ದಾಸರಹಳ್ಳಿ : ಗಂಡನ ಜೊತೆ ಪ್ರತಿದಿನ ಜಗಳಕ್ಕೆ ಬೇಸತ್ತು ಮಹಿಳೆಯೊಬ್ಬಳು ತನ್ನ 5 ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆ ಜಿ ಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಹಾಲಕ್ಷ್ಮೀ (28) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. 5 ವರ್ಷದ ಮಗಳು ಸಿರಿ ಮೃತ ಬಾಲಕಿ. 8 ವರ್ಷದ ಹಿಂದೆ ಜಯರಾಮ್ ಎಂಬುವರೊಂದಿಗೆ ಮಹಾಲಕ್ಷ್ಮೀ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಎರಡು ವರ್ಷದಿಂದ ಜಯರಾಮ್ ಕೆಲಸವಿಲ್ಲದೆ ಮದ್ಯವ್ಯಸನಿಯಾಗಿ ಮನೆಯಲ್ಲೇ ಇದ್ದ. ಇದರಿಂದಾಗಿ ಮನೆಯಲ್ಲಿ ಆಗಾಗ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು. ಬುಧವಾರ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ರೂಮ್‌ಗೆ ಹೋಗಿ ಮಹಾಲಕ್ಷ್ಮೀ ಬಾಗಿಲು ಹಾಕಿಕೊಂಡಿದ್ದಳು. ಸಿಟ್ಟಿನಿಂದ ಮಗಳ ಕತ್ತು ಹಿಸುಕಿ ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ.
ಇದನ್ನರಿತ ಮನೆಯವರು ಬಾಗಿಲು ಒಡೆದು ಒಳಹೊಕ್ಕು ತಾಯಿ ಮಹಾಲಕ್ಷ್ಮಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್ ಪಿ ಡಾ.ವೆಂಕಟೇಶ್ ಪ್ರಸನ್ನ, ಸಿಪಿಐ ಮುರಳಿ ಭೇಟಿ ಪರಿಶೀಲನೆ ಮಾಡಿದ್ದಾರೆ. ಪತಿ ಜಯರಾಮ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.