ಮುತ್ತಪ್ಪ ರೈ ಪುತ್ರನ ಮೇಲೆ ಭೀಕರ ರೀತಿ ಗುಂಡಿನ ದಾಳಿ - ಬಿಡದಿಯಲ್ಲಿ ಘಟನೆ । ಸ್ವಲ್ಪದರಲ್ಲೇ ಪಾರು

ಸಾರಾಂಶ

ಭೂಗತ ಲೋಕದ ಮಾಜಿ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ಶುಕ್ರವಾರ ರಾತ್ರಿ ಆಗಂತುಕರು ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 ರಾಮನಗರ : ಭೂಗತ ಲೋಕದ ಮಾಜಿ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ಶುಕ್ರವಾರ ರಾತ್ರಿ ಆಗಂತುಕರು ಎರಡು ಸುತ್ತು ಗುಂಡಿನ ದಾಳಿ ನಡೆಸಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ಬೆನ್ನಲ್ಲೇ ಮುತ್ತಪ್ಪ ರೈ ಅವರ 2ನೇ ಪತ್ನಿ ಅನುರಾಧ, ಮಾಜಿ ಆಪ್ತ ರಾಕೇಶ್‌ ಮಲ್ಲಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಿಡದಿ ಬಳಿಯ ಕರಿಯಪ್ಪನದೊಡ್ಡಿಯಲ್ಲಿರುವ ನಿವಾಸದ ಬಳಿ ಘಟನೆ ನಡೆದಿದ್ದು, ರಿಕ್ಕಿ ರೈ ಅವರ ಕೈ ಮತ್ತು ಮೂಗಿಗೆ ಗುಂಡೇಟು ತಗುಲಿ ಗಂಭೀರ ಗಾಯಗಳಾಗಿವೆ. ಬಿಡದಿ ಭರತ್ ಕೆಂಪಣ್ಣ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಗಿದ್ದೇನು?:

ಬೆಂಗಳೂರು ಸದಾಶಿವ ನಗರ ನಿವಾಸದಿಂದ ಸಂಜೆ 6 ಗಂಟೆಗೆ ಹೊರಟ ರಿಕ್ಕಿ ರೈ ರಾತ್ರಿ 7.30ಕ್ಕೆ ಕರಿಯಪ್ಪನದೊಡ್ಡಿಯಲ್ಲಿರುವ ಮನೆಗೆ ಬಂದಿದ್ದಾರೆ. ಎಂದಿನಂತೆ ವಿಶ್ರಾಂತಿ ಪಡೆದ ನಂತರ ಚಾಲಕ ಜಿ.ಬಸವರಾಜು, ಅಂಗರಕ್ಷಕ ರಾಜ್ ಪಾಲ್ ಅವರೊಂದಿಗೆ ಕಪ್ಪು ಬಣ್ಣದ ಫಾರ್ಚುನರ್ ಕಾರಿನಲ್ಲಿ ರಾತ್ರಿ 11 ಗಂಟೆಗೆ ಮನೆಯಿಂದ ಬೆಂಗಳೂರಿಗೆ ವಾಪಸ್‌ ಹೊರಟಿದ್ದಾರೆ.

ಆಗ ಮನೆ ಕಾಂಪೌಂಡ್‌ ದಾಟಿ ಹೊರಬಂದ ಕಾರಿನ ಮೇಲೆ ದುಷ್ಕರ್ಮಿಗಳು ಮೊದಲ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ, ಕಾರಿನಲ್ಲಿದ್ದ ಮೂವರಿಗೂ ಅದು ಗುಂಡಿನ ದಾಳಿ ಎಂಬುದು ಅರಿವಿಗೆ ಬಂದಿಲ್ಲ. ಟಪ್ ಎಂದು ಜೋರಾದ ಶಬ್ದ ಬಂದಿದ್ದರಿಂದ ಕಾರು ಪಂಕ್ಚರ್ ಆಗಿರಬೇಕೆಂದು ಭಾವಿಸಿದ್ದಾರೆ. ಆಗ ಕಾರು ನಿಲ್ಲಿಸಿ ಕೆಳಗಿಳಿದ ಚಾಲಕ ಟೈರ್ ಗಳನ್ನು ಪರೀಕ್ಷಿಸಿದ್ದಾನೆ. ಎಲ್ಲವೂ ಸರಿಯಿದ್ದ ಕಾರಣ ರೈಲ್ವೆ ಕ್ರಾಸ್ ವರೆಗೂ ಬಂದಿದ್ದಾರೆ. ಆಗ ರಿಕ್ಕಿ ರೈ ಪರ್ಸ್ ಮರೆತಿದ್ದರಿಂದ ಮತ್ತೆ ಮನೆಗೆ ವಾಪಸ್ಸಾಗಿದ್ದಾರೆ.

ಸುಮಾರು ಒಂದೂವರೆ ಗಂಟೆ ನಂತರ ಮತ್ತೆ ತಡರಾತ್ರಿ 12.50ರ ಸುಮಾರಿಗೆ ರಿಕ್ಕಿ ಚಾಲಕ ಮತ್ತ ಅಂಗರಕ್ಷಕನೊಂದಿಗೆ ಬೆಂಗಳೂರಿನತ್ತ ಹೊರಟಿದ್ದಾರೆ. ಮೊದಲ ಬಾರಿ ಗುಂಡಿನ ದಾಳಿ ನಡೆದ ಜಾಗದಲ್ಲಿಯೇ ಎರಡನೇ ಬಾರಿಯೂ ರಿಕ್ಕಿ ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ.

ಚಾಲಕನ ಸೀಟು ಟಾರ್ಗೆಟ್ ಮಾಡಿ ಫೈರಿಂಗ್ :

ಸಾಮಾನ್ಯವಾಗಿ ರಿಕ್ಕಿ ಅವರೇ ಕಾರು ಚಾಲನೆ ಮಾಡಿಕೊಂಡು ಕರಿಯಪ್ಪನದೊಡ್ಡಿ ಮನೆಗೆ ಬರುತ್ತಿದ್ದರು. ಹೀಗಾಗಿ ದಾಳಿಕೋರರು ಚಾಲಕ ರಿಕ್ಕಿಯೇ ಆಗಿರಬಹುದು ಎಂದು ಭಾವಿಸಿ ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ. ಕಾರು ಚಲಾಯಿಸುತ್ತಿದ್ದ ಬಸವರಾಜು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಹಿಂಬದಿ ಸೀಟಿನಲ್ಲಿದ್ದ ರಿಕ್ಕಿ ರೈ ಅವರ ಕೈಗೆ ಮತ್ತು ಮೂಗಿಗೆ ತಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರಿಗೆ ಬಿಡದಿಯ ಭರತ್ ಕೆಂಪಣ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ರಿಕ್ಕಿ ಜೊತೆಗಿದ್ದ ಕಾರು ಚಾಲಕ ಬಸವರಾಜು ಮತ್ತು ಗನ್‌ ಮ್ಯಾನ್‌ ರಾಜ್ ಪಾಲ್ ಗೂ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರಿಗೂ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ ಘಟನೆ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಶ್ವಾನದಳ, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಿಕ್ಕಿ ಅವರ ಮನೆಯಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಅಡುಗೆ ಸಿಬ್ಬಂದಿಯನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ. ಸ್ಥಳದಲ್ಲಿ ಮೊಬೈಲ್ ಮತ್ತು ಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಿಯಲ್ ಎಸ್ಟೇಟ್‌ ವ್ಯವಹಾರ ಕಾರಣ?:

ಎರಡು ದಿನಗಳ ಹಿಂದೆಯಷ್ಟೇ ರಷ್ಯಾದಿಂದ ಹಿಂದಿರುಗಿದ್ದ ರಿಕ್ಕಿ ರೈ ಅವರು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ತಂದೆ ಮುತ್ತಪ್ಪ ರೈ ಆಸ್ತಿ ವಿಚಾರಕ್ಕೆ ಕೆಲವರ ಜೊತೆ ಮನಸ್ತಾಪ ಇತ್ತು. ಮುತ್ತಪ್ಪ ರೈ ನಿಧನದ ಬಳಿಕ ರಿಕ್ಕಿ ಕೆಲವರ ಜೊತೆ ಗಲಾಟೆ ಮಾಡಿಕೊಂಡಿದ್ದರು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಾರ್ಪ್ ಶೂಟ‌ರ್ ಮೂಲಕ ದಾಳಿ ನಡೆಸಿ ಹತ್ಯೆಗೆ ಪ್ರಯತ್ನಿಸಿರುವ ಅನುಮಾನವಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮತ್ತು ಡಿವೈಎಸ್ಪಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಡದಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದ್ದು, ದುಷ್ಕರ್ಮಿಗಳ ಗುರುತು ಮತ್ತು ಈ ಘಟನೆ ಹಿನ್ನೆಲೆ ಪತ್ತೆಹಚ್ಚಲು ಪ್ರಯತ್ನ ನಡೆಯುತ್ತಿದೆ.

2000 ಕೋಟಿ ರು. ಆಸ್ತಿಗಾಗಿ ಶೂಟೌಟ್‌?

ಮುತ್ತಪ್ಪ ರೈ ಬದುಕಿದ್ದಾಗಿನಿಂದ ಶುರುವಾಗಿದ್ದ ಆಸ್ತಿ ಸಂಬಂಧ ಗಲಾಟೆಗಳು ಕೋರ್ಟ್‌ನಲ್ಲಿ ರಾಜಿ ಆಗಿದ್ದರೂ ಹೊರಗೆ ಮುಂದುವರಿದಿವೆ. ಮುತ್ತಪ್ಪ 2000 ಕೋಟಿ ರು.ಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಶೂಟೌಟ್‌ಗೆ ಇದೇ ಕಾರಣ ಇರಬಹುದೆಂಬ ಅನುಮಾನವಿದೆ.

Share this article