ಕನ್ನಡಪ್ರಭ ವಾರ್ತೆ ಮಂಡ್ಯ/ಮದ್ದೂರು
ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಮೆ.ಮಾಸ್ಟರ್ ಇನ್ಸುಲೇಷನ್ ಗೋದಾಮು-೧ ಮಾಲೀಕರಾದ ಎಸ್.ಅನಂತ್ ಹಾಗೂ ಎಸ್.ಶ್ರೀಕಾಂತ್ ಎಂಬುವರ ವಿರುದ್ಧ ದೂರು ದಾಖಲಿಸಿದ್ದು, ಗೋದಾಮಿನಲ್ಲಿರಿಸಿದ್ದ ಹಾಲಿನ ಪುಡಿಯಲ್ಲಿ ೫೪,೯೨೫ ಕೆಜಿ ಕಡಿಮೆ ಇರುವುದಾಗಿ ಮನ್‌ಮುಲ್ ಆಡಳಿತ ಮಂಡಳಿ ಆರೋಪಿಸಿದೆ. ಇದರ ಮೌಲ್ಯ ೧,೪೩,೬೩,೬೦೨ ರು.ಗಳೆಂದು ಹೇಳಲಾಗಿದೆ.
ಹೇಗಾಯ್ತು?ಮನ್‌ಮುಲ್‌ನಲ್ಲಿ ಉತ್ಪಾದನೆಯಾದ ಕೆನೆರಹಿತ ಹಾಲಿನ ಪುಡಿಯನ್ನು ದಾಸ್ತಾನು ಮಾಡಲು ಸ್ಥಳಾವಕಾಶವಿಲ್ಲದ ಕಾರಣ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಮೆ.ಮಾಸ್ಟರ್ ಇನ್ಸುಲೇಷನ್ ಗೋದಾಮಿನಲ್ಲಿ ದಾಸ್ತಾನು ಇಡುವುದಕ್ಕೆ ೨ ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ೩,೬೧,೪೫೦ ಕೆಜಿ ಹಾಲಿನ ಪುಡಿಯನ್ನು ಗೋದಾಮಿನಲ್ಲಿ ಸಂಗ್ರಹಿಸಲಾಗಿತ್ತು.
ಅಂತಿಮವಾಗಿ ಗೋದಾಮಿನಲ್ಲಿ ದಾಸ್ತಾನಿದ್ದ ಹಾಲಿನ ಪುಡಿಯಲ್ಲಿ ೫೪,೯೨೫ ಮೆಟ್ರಿಕ್ ಟನ್ ಕಡಿಮೆ ಇದ್ದು, ಅದಕ್ಕೆ ನಾವೇ ಜವಾಬ್ದಾರರು ಎಂದು ಗೋದಾಮಿನ ಮಾಲೀಕರು ಒಪ್ಪಿಕೊಂಡಿದ್ದು ಅದರ ಒಟ್ಟು ಮೌಲ್ಯ ೧,೪೩,೬೩,೬೦೨ ರು.ಗಳಾಗಿದೆ. ಈ ಹಣವನ್ನು ಭರಿಸುವುದಾಗಿ ಮೂರು ಚೆಕ್‌ಗಳನ್ನು ನೀಡಿದ್ದರು. ಆನಂತರದಲ್ಲಿ ಮೂರು ಚೆಕ್‌ಗಳು ಬೌನ್ಸ್ ಆಗಿವೆ.
ಆನಂತರದಲ್ಲಿ ಒಕ್ಕೂಟಕ್ಕೆ ವರ್ಗಾವಣೆ ಮಾಡಿಕೊಂಡ ಹಾಲಿನ ಪುಡಿಯ ದಾಸ್ತಾನುಗಳನ್ನು ಪರೀಕ್ಷೆಗೊಳಪಡಿಸಿದಾಗ ಕೆಲವೊಂದು ಬ್ಯಾಗ್‌ನಲ್ಲಿ ಕೆನೆರಹಿತ ಹಾಲಿನ ಪುಡಿ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಆ ಹಿನ್ನೆಲೆಯಲ್ಲಿ ೨೬೧ ಬ್ಯಾಗ್‌ಗಳಲ್ಲಿನ ಕೆನೆರಹಿತ ಹಾಲಿನ ಪುಡಿಯ ಬ್ಯಾಗ್‌ಗಳನ್ನು ಪರೀಕ್ಷೆಗೊಳಪಡಿಸಿದಾಗ ೧೪೭ ಬ್ಯಾಗ್‌ಗಳ ಹಾಲಿನ ಪುಡಿ ಕಲಬೆರಕೆಯಾಗಿ ಬಳಕೆಗೆ ಯೋಗ್ಯವಿಲ್ಲವೆಂದು ದೃಢಪಟ್ಟಿದೆ. ಕೆಲವೊಂದು ಚೀಲಗಳು ಡಬಲ್ ಸ್ಟಿಚ್ ಆಗಿ ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದಿವೆ. ಒಟ್ಟು ೧೪೨ ಬ್ಯಾಗ್‌ಗಳು ಕಲಬೆರಕೆಯಾಗಿರುವುದು ಖಾತ್ರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಅಪ್ರಾಮಾಣಿಕವಾಗಿ ಮೋಸ, ವಂಚನೆ ಹಾಗೂ ಒಕ್ಕೂಟದ ಹೆಸರಿಗೆ ಮತ್ತು ನಂದಿನಿ ಬ್ರ್ಯಾಂಡ್‌ಗೆ ಕಳಂಕ ತರುವ ಉದ್ದೇಶದಿಂದ ಈ ಕೃತ್ಯವೆಸಗಲಾಗಿದ್ದು, ಕಲಬೆರಕೆ ಮಾಡಿರುವ ಗೋದಾಮು ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನ್‌ಮುಲ್ ಆಡಳಿತ ಮಂಡಳಿ ಒತ್ತಾಯಿಸಿದೆ.