಗಿ ನೀಡಲು ಲಂಚ ಸ್ವೀಕರಿಸುವ ವೇಳೆ ಬೆಂಗಳೂರು ನಗರದ ಅಬಕಾರಿ ಇಲಾಖೆ ಡಿಸಿ (ಉಪ ಆಯುಕ್ತ) ಜಗದೀಶ್ ನಾಯಕ್ ಮತ್ತು ಇತರ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಿಎಲ್-7 ಮತ್ತು ಮೈಕ್ರೋ ಬ್ರೂವರಿ ಲೈಸೆನ್ಸ್ ನೀಡಲು ಒಟ್ಟು 80 ಲಕ್ಷ ರು. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಬಂದಿತ್ತು.

ಈಗ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್‌ 11 ರಡಿ ಮಂಜುನಾಥ್ ಸೇರಿ ಅಬಕಾರಿ ಅಧಿಕಾರಿಗಳಿಂದ ಲಾಭ ಪಡೆದವರನ್ನು ಲೋಕಾಯುಕ್ತ ಪೊಲೀಸರು ತನಿಖೆಗೊಳಪಡಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪ್ರತ್ಯೇಕ ಎಫ್‌ಐಆರ್ ಕೂಡ ದಾಖಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

 ಅರ್ಜಿ ಸಲ್ಲಿಸುವ ಮುನ್ನವೇ ಡೀಲ್‌

ಮದ್ಯದಂಗಡಿಗೆ ಪರವಾನಗಿ ವಿತರಣೆಗೆ ಆನ್‌ಲೈನ್‌ ವ್ಯವಸ್ಥೆಯನ್ನು ಅಬಕಾರಿ ಇಲಾಖೆ ಜಾರಿಗೊಳಿಸಿದೆ. ಆದರೆ ಪ್ರಾಥಮಿಕ ಹಂತದಿಂದಲೇ ಕೆಲವರ ಕೈಚಳಕವಿರುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಅಗೋಚರ ಕೈಗಳ ಮಧ್ಯೆ ‘ವ್ಯವಹಾರ’ ನಡೆಯುತ್ತದೆ. ಇಲ್ಲಿ ಡೀಲ್‌ ಕುದುರದೆ ಹೋದರೆ ಅರ್ಜಿಯೇ ವಜಾಗೊಳ್ಳುತ್ತದೆ. ಹೀಗಾಗಿ ಬಾರ್‌ಗಳಿಗೆ ಅರ್ಜಿ ಸಲ್ಲಿಸುವವರ ಮೇಲೆ ಗುಮಾನಿ ಬಂದಿದೆ. ಹೆಚ್ಚುವರಿ ಆಯುಕ್ತ ಮಂಜುನಾಥ್ ಅವರ ಅಧಿಕಾರಾವಧಿಯಲ್ಲಿ ಮಂಜೂರಾಗಿರುವ ಪರವಾನಗಿಗಳನ್ನು ಪರಿಶೀಲಿಸಿದಾಗ ಅಕ್ರಮ ಗೊತ್ತಾಯಿತು ಎಂದು ತಿಳಿದು ಬಂದಿದೆ.

ಉಪ ಆಯುಕ್ತರಿಗೆ ಲೋಕಾ ಬುಲಾವ್:

ಪ್ರತಿ ಉಪ ಆಯುಕ್ತರ ಅವಧಿಯಲ್ಲಿ ವಿತರಣೆಯಾಗಿರುವ ಪರವಾನಗಿಗಳ ವಿವರ ಸಲ್ಲಿಸುವಂತೆ ಅಬಕಾರಿ ಇಲಾಖೆಗೆ ಲೋಕಾಯುಕ್ತ ಪೊಲೀಸರು ಸೂಚಿಸಿದ್ದಾರೆ. ಈಗ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಉಪ ಆಯುಕ್ತರ ಅವಧಿಯಲ್ಲಿ ವಿತರಿಸಿರುವ ಪರವಾನಗಿಗಳ ಬಗ್ಗೆ ಪೊಲೀಸರು ಜಾಲಾಡಿದ್ದಾರೆ. ಅಲ್ಲದೆ, ಡಿಸಿಗಳಿಗೆ ಸೂಕ್ತ ದಾಖಲೆ ಸಹಿತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಐದು ವರ್ಷಕ್ಕೊಮ್ಮೆ ನವೀಕರಣ:

ಐದು ವರ್ಷಕ್ಕೊಮ್ಮೆ ಪರವಾನಗಿ ನವೀಕರಣ ನಿಯಮವನ್ನು ಅಬಕಾರಿ ಇಲಾಖೆ ಜಾರಿಗೊಳಿಸಿದೆ. ಈ ನವೀಕರಣದಲ್ಲೂ ಕಾಂಚಾಣ ಸದ್ದು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪರವಾನಗಿ ನವೀಕರಣ ವೇಳೆ ದಾಳಿ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಬೆಂಗಳೂರು ಕಿಲ್ಲರ್‌ ಕ್ವಾರಿಗೆ 7 ಬಡ ಕಾರ್ಮಿಕರು ಬಲಿ
ಮಗುವಿನ ರಕ್ಷಣೆ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದು: ಹೈಕೋರ್ಟ್