ಅಕ್ರಮ ಚಟುವಟಿಕೆಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಆರೋಪದ ಮೇರೆಗೆ ಅಪಾರ್ಟ್‌ಮೆಂಟ್‌ವೊಂದರ ನಿವಾಸಿಗಳ ಸಂಘ ಹಾಗೂ ಸೆಕ್ಯೂರಿಟಿ ಏಜೆನ್ಸಿ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಕ್ರಮ ಚಟುವಟಿಕೆಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಆರೋಪದ ಮೇರೆಗೆ ಅಪಾರ್ಟ್‌ಮೆಂಟ್‌ವೊಂದರ ನಿವಾಸಿಗಳ ಸಂಘ ಹಾಗೂ ಸೆಕ್ಯೂರಿಟಿ ಏಜೆನ್ಸಿ ವಿರುದ್ಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ದೊಡ್ಡಬೆಲೆಯಲ್ಲಿರುವ ಪ್ರಾವಿಡೆಂಟ್ ಸನ್ ವರ್ತ್ ಅಪಾರ್ಟಮೆಂಟ್ ಹಾಗೂ ಟೈಕೋ ಸೆಕ್ಯೂರಿಟಿ ಸಂಸ್ಥೆ ಮೇಲೆ ಆರೋಪ ಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ಆರೋಪಿತರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸನ್ ವರ್ತ್ ಅಪಾರ್ಟ್‌ಮೆಂಟ್‌ನಲ್ಲಿ ಆ ಪ್ರದೇಶದಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳು ನೆಲೆಸಿದ್ದಾರೆ. ಅದರಲ್ಲಿ ಬಹುತೇಕರು ಹೊರ ರಾಜ್ಯದ ವಿದ್ಯಾರ್ಥಿಗಳಿದ್ದಾರೆ. ಅಪಾರ್ಟಮೆಂಟ್‌ನಲ್ಲಿ ಲೈಂಗಿಕ ದೌರ್ಜನ್ಯ, ಕಳ್ಳತನ ಹಾಗೂ ಮಾದಕ ವಸ್ತುಗಳ ಸೇವನೆ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಮಾಹಿತಿ ಇದೆ ಎಂದು ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ತಿಳಿಸಿದ್ದಾರೆ.ಇಂಥ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ಅಪಾರ್ಟಮೆಂಟ್‌ನ ಅಸೋಸಿಯೇಷನ್‌ವರು ತಮ್ಮದೇ ಆದ ನಿಯಮ ರೂಪಿಸಿ ದಂಡ ವಿಧಿಸುತ್ತಿದ್ದರು. ಇದಕ್ಕೆ ಅಪಾರ್ಟಮೆಂಟ್‌ನ ವಾಸಿಗಳಿಗೆ ಸೆಕ್ಯೂರಿಟಿ ನೀಡುವಂತಹ ಟೈಕೋ ಸೆಕ್ಯೂರಿಟಿ ಸಂಸ್ಥೆಯವರು ಸಹಕರಿಸಿದ್ದಾರೆ. ಆರೋಪದಲ್ಲಿ ಭಾಗಿಯಾಗಿರುವವರನ್ನು ಕಾನೂನು ಬಾಹಿರವಾಗಿ ವಿಚಾರಣೆ ನಡೆಸಿ 25 ರಿಂದ 30 ಸಾವಿರ ರು. ವರೆಗೆ ದಂಡವನ್ನು ಸಂಗ್ರಹಿಸಿದ್ದಾರೆ. ಹೀಗೆ ದಂಡ ಪಾವತಿಸಿದವರನ್ನು ಹಾಗೇ ಬಿಟ್ಟು ಬಿಡುತ್ತಿದ್ದರು. ಈ ಅಕ್ರಮ ಕೃತ್ಯಗಳ ಬಗ್ಗೆ ಪೊಲೀಸರಿಗೆ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘ ಹಾಗೂ ಸೆಕ್ಯೂರಿಟಿ ಏಜೆನ್ಸಿ ಮಾಹಿತಿ ನೀಡದೆ ಮುಚ್ಚಿ ಹಾಕುತ್ತಿದ್ದರು. ಇದರಿಂದ ನೊಂದವರಿಗೆ ನ್ಯಾಯ ದೊರಕದಂತೆ ಮಾಡಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾನೂನು ಉಲ್ಲಂಘನೆ ಮಾಡುವವರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಆರೋಪದ ಮೇರೆಗೆ ಪ್ರಾವಿಡೆಂಟ್ ಸನ್ ವರ್ತ್ ಅಪಾರ್ಟಮೆಂಟ್ ಅಸೋಸಿಯೇಷನ್ ಹಾಗೂ ಅಪಾರ್ಟ್‌ಮೆಂಟ್‌ಗೆ ಸೆಕ್ಯೂರಿಟಿ ನೀಡಿದ ಟೈಕೋ ಸೆಕ್ಯೂರಿಟಿಯ ಮೇಲೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.