ವೆಂಕಟೇಶ್ ಕಲಿಪಿ
ಯುವತಿಗೆ ಮದುವೆ ಭರವಸೆ ನೀಡಿ, ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಪ್ರಕರಣದಲ್ಲಿ ಯುವಕನೊಂದಿಗೆ ಆತನ ಪೋಷಕರು ಹಾಗೂ ಒಡಹುಟ್ಟಿದವರನ್ನು ಆರೋಪಿಗಳಾಗಿ ಸೇರಿಸುವುದಕ್ಕೆ ಹೈಕೋರ್ಟ್ ತಡೆ ನೀಡಿದೆ.
ಯುವತಿಯೊಬ್ಬಳಿಗೆ ಮದುವೆ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿದ ನಂತರ ವಂಚಿಸಿದ ಹಾಗೂ ಒಪ್ಪಿಗೆಯಿಲ್ಲದೆ ಆಕೆಗೆ ಗರ್ಭಪಾತ ಮಾಡಿಸಿದ, ಜೀವ ಬೆದರಿಕೆ ಹಾಕಿದ ಮತ್ತು ಉದ್ದೇಶಪೂರ್ವಕವಾಗಿ ಅವಮಾನಿಸಿದ ಆರೋಪ ಕುರಿತು ದಾಖಲಾಗಿರುವ ಎಫ್ಐಆರ್ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಯುವಕನ ತಂದೆ, ತಾಯಿ ಮತ್ತು ಸಹೋದರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಪ್ರಕರಣ ರದ್ದು ಕೋರಿ ಯುವಕ (ಮೊದಲನೆ ಆರೋಪಿ) ಪ್ರತ್ಯೇಕ ಅರ್ಜಿ ಸಲ್ಲಿಸಿದ್ದ.ಯುವಕನ ಪೋಷಕರ ಹಾಗೂ ಸಹೋದರಿಯ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅವರ ವಿರುದ್ಧದ ಎಫ್ಐಆರ್ ರದ್ದುಪಡಿಸಿ, ಯುವಕನ ವಿರುದ್ಧದ ಪ್ರಕರಣ ಬಾಕಿ ಉಳಿಸಿಕೊಂಡಿದ್ದು, ವಿಚಾರಣೆ ಮುಂದೂಡಿದೆ.
ಮೊದಲ ಬಾರಿಗೆ 2024ರ ಜು.1ರಿಂದ ಪರಿಚಯಿಸಲಾಗಿರುವ ಬಿಎನ್‌ಎಸ್ 2023ರ ಸೆಕ್ಷನ್ 69 ಅಡಿ ಯುವತಿಗೆ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಅಪರಾಧ ಯುವಕನ ವಿರುದ್ಧ ಪರಿಗಣಿಸಲಾಗುತ್ತದೆ. ಆ ಅಪರಾಧವನ್ನು ಯುವಕನ ಪೋಷಕರು ಹಾಗೂ ಸಹೋದರಿಗೆ ಅನ್ವಯಿಸಲಾಗದು. ಆ ಸಂಬಂಧ ಅವರ ವಿರುದ್ಧ ಹೆಚ್ಚಿನ ತನಿಖೆಗೆ ಅವಕಾಶ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಹಾಗಾಗಿ, ಅವರಿಗೆ ಸಂಬಂಧಿಸಿ ಎಫ್ಐಆರ್ ರದ್ದುಪಡಿಸಲಾಗುತ್ತಿದೆ ಎಂದು ಆದೇಶದಲ್ಲಿ ಪೀಠ ವಿವರಿಸಿದೆ.
ಪ್ರಕರಣದ ವಿವರ
ಬಾಕ್ಸ್))
ಯುವಕನ ವಂಚನೆಯಲ್ಲಿ ಪೋಷಕರು ಹಾಗೂ ಸಹೋದರಿ ಭಾಗಿಯಾಗಿದ್ದಾರೆ. ಅವನ ಸುಳ್ಳು ಮದುವೆ ಭರವಸೆಗಳು ತಿಳಿದ ನಂತರವೂ ಪರಿಸ್ಥಿತಿ ಸರಿಪಡಿಸಲು ಏನೂ ಮಾಡಲಿಲ್ಲ. ಅವರ ಬೆಂಬಲ ಮತ್ತು ಪ್ರೋತ್ಸಾಹದಿಂದ ಯುವಕ ನನಗೆ ಶೋಷಣೆ ಮತ್ತು ನಿಂದನೆ ಮುಂದುವರಿಸಲು ಅನುವು ಮಾಡಿಕೊಟ್ಟಿದೆ. ಅವರು ಬ್ರಾಹ್ಮಣರಾಗಿರುವುದರಿಂದ ಮಗನೊಂದಿಗೆ ಸಹವಾಸ ಮಾಡುವುದನ್ನು ನಿಲ್ಲಿಸುವಂತೆ ನನಗೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋದರು ಎಂದು ಯುವಕನ ಪೋಷಕರು, ಸಹೋದರಿಯ ಮೇಲೆ ದೂರುದಾರೆ ಆರೋಪಿಸಿದ್ದರು.