ಇಬ್ಬರು ಮಕ್ಕಳೊಂದಿಗೆ ನಾಲೆಗೆ ಬಿದ್ದ ತಾಯಿ ಪಾರು: ಮಕ್ಕಳು ಸಾವು..!

KannadaprabhaNewsNetwork |  
Published : Jan 29, 2025, 01:31 AM IST
28ಕೆಎಂಎನ್‌ಡಿ-8 ಮೃತ ಲಿತಿಷಾ, ಕಿಶನ್‌ | Kannada Prabha

ಸಾರಾಂಶ

ಗೃಹಿಣಿಯೊಬ್ಬರು ತನ್ನ ಎರಡು ಮಕ್ಕಳೊಂದಿಗೆ ನಾಲೆಗೆ ಬಿದ್ದ ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಟ್ಟಣದ ಹಾರೋಹಳ್ಳಿ ಗ್ರಾಮದ ನಿವಾಸಿ ಧನಂಜಯ್ ಎಂಬುವರ ಪತ್ನಿ ವಿದ್ಯಾ (30) ಗೃಹಿಣಿ ಬದುಕುಳಿದಿದ್ದು, ತಮ್ಮ ಇಬ್ಬರು ಮಕ್ಕಳಾದ ಲಿತಿಷ (8), ಕಿಶನ್(2) ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಗೃಹಿಣಿಯೊಬ್ಬರು ತನ್ನ ಎರಡು ಮಕ್ಕಳೊಂದಿಗೆ ನಾಲೆಗೆ ಬಿದ್ದ ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಟ್ಟಣದ ಹಾರೋಹಳ್ಳಿ ಗ್ರಾಮದ ನಿವಾಸಿ ಧನಂಜಯ್ ಎಂಬುವರ ಪತ್ನಿ ವಿದ್ಯಾ (30) ಗೃಹಿಣಿ ಬದುಕುಳಿದಿದ್ದು, ತಮ್ಮ ಇಬ್ಬರು ಮಕ್ಕಳಾದ ಲಿತಿಷ (8), ಕಿಶನ್(2) ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮಕ್ಕಳ ಮೃತ ದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

ಹಾರೋಹಳ್ಳಿ ಗ್ರಾಮದ‌ ನಿವಾಸಿ ಧನಂಜಯ್ ಅವರು ಖಾಸಗಿ‌ ಫೈನಾನ್ಸ್ ಕಂಪನಿಯೊಂದರಲ್ಲಿ ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಧನಂಜಯ್ ಅವರ ಪತ್ನಿ ವಿದ್ಯಾ ಅವರು ತನ್ನ ಇಬ್ಬರು ಮಕ್ಕಳೊಂದಿಗೆ ತಾಲೂಕಿನ ಬನಘಟ್ಟ ಗೇಟ್ ಸಮೀಪದ ವಿಸಿ ನಾಲೆಯ ಬಳಿ ತೆರಳಿದ್ದಾರೆ. ಬೈಕ್ ಅನ್ನು ನಾಲೆಯ ಏರಿಯ ಮೇಲೆ ನಿಲ್ಲಿಸಿ ವಿ.ಸಿ.ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ವಿದ್ಯಾ ಅವರು ನಾಲೆಯಲ್ಲಿ ಮುಳುಗುತ್ತಿದ್ದನ್ನು ಕಂಡ ಸ್ಥಳೀಯರು ನಾಲೆಗೆ ಹಾರಿ ವಿದ್ಯಾಳನ್ನು ಬದುಕಿಸಿದ್ದಾರೆ, ತಮ್ಮ ಇಬ್ಬರು‌ ಮಕ್ಕಳು ನಾಲೆಯ ಮುಳುಗಿ‌ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.

ಪ್ರಾಣಾಪಾಯದಿಂದ ಪಾರಾಗಿರುವ ವಿದ್ಯಾ ನಾನು ಮತ್ತು ಮಕ್ಕಳು ನಾಲೆಯ ಏರಿಯ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ನಾಲೆಗೆ ಬಿದ್ದಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ಸೆಲ್ಫಿ ತೆಗೆದುಕೊಳ್ಳುವುದಕ್ಕಾಗಿ ಹಾರೋಹಳ್ಳಿಯಿಂದ ಬನಘಟ್ಟ ಬಳಿ ಯಾಕೆ ಹೋಗಿದ್ದರು ಎನ್ನುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ವಿದ್ಯಾ ಉಪಯೋಗಿಸುತ್ತಿದ್ದ ಬೈಕ್ ಮತ್ತು ಮೊಬೈಲ್ ಎರಡನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ವಿಸಿ ನಾಲೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಮಕ್ಕಳ‌ ಮೃತ ದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ‌.

ಮೃತ ಮಕ್ಕಳ ತಂದೆ ಧನಂಜಯ್ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡುವುದು ತಡವಾಗಿರುವುದು ಘಟನೆ ಸಂಬಂಧ ಪ್ರಕರಣ ದಾಖಲಾಗಿಲ್ಲ.

ಆಕ್ರಂದನ:

ಪುಟಾಣಿ‌ ಮಕ್ಕಳನ್ನು ಕಳೆದುಕೊಂಡಿರುವ ಪೋಷಕರ ಮನೆಯಲ್ಲಿ ಆಕ್ರಂದನ ಮುಗಿಲು‌ ಮುಟ್ಟಿದೆ. ಪೋಷಕರ ಗೋಳಾಟ ಮನಕಲುಕುವಂತಿತ್ತು.

PREV

Recommended Stories

ತಾಯಿಗೆ ಕ್ಷಮೆ ಕೋರಿ ಪತ್ರ ಬರೆದಿಟ್ಟು ನೇ*ಗೆ ಶರಣಾದ ಕನ್ನಡ ಗಾಯಕಿ ಸವಿತಾ ಮಗ
ಐಎಸ್‌ಡಿ ಕರೆಗಳ ಗೋಲ್‌ಮಾಲ್‌ : ಕೋಟ್ಯಂತರ ರು. ವಂಚಿಸಿದ್ದ ಇಬ್ಬರ ಬಂಧನ