ಆಂಧ್ರದಿಂದ ಬಂದು ಸರ ಕದಿಯುತ್ತಿದ್ದ ಐವರು ಅಂದರ್‌

KannadaprabhaNewsNetwork | Published : Jan 29, 2025 1:30 AM

ಸಾರಾಂಶ

ಆಂಧ್ರದಿಂದ ಬಂದು ನಗರದಲ್ಲಿ ಸರ ಕಸಿದು ಪರಾರಿ ಆಗುತ್ತಿದ್ದ ಐವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆ ಹಾಗೂ ಸರಗಳ್ಳತನ ಕೃತ್ಯಗಳಲ್ಲಿ ತೊಡಗಿದ್ದ ಓರ್ವ ಮಹಿಳೆ ಸೇರಿದಂತೆ ಆರು ಮಂದಿಯನ್ನು ಕೊಡಿಗೇಹಳ್ಳಿ ಹಾಗೂ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಅಬಿತಾವರ್‌, ಅಬ್ಪಾಸ್‌, ಸಾದಿಕ್ ಹಾಗೂ ಸಿರಾಜ್‌ನನ್ನು ಸೆರೆ ಹಿಡಿದಿರುವ ಕೊಡಿಗೇಹಳ್ಳಿ ಠಾಣೆ ಪೊಲೀಸರು, ಆರೋಪಿಗಳಿಂದ ₹28 ಲಕ್ಷ ಮೌಲ್ಯದ 450 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಈ ನಾಲ್ವರು ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಇವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇವರಿಂದ ಕಳವು ಮಾಲು ಸ್ವೀಕರಿಸಿದ್ದ ಇಬ್ಬರು ಚಿನ್ನಾಭರಣ ವ್ಯಾಪಾರಿಗಳು ಬಂಧಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದಿಂದ ನಗರಕ್ಕೆ ಬಂದು ಸರ ಅಪಹರಿಸಿ ಆರೋಪಿಗಳು ಪರಾರಿಯಾಗುತ್ತಿದ್ದರು. ಇತ್ತೀಚೆಗೆ ನಗರದಲ್ಲಿ ವರದಿಯಾದ ಸರಗಳ್ಳತನ ಕೃತ್ಯಗಳ ತನಿಖೆಗಿಳಿದಾಗ ಈ ನಾಲ್ವರ ಸುಳಿವು ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ.ದೇವಾಲಯದಲ್ಲಿ ಸರ ಎಗರಿಸಿದ್ದ ಕಳ್ಳಿ ಸೆರೆ

ಇತ್ತೀಚೆಗೆ ಭಕ್ತರ ಸೋಗಿನಲ್ಲಿ ಬಂದು ಬನಶಂಕರಿ ದೇವಾಲಯದಲ್ಲಿ ಮಹಿಳೆಯೊಬ್ಬರಿಂದ ಸರ ಕಳವು ಮಾಡಿದ್ದ ಕಿಡಿಗೇಡಿ ಮಹಿಳೆ ಕುಮಾರಸ್ವಾಮಿ ಲೇಔಟ್ ಬಲೆಗೆ ಬಿದ್ದಿದ್ದಾಳೆ. ಬಂಧಿತ ಸುಭದ್ರಾ ಮೂಲತಃ ತಮಿಳುನಾಡು ರಾಜ್ಯದವಳಾಗಿದ್ದು, ಆರೋಪಿಯಿಂದ ₹9 ಲಕ್ಷ ಮೌಲ್ಯದ 121 ಗ್ರಾಂ ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆಕೆಯ ಸಹಚರರ ಪತ್ತೆಗೆ ತನಿಖೆ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಬನಶಂಕರಿ ದೇವಾಲಯಕ್ಕೆ ಪ್ರಗತಿಪುರ ಬಡಾವಣೆಯ ಮಹಿಳೆಯೊಬ್ಬರು ತೆರಳಿದ್ದಾಗ ಸರಗಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ದೇವಾಲಯದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿಚಾರಣೆ ವೇಳೆ ಮತ್ತೆರಡು ಸರಗಳ್ಳತನ ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Share this article