ಕಾರ್ಮಿಕರಿದ್ದ 45ಕ್ಕೂ ಅಧಿಕ ಶೆಡ್‌ಗಳು ಬೆಂಕಿಗಾಹುತಿ: ಚಾಣಾಕ್ಯ ಲೇಔಟ್‌ನಲ್ಲಿ ಆಕಸ್ಮಿಕ ಅವಘಡ

KannadaprabhaNewsNetwork | Updated : Apr 14 2025, 04:22 AM IST

ಸಾರಾಂಶ

ಆಕಸ್ಮಿಕ ಬೆಂಕಿ ಅವಘಡದಲ್ಲಿ ಕಾರ್ಮಿಕರ ಸುಮಾರು 45ಕ್ಕೂ ಅಧಿಕ ಶೆಡ್‌ಗಳು ಬೆಂಕಿಗಾಹುತಿಯಾಗಿರುವ ಘಟನೆ ಗೋವಿಂದಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಆಕಸ್ಮಿಕ ಬೆಂಕಿ ಅವಘಡದಲ್ಲಿ ಕಾರ್ಮಿಕರ ಸುಮಾರು 45ಕ್ಕೂ ಅಧಿಕ ಶೆಡ್‌ಗಳು ಬೆಂಕಿಗಾಹುತಿಯಾಗಿರುವ ಘಟನೆ ಗೋವಿಂದಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗೋವಿಂದಪುರದ ವೀರಣ್ಣಪಾಳ್ಯ ಮುಖ್ಯರಸ್ತೆಯ ಚಾಣಾಕ್ಯ ಲೇಔಟ್‌ನಲ್ಲಿ ಶನಿವಾರ ರಾತ್ರಿ ಸುಮಾರು 9.30ಕ್ಕೆ ಈ ಘಟನೆ ನಡೆದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರ್ಮಿಕರ ಕೆಲ ವಸ್ತುಗಳು ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಘಟನೆ ವಿವರ?:

ಚಾಣಕ್ಯ ಲೇಔಟ್‌ನ ಚೈತನ್ಯ ಶಾಲೆ ಹಿಂಭಾಗದಲ್ಲಿ ಪ್ರಕಾಶ್ ಪೌಲ್ ಎಂಬುವವರಿಗೆ ಸೇರಿದ ಸುಮಾರು 1.5 ಎಕರೆ ಜಾಗದಲ್ಲಿ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತ ಮೂಲದ ನೂರಕ್ಕೂ ಅಧಿಕ ಕಟ್ಟಡ ಕಾರ್ಮಿಕರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸವಿದ್ದರು. ಜಾಗದ ಮಾಲೀಕ ಪ್ರತಿ ಶೆಡ್‌ಗೆ ಮಾಸಿಕ ಬಾಡಿಗೆ ಪಡೆಯುತ್ತಿದ್ದರು. ಶನಿವಾರ ರಾತ್ರಿ ಸುಮಾರು 9.30ಕ್ಕೆ ಒಂದು ಶೆಡ್‌ನಲ್ಲಿ ಬೆಂಕಿ ಕಾಣಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಅಕ್ಕಪಕ್ಕದ ಶೆಡ್‌ಗಳಿಗೂ ಬೆಂಕಿ ವ್ಯಾಪಿಸಿ ಹೊತ್ತಿ ಉರಿಯಲು ಆರಂಭಿಸಿದೆ. ಈ ವೇಳೆ ಶೆಡ್‌ನಲ್ಲಿದ್ದ ಕಾರ್ಮಿಕರು ತಕ್ಷಣ ಕೈಗೆ ಸಿಕ್ಕ ಕೆಲ ವಸ್ತುಗಳನ್ನು ತೆಗೆದುಕೊಂಡು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

ದೇವಾಲಯಗಳು, ಪಾರ್ಕ್‌ಗಳಲ್ಲಿ ಆಶ್ರಯ:

ವಿಷಯ ತಿಳಿದು 4 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಸುಮಾರು ಎರಡು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಈ ಬೆಂಕಿ ಅವಘಡದಿಂದ 45ಕ್ಕೂ ಅಧಿಕ ಶೆಡ್‌ಗಳು ಬಹುತೇಕ ಸುಟ್ಟು ಭಸ್ಮವಾಗಿವೆ. ಕಾರ್ಮಿಕರು ಸಮೀಪದ ದೇವಾಲಯಗಳು ಹಾಗೂ ಪಾರ್ಕ್‌ಗಳಲ್ಲಿ ಉಳಿದುಕೊಂಡು ರಾತ್ರಿ ಕಳೆದಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸಾಮಾನ್ಯವಾಗಿ ಕಾರ್ಮಿಕರು ಶೆಡ್‌ ಹೊರಗೆ ಕಟ್ಟಿಗೆಗಳಿಂದ ಅಡುಗೆ ಮಾಡುತ್ತಾರೆ. ಈ ವೇಳೆ ಅಡುಗೆ ಮಾಡುವಾಗ ಬೆಂಕಿ ಕಿಡಿ ಶೆಡ್‌ವೊಂದಕ್ಕೆ ತಾಕಿ ಬೆಂಕಿ ಹೊತ್ತಿಕೊಂಡು ಬಳಿಕ ಅಕ್ಕಪಕ್ಕದ ಶೆಡ್‌ಗಳಿಗೂ ಬೆಂಕಿ ವ್ಯಾಪಿಸಿರುವ ಸಾಧ್ಯತೆಯಿದೆ. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article