;Resize=(412,232))
ಮದ್ದೂರು : ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದರೆಂಬ ಕಾರಣಕ್ಕೆ ಮಾವನೇ ಅಳಿಯನ ಮನೆಗೆ ಬೆಂಕಿ ಇಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚುಂಚಗಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ವಿನೋದ್ ಮತ್ತು ಕಾವ್ಯ ಒಂದೇ ಬೀದಿಯ ನಿವಾಸಿಗಳಾಗಿದ್ದು, ಒಂದೇ ಕೋಮಿನವರಾಗಿದ್ದರು. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರಿಬ್ಬರ ಪ್ರೀತಿಯ ವಿಷಯ ತಿಳಿದು ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರ ವಿರೋಧವನ್ನು ಲೆಕ್ಕಿಸದ ಪ್ರೇಮಿಗಳು ಕಳೆದ ಗುರುವಾರ ಯಾರಿಗೂ ವಿಷಯ ತಿಳಿಸದೆ ಬೇರೆಲ್ಲೋ ಮದುವೆಯಾಗಿದ್ದರು. ವಿವಾಹದ ಬಳಿಕ ಮಗಳು ತವರು ಮನೆಗೂ ಬಂದಿರಲಿಲ್ಲ.
ವಿಷಯ ತಿಳಿದ ಯುವತಿಯ ತಂದೆ ಚನ್ನೇಗೌಡ, ಶನಿವಾರ ಬೆಳಗ್ಗೆ ಅಳಿಯನ ಮನೆ ಎದುರು ಬಂದು ಏಕಾಏಕಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಅದೃಷ್ಟವಶಾತ್ ಆ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದೆ. ಮನೆಯೊಳಗಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮನೆ ಸಂಪೂರ್ಣ ಹಾನಿಗೊಳಗಾಗಿದೆ. ಮನೆಗೆ ಬೆಂಕಿ ಹಚ್ಚಿದ ಚನ್ನೇಗೌಡಗೂ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರಾದರೂ ಆ ವೇಳೆಗೆ ಮನೆ ಸಂಪೂರ್ಣ ಹಾನಿಗೊಳಗಾಗಿತ್ತು.
ಪ್ರೀತಿಸಿ ಮದುವೆಯಾಗಿರುವ ದಂಪತಿಯನ್ನು ವಶಕ್ಕೆ ಪಡೆದಿರುವ ಮದ್ದೂರು ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ನಂತರ ಯುವತಿಯ ಮನೆಯವರು ಗ್ರಾಮವನ್ನು ತೊರೆದಿದ್ದಾರೆ. ಮನೆ ಕಳೆದುಕೊಂಡು ಯುವಕನ ಮನೆಯವರು ಗೋಳಿಡುತ್ತಿದ್ದಾರೆ. ಮನೆಯಲ್ಲಿ 10 ಲಕ್ಷ ರು.ನಗದು, 250 ಗ್ರಾಂ. ಚಿನ್ನ ಇರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನೆಲೆಸಿದ್ದು, ಮುಂಜಾಗ್ರತೆಯಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.