ಹಾಲಿನಪುಡಿ ಕಲಬೆರಕೆ: ಮನ್ಮುಲ್ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಬಂಧನ

KannadaprabhaNewsNetwork |  
Published : Oct 06, 2026, 01:45 AM IST
ಮನ್ಮುಲ್ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್ ಬಂಧನ | Kannada Prabha

ಸಾರಾಂಶ

ಮನ್ಮುಲ್‌ನಲ್ಲಿ ನಡೆದಿರುವ ಕೋಟ್ಯಂತರ ರು. ಮೌಲ್ಯದ ಹಾಲಿನ ಪುಡಿ ಕಲಬೆರಕೆ ಪ್ರಕರಣ ಸಂಬಂಧ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್, ಆತನ ಸ್ನೇಹಿತ ಸುರೇಶ್‌ರನ್ನು ಪೊಲೀಸರು ಬಂಧಿಸಿ ಸೋಮವಾರ ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ ಎರಡನೇ ಅಪರ ಸಿವಿಲ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು‌.

ಕನ್ನಡಪ್ರಭ ವಾರ್ತೆ ಮದ್ದೂರು

ಮನ್ಮುಲ್‌ನಲ್ಲಿ ನಡೆದಿರುವ ಕೋಟ್ಯಂತರ ರು. ಮೌಲ್ಯದ ಹಾಲಿನ ಪುಡಿ ಕಲಬೆರಕೆ ಪ್ರಕರಣ ಸಂಬಂಧ ಮಾಜಿ ಅಧ್ಯಕ್ಷ ಯು.ಸಿ.ಶಿವಕುಮಾರ್, ಆತನ ಸ್ನೇಹಿತ ಸುರೇಶ್‌ರನ್ನು ಪೊಲೀಸರು ಬಂಧಿಸಿ ಸೋಮವಾರ ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ ಎರಡನೇ ಅಪರ ಸಿವಿಲ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು‌.

ಹಾಲಿನ ಪುಡಿ ಕಲಬೆರಕೆ ಹಗರಣ ಪ್ರಕರಣದ 9ನೇ ಆರೋಪಿ ಯು.ಸಿ.ಶಿವಕುಮಾರ್ ಮತ್ತು 10ನೇ ಆರೋಪಿಯಾದ ಸುರೇಶ್ ಅವರನ್ನು ಸಂಜೆ 4 ಗಂಟೆ ಸುಮಾರಿಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು‌. ಆರೋಪಿಗಳ ಪರ ಹಿರಿಯ ವಕೀಲ ವಿಶಾಲ್ ರಘು ಹಾಗೂ ಸಹ ವಕೀಲ ಎಂ.ಜೆ.ಸುಮಂತ್ ಅವರ ಪರ ವಕಾಲತ್ತು ವಹಿಸಿ ಜಾಮೀನು ಅರ್ಜಿ ಸಲ್ಲಿಸಲು ನ್ಯಾಯಲಯವನ್ನು ಕೋರಿದರು.

ಈಗಾಗಲೇ ವಿಚಾರಣೆ ನೆಪದಲ್ಲಿ ಪೊಲೀಸರು ಕಳೆದ 5 ದಿನಗಳ ಹಿಂದೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದರು. ಆ ನಂತರ ಖರೀದಿ ಅಧಿಕಾರಿ ಪ್ರದೀಪ್ ಕುಮಾರ್ ಜಾಧವ್ ಅವರನ್ನು ಭಾನುವಾರ ವಶಕ್ಕೆ ಪಡೆದು ಜಾಧವ್ ಹಾಗೂ ಮಾಜಿ ಅಧ್ಯಕ್ಷ ಶಿವಪ್ಪ ಅವರುಗಳನ್ನು ವಿಚಾರಣೆ ನಡೆಸಿದ್ದರು.

ಆ ನಂತರ ಸೋಮವಾರ 11 ಗಂಟೆ ವೇಳೆಗೆ ಪ್ರದೀಪ್ ಕುಮಾರ್ ಜಾಧವ್ ಅವರನ್ನು 2 ನೇ ಅಪರ ಸಿವಿಲ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ಎಸ್‌.ಆರ್.ನಂದಿನಿ ಅವರು ಜಾಧವ್ ಅವರನ್ನು ಅ.16 ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶ ನೀಡಿದರು‌.

ಪ್ರಕರಣದಲ್ಲಿ ಶಿವಪ್ಪ ಇರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಶಿವಕುಮಾರ್ ರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಸೋಮವಾರ ಸಂಜೆ ಪ್ರಕರಣದ ತನಿಖಾಧಿಕಾರಿ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ನವೀನ್ ಹಾಗೂ ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ 2 ನೇ ಅಪರ ಸಿವಿಲ್ ನ್ಯಾಯಾಲಯಕ್ಕೆ ಹಾಜರು ಪಡಿಸಿದರು‌‌.

ಈ ಮಧ್ಯೆ ಸಹಾಯಕ ಸರ್ಕಾರಿ ಅಭಿಯೋಜಕ ಪ್ರೀತಮ್ ಡೇವಿಡ್ ಅವರು ಆರೋಪಿಯನ್ನು ಪೊಲೀಸ್ ವಶಕ್ಕೆ ನೀಡುವಂತೆ ಅರ್ಜಿ ಸಲ್ಲಿಸಿದರು‌‌. ಹೀಗಾಗಿ ಪೊಲೀಸರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ‌.

ಈ ಮಧ್ಯೆ ಹಾಲಿನ ಪುಡಿಯನ್ನು ಖರೀದಿ ಮಾಡಿದ ಕೇರಳ ಮೂಲದ ಇಬ್ಬರು ವ್ಯಕ್ತಿಗಳ ಪೈಕಿ ಸುರೇಶ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಪ್ರಕರಣದ ಪ್ರಮುಖ ಆರೋಪಿ ನಿಧೀಶ್ ಕಳೆದ ಸೆ.7 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಪ್ರಕರಣದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಮನ್ಮುಲ್‌ ಮಾಜಿ ಅಧ್ಯಕ್ಷ ಶಿವಕುಮಾರ್‌ಗೆ ೭೫ ಲಕ್ಷ ರು. ಕೊಟ್ಟಿದ್ದ ಜಾಧವ್..!
ಹಾಲಿನ ಪುಡಿ ಕಲಬೆರಕೆ ಪ್ರಕರಣ: ಮದ್ದೂರು ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ