ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಭೀಕರ ಹತ್ಯೆ ಕೇಸ್‌: ಮೃತಳ ಸ್ನೇಹಿತ ಖಾಕಿ ವಶಕ್ಕೆ

KannadaprabhaNewsNetwork |  
Published : Sep 23, 2024, 01:24 AM ISTUpdated : Sep 23, 2024, 04:55 AM IST
 MURDER CASE NEWS1

ಸಾರಾಂಶ

ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಹತ್ಯೆ ಪ್ರಕರಣದಲ್ಲಿ ಅನೈತಿಕ ಸಂಬಂಧ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತಳ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ 

 ಬೆಂಗಳೂರು : ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಭೀಕರ ಹತ್ಯೆಗೆ ಅನೈತಿಕ ಸಂಬಂಧ ಕಾರಣವಿರಬಹುದು ಎಂದು ಶಂಕಿಸಿರುವ ಪೊಲೀಸರು, ಈ ಸಂಬಂಧ ಮೃತಳ ಸ್ನೇಹಿತನೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಮೃತಳ ಮನೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳು ಹಾಗೂ ಆಕೆಯ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಹಂತಕನ ಸುಳಿವು ಪೊಲೀಸರಿಗೆ ಸಿಕ್ಕಿದೆ. ಈ ಕೃತ್ಯವನ್ನು ಮೃತಳ ಆತ್ಮೀಯ ಸ್ನೇಹಿತನೇ ನಡೆಸಿರುವುದು ಖಚಿತವಾಗಿದ್ದು, ಶಂಕೆ ಮೇರೆಗೆ ಆಕೆಯ ಆಪ್ತ ಒಡನಾಡಿಗಳನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಮ್ಮ ಪತಿಯಿಂದ ಒಂಬತ್ತು ತಿಂಗಳ ಹಿಂದೆಯೇ ಪ್ರತ್ಯೇಕವಾಗಿದ್ದ ಮಹಾಲಕ್ಷ್ಮೀ, ನಂತರ ವೈಯಾಲಿಕಾವಲ್ ಸಮೀಪ ಪ್ರತಿಷ್ಠಿತ ಮಾರಾಟ ಮಳಿಗೆಯಲ್ಲಿ ಸೇಲ್ಸ್ ಗರ್ಲ್ಸ್‌ ಆಗಿದ್ದಳು. ಆ ವೇಳೆ ಆಕೆಗೆ ಯುವಕನ ಜತೆ ಸ್ನೇಹ ಬೆಳೆದಿತ್ತು. ಈ ಸ್ನೇಹದಲ್ಲಿ ಮೂಡಿದ ಮನಸ್ತಾಪವೇ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ತನ್ನ ಪತಿಯಿಂದ ದೂರವಾಗಿದ್ದ ಕಾರಣಕ್ಕೆ ಮಹಾಲಕ್ಷ್ಮೀ ಜತೆ ಆಕೆಯ ಪೋಷಕರು ಸಹ ಮುನಿಸಿಕೊಂಡಿದ್ದರು. ಹೀಗಾಗಿ ವೈಯಾಲಿಕಾವಲ್‌ನಲ್ಲಿ ಆಕೆ ಏಕಾಂಗಿಯಾಗಿ ನೆಲೆಸಿದ್ದಳು. ತನ್ನ ಸಹೋದ್ಯೋಗಿಗಳ ಜತೆ ಖುಷಿಯಿಂದಲೇ ಇದ್ದ ಆಕೆ, ತನ್ನ ವೈಯಕ್ತಿಕ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಸೆ.12ರಂದು ಆಕೆಯ ಮೊಬೈಲ್ ಸ್ವಿಚ್ಡ್‌ ಆಫ್ ಆಗಿದೆ. ಅಂದು ಆಕೆಯ ಮನೆಗೆ ಬಂದಿರುವ ಪರಿಚಿತನಿಂದಲೇ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಸಾವಿಗೂ ಮುನ್ನ ಗಲಾಟೆ?

ಮಹಾಲಕ್ಷ್ಮೀ ಮನೆಗೆ ಬಲವಂತವಾಗಿ ಆರೋಪಿ ಪ್ರವೇಶಿಸಿಲ್ಲ. ಅಲ್ಲದೆ ಹತ್ಯೆಗೂ ಮುನ್ನ ತನ್ನ ಮೇಲೆ ಹಲ್ಲೆ ನಡೆಸಲು ಮುಂದಾದ ಆರೋಪಿಗೆ ಮಹಾಲಕ್ಷ್ಮೀ ಪ್ರತಿರೋಧ ತೋರಿದ್ದಾಳೆ. ಆ ವೇಳೆ ಆತನ ಕೈ ಕಚ್ಚಿ, ಮೈ ಪರಚಿ ಆಕೆ ಗಲಾಟೆ ಮಾಡಿದ್ದಾಳೆ ಎಂಬುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಮಾಂಸ ಕತ್ತರಿಸುವ ಚಾಕು

ತನಗೆ ತೀವ್ರ ಪ್ರತಿರೋಧಿಸಿದ್ದ ಮಹಾಲಕ್ಷ್ಮೀ ಮೇಲೆ ಸಿಟ್ಟಿಗೆದ್ದು ಚಾಕುವಿನಿಂದ ಇರಿದು ಬಳಿಕ ಮಾಂಸ ಕತ್ತರಿಸುವ ಚಾಕುವಿನಿಂದ ಆಕೆಯ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ ಆರೋಪಿ ಭೀಕರವಾಗಿ ಕೊಂದಿದ್ದಾನೆ ಎನ್ನಲಾಗಿದೆ.

ಬಿಡಿ ಬಿಡಿ ಭಾಗಳ ಆಯ್ದು ಪರೀಕ್ಷೆ

ಮಹಾಲಕ್ಷ್ಮೀ ಮೃತದೇಹವನ್ನು 30ಕ್ಕೂ ಹೆಚ್ಚುಬಾರಿ ತುಂಡಾಗಿಸಿ ಫ್ರಿಜ್ಜ್‌ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದ. ಈ ಮೃತದೇಹದ ಭಾಗಗಳನ್ನು ಆಯ್ದು ಬಳಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದರು. ಚೀಲದಲ್ಲಿ ತುಂಬಿದ್ದ ದೇಹದ ಬಿಡಿ ಭಾಗಗಳನ್ನು ಮರು ಜೋಡಿಸಿ ಮರಣೋತ್ತರ ಪರೀಕ್ಷೆ ನಡೆಸುವುದು ವೈದ್ಯರಿಗೆ ಸವಾಲಾಗಿತ್ತು ಎಂದು ತಿಳಿದು ಬಂದಿದೆ.

ಮೃತದೇಹ ಹಸ್ತಾಂತರ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಈ ವೇಳೆ ಮೃತಳ ಕುಟುಂಬದವರು ಆಕ್ರಂದನ ಮುಗಿಲು ಮುಟ್ಟಿತು.

ಮಹಾಲಕ್ಷ್ಮೀ ಕೊಲೆಗೆ ಅಕ್ರಮ ಸಂಬಂಧ ಶಂಕೆ: ಪತಿ ಹೇಳಿಕೆ

ನನ್ನ ಪತ್ನಿ ಮಹಾಲಕ್ಷ್ಮೀ ಹತ್ಯೆ ಕೃತ್ಯದಲ್ಲಿ ಆಕೆಯೊಂದಿಗೆ ಅಕ್ರಮ ಸಂಬಂಧ   ಹೊಂದಿದ್ದ ಉತ್ತರಖಾಂಡ್ ಮೂಲದ ಆಶ್ರಫ್ ಮೇಲೆ ನನಗೆ ಅನುಮಾನವಿದೆ ಎಂದು ಮೃತಳ ಪತಿ ಹೇಮಂತ್ ದಾಸ್ ಶಂಕೆ ವ್ಯಕ್ತಪಡಿಸಿದ್ದಾರೆ. 

ವೈಯಾಲಿಕಾವಲ್‌ನಲ್ಲಿ ಒಂಟಿಯಾಗಿದ್ದ ತನ್ನ ಪತ್ನಿ ಹತ್ಯೆ ಸಂಬಂಧ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದಿನಗಳಿಂದ ಆಶ್ರಫ್ ಜತೆ ಮಹಾಲಕ್ಷ್ಮೀಗೆ ಸ್ನೇಹವಿತ್ತು. ಮೊಬೈಲ್‌ನಲ್ಲಿ ಆತನೊಂದಿಗೆ ಆಕೆ ಸಿಕ್ಕಾಪಟ್ಟೆ ಮಾತಾಡುತ್ತಿದ್ದಳು. ಅಶ್ರಫ್ ಮತ್ತು ಮಹಾಲಕ್ಷ್ಮೀ ನಡುವೆ ಅಕ್ರಮ ಸಂಬಂಧವಿತ್ತು. ಈ ಬಗ್ಗೆ ಕೇವಲ ಶಂಕೆ ವ್ಯಕ್ತಪಡಿಸಿಲ್ಲ. ಈ ಅಕ್ರಮ ಸಂಬಂಧ ಕುರಿತು ಖಚಿತವಾದ ಮಾಹಿತಿ ಸಂಗ್ರಹಿಸಿದ್ದೆ. ಅಲ್ಲದೆ ನೆಲಮಂಗಲ ಠಾಣೆಯಲ್ಲಿ ಆತನ ವಿರುದ್ಧ ದೂರ ಸಹ ಕೊಟ್ಟಿದ್ದೆ. 

2 ದಿನಗಳ ಹಿಂದೆ ನನಗೆ ಮನೆಯಲ್ಲಿ ದುರ್ವಾಸನೆ ಬರುತ್ತಿದೆ ಎಂದು ಹೇಳಿ ಮಹಾಲಕ್ಷ್ಮೀ ಬಾಡಿಗೆ ಇದ್ದ ಮಾಲಿಕರು ಕರೆ ಮಾಡಿದ್ದರು. ಮೃತಳ ಸೋದರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅಂತೆಯೇ ಶನಿವಾರ ಮಧ್ಯಾಹ್ನ ಮೃತಳ ಸೋದರಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ವಿವರಿಸಿದರು. ಮಹಾಲಕ್ಷ್ಮೀ ಕುಟುಂಬದವರು ಮೂಲತಃ ನೇಪಾಳ ದೇಶದವರಾಗಿದ್ದು, 35 ವರ್ಷಗಳ ಹಿಂದೆಯೇ ಉದ್ಯೋಗ ಅರಸಿ ನಗರಕ್ಕೆ ಅವರ ತಂದೆ ಬಂದಿದ್ದರು. ಐದು ವರ್ಷಗಳ ಹಿಂದೆ ಎರಡು ಕುಟುಂಬಗಳು ಒಪ್ಪಿಗೆ ಮೇರೆಗೆ ಮದುವೆಯಾಗಿದ್ದವು. ನೆಲಮಂಗಲದಲ್ಲಿ ಮೊಬೈಲ್ ಮಾರಾಟ ಮಳಿಗೆ ಇಟ್ಟಿದ್ದೇನೆ ಎಂದು ತಿಳಿಸಿದರು.

ಕೌಟುಂಬಿಕ ವಿಚಾರವಾಗಿ ಮಹಾಲಕ್ಷ್ಮೀ ಮತ್ತು ನನ್ನ ನಡುವೆ ಮನಸ್ತಾಪವಾಯಿತು. ನನ್ನೊಂದಿಗೆ ಜೀವನ ಮಾಡಲು ಸಾಧ್ಯವಿಲ್ಲವೆಂದು ನೆಲಮಂಗಲ ಪೊಲೀಸ್ ಠಾಣೆಗೆ ಆಕೆಯೇ ದೂರು ಕೊಟ್ಟಿದ್ದಳು. ಈ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 9 ತಿಂಗಳ ಹಿಂದೆ ನಾವು ಪ್ರತ್ಯೇಕವಾಗಿದ್ದವು. ನಾಲ್ಕು ತಿಂಗಳು ಮಹಾಲಕ್ಷ್ಮೀ ಜತೆ ಮಗ ಇದ್ದ. ನಂತರ ನನ್ನ ಬಳಿಗೆ ಮಗ ಬಂದನು.

 ಕಳೆದ ಆರು ತಿಂಗಳಿಂದ ನನ್ನೊಂದಿಗೆ ಮಗ ನೆಲೆಸಿದ್ದಾನೆ ಎಂದು ಹೇಮಂತ್ ದಾಸ್ ವಿವರಿಸಿದರು. ತಿಂಗಳಿಗೊಮ್ಮೆ ನೆಲಮಂಗಲದಲ್ಲಿರುವ ನನ್ನ ಮೊಬೈಲ್‌ ಅಂಗಡಿಗೆ ಬಂದು ಮಗನ ಜತೆ ಮಾತನಾಡಿ ಮಹಾಲಕ್ಷ್ಮೀ ಹೋಗುತ್ತಿದ್ದಳು. ಆದರೆ ಪ್ರಸ್ತುತ ತನ್ನ ಬದುಕಿನ ಕುರಿತು ನನ್ನ ಜತೆ ಆಕೆ ಮಾತನಾಡುತ್ತಿರಲಿಲ್ಲ. ನಾನು ವಿಚಾರಿಸುತ್ತಿರಲಿಲ್ಲ ಎಂದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರೌಡಿ ಹತ್ಯೆ: ಯಾವುದೇ ಕ್ಷಣ ಶಾಸಕ ಬೈರತಿ ಸೆರೆ
ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು