)
-16 ವರ್ಷಗಳ ಹಿಂದಿನ ಮಹಿಳೆ ಕೊಲೆ ಕೇಸ್ । ಮೃತಳ ಮಕ್ಕಳು ಸೇರಿ 9 ಮಂದಿ ದೋಷಮುಕ್ತ
ಆಸ್ತಿ ಆಸೆಗೆ ಮಹಿಳೆಯನ್ನು ಕೊಲೆಗೈದ ಆರೋಪದಿಂದ ಆಕೆಯ ಎರಡನೇ ಪತಿಯ ಮಕ್ಕಳು ಹಾಗೂ ಮೊಮ್ಮಗ ಸೇರಿದಂತೆ ಒಂಬತ್ತು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ನಗರದ 60ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಜಯನಗರದ ಒಂದನೇ ಬ್ಲಾಕ್‌ನಲ್ಲಿ 17 ವರ್ಷಗಳ ಹಿಂದೆ ನಡೆದಿದ್ದ ಪದ್ಮಾ (60) ಎಂಬಾಕೆಯ ಕೊಲೆ ಪ್ರಕರಣವನ್ನು ಸುದೀರ್ಘ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶ ಎಸ್.ಮಲ್ಲಿಕಾರ್ಜುನ ಸ್ವಾಮಿ ಅವರು ಪ್ರಕಟಿಸಿದ್ದಾರೆ. ಆರೋಪಿಗಳ ವಿರುದ್ಧದ ಆಪಾದನೆ ಸಾಬೀತುಪಡಿಸುವಲ್ಲಿ ತನಿಖಾಧಿಕಾರಿಗಳು ವಿಫಲವಾಗಿದ್ದಾರೆ. ಹಾಗಾಗಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿ ಶಿಕ್ಷಿಸಲು ಆಗುವುದಿಲ್ಲ ಎಂದು ನ್ಯಾಯಾಲಯ ಎಲ್ಲಾ ಒಂಬತ್ತು ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.ಕೊಲೆ ಆರೋಪದಡಿ ವಿಚಾರಣೆ ಎದುರಿಸಿದ್ದ ಕೊಲೆಗೀಡಾಗಿರುವ ಪದ್ಮಾ ಅವರ ದಿ.ಪತಿ ಪಿ.ಕೃಷ್ಣ ಅವರ ಮಕ್ಕಳಾದ ಶಬರಿ, ಮಂಜ, ಗೋಪಿ ಮತ್ತು ಮೊಮ್ಮಗ ಸುನೀಲ್ ಹಾಗೂ ಅವರ ಸಹಚರರಾದ ರಮೇಶ, ನಾಗೇಂದ್ರ, ಸಂತೋಷ್, ಸೋಮಶೇಖರ್ ಮತ್ತು ವೆಂಕಟೇಶ್ ಖುಲಾಸೆಗೊಂಡವರು.
2009ರ ಅ.8ರಂದು ಪದ್ಮಾ ನಾಪತ್ತೆಯಾಗಿದ್ದರು. ತನ್ನ ತಾಯಿ ಮನೆಗೆ ಹಿಂತಿರುಗದ ಕಾರಣ ಶಿಲ್ಪಾ (ಪದ್ಮಾ ಅವರ ಮೊದಲನೆಯ ಗಂಡನ ಮಗಳು) ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು, 2009ರ ಅ.22ರಂದು ಮಹದೇವಪುರ ಬಳಿ ಕಾವೇರಿ ನದಿಯ ತೀರದ ಪೊದೆಯಲ್ಲಿ ಗೋಣಿ ಚೀಲದಲ್ಲಿದ್ದ ಪದ್ಮಾ ಶವ ಪತ್ತೆಹಚ್ಚಿದ್ದರು. ಪದ್ಮಾ ಅವರು 2009ರ ಅ.8ರಂದು ಬೆಳಗ್ಗೆ 11-45ರಲ್ಲಿ ತಿಲಕ ನಗರದ ಎಲ್‌ಐಸಿ ಕಾಲೋನಿಯ ಬಿಬಿಎಂಪಿ ಕಚೇರಿ ಮುಂಭಾಗದಿಂದ ಅಪಹರಿಸಿ ಹುಸ್ಕೂರಿನ ತೋಟದ ಮನೆಗೆ ಹೊತ್ತೊಯ್ದು, ಅಲ್ಲಿಯೇ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ನಂತರ ಹೆಣವನ್ನು ಗೋಣಿ ಚೀಲದಲ್ಲಿ ಹಾಕಿ ಮೂಟೆಯನ್ನು ಶ್ರೀರಂಗಪಟ್ಟಣದ ಗಂಜಾಂ ನಲ್ಲಿರುವ ನಿಮಿಷಾಂಬ ದೇವಸ್ಥಾನದ ಬಳಿ ಸೇತುವೆಯ ಮೇಲಿಂದ ಕಾವೇರಿ ನದಿಗೆ ಬಿಸಾಡಿದ ಆರೋಪ ಆರೋಪಿಗಳ ಮೇಲಿತ್ತು. ಕೆಲ ಆರೋಪಿಗಳ ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ವಾದ ಮಂಡಿಸಿದ್ದರು.