ಹೊಸ ಮನೆಗೆ ಕನ್ನ ಹಾಕಿದ್ದ ನೇಪಾಳಿ ಗ್ಯಾಂಗ್ ಸೆರೆ : ₹50 ಲಕ್ಷ ಮೌಲ್ಯದ ಚಿನ್ನಾಭರಣ, 4.5 ಕೆಜಿ ಬೆಳ್ಳಿ, 2 ಮೊಬೈಲ್ ವಶ

KannadaprabhaNewsNetwork |  
Published : Apr 09, 2025, 02:00 AM ISTUpdated : Apr 09, 2025, 04:39 AM IST
COP | Kannada Prabha

ಸಾರಾಂಶ

ತಾನು ಕೆಲಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ನ ಪಕ್ಕದ ಬೀದಿಯ ಮನೆಯೊಂದಕ್ಕೆ ಕನ್ನ ಹಾಕಿ ನಗ ನಾಣ್ಯ ದೋಚಿದ್ದ ನೇಪಾಳಿ ಹಾಗೂ ಆತನ ನಾಲ್ವರು ಸ್ನೇಹಿತರು ತಲಘಟ್ಟಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

  ಬೆಂಗಳೂರು : ತಾನು ಕೆಲಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ನ ಪಕ್ಕದ ಬೀದಿಯ ಮನೆಯೊಂದಕ್ಕೆ ಕನ್ನ ಹಾಕಿ ನಗ ನಾಣ್ಯ ದೋಚಿದ್ದ ನೇಪಾಳಿ ಹಾಗೂ ಆತನ ನಾಲ್ವರು ಸ್ನೇಹಿತರು ತಲಘಟ್ಟಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನೇಪಾಳ ಮೂಲದ ಲಾಲ್‌ ಬಹದ್ದೂರ್ ಬೊಹರ್‌ ಅಲಿಯಾಸ್ ಲೋಕೇಶ್‌, ಕಮಲ್‌ ಬಹದ್ದೂರ್‌ ಚಲೌನಿ ಅಲಿಯಾಸ್ ಕೈಲಾಶ್‌, ಕಿರಣ್ ಬೊಹರ ಅಲಿಯಾಸ್ ಕಿರಣ್, ನೇತ್ರಾ ಬಹದ್ದೂರ್ ಚಲೌನಿ ಹಾಗೂ ರಾಜೇಶ್ ಬಹದ್ದೂರ್ ಸಹಾ ಅಲಿಯಾಸ್ ರಾಜೇಶ್ ಬಂಧಿತರಾಗಿದ್ದು, ಆರೋಪಿಗಳಿಂದ 502 ಗ್ರಾಂ ಚಿನ್ನಾಭರಣ, 4.5 ಕೆಜಿ ಬೆಳ್ಳಿ ವಸ್ತುಗಳು ಹಾಗೂ 2 ಮೊಬೈಲ್ ಸೇರಿದಂತೆ 50 ಲಕ್ಷ ರು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ತಿಂಗಳ ಹಿಂದಷ್ಟೇ ಗುಬ್ಬಲಾಳದ ಜೆಎಚ್‌ಬಿಸಿಎಸ್‌ ಲೇಔಟ್‌ನಲ್ಲಿ ಹೊಸ ಮನೆಗೆ ಪ್ರವೇಶ ಮಾಡಿದ್ದ ಸಿವಿಲ್ ಗುತ್ತಿಗೆದಾರ ರವಿಕುಮಾರ್‌ ಅವರ ಮನೆ ಬೀಗ ಮುರಿದು ಕಿಡಿಗೇಡಿಗಳು ಕಳ್ಳತನ ಮಾಡಿದ್ದರು. ರವಿಕುಮಾರ್‌ ಪತ್ನಿ ನಾಗಲಕ್ಷ್ಮೀ ಎಸ್‌ಬಿಐ ಬ್ಯಾಂಕ್‌ನಲ್ಲಿ ಹಾಗೂ ಸಾಫ್ಟ್‌ವೇರ್ ಕಂಪನಿಯಲ್ಲಿ ಅವರ ಪುತ್ರ ಉದ್ಯೋಗದಲ್ಲಿದ್ದಾರೆ. ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಬೆಳಗ್ಗೆ ತೆರಳಿದರೆ ಈ ಕುಟುಂಬವು ಸಂಜೆ ಮರಳುತ್ತಿತ್ತು. ಈ ವೇಳೆ ಕಳ್ಳತನ ನಡೆದಿತ್ತು. ಈ ಕೃತ್ಯದ ತನಿಖೆಗಿಳಿದ ಇನ್‌ಸ್ಪೆಕ್ಟರ್‌ ಎನ್‌.ಜಗದೀಶ್ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ನೇಪಾಳಿ ಗ್ಯಾಂಗ್‌ ಅನ್ನು ಸೆರೆ ಹಿಡಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರವಿಕುಮಾರ್ ಅವರ ಮನೆ ಸನಿಹದ ಅಪಾರ್ಟ್‌ಮೆಂಟ್‌ನಲ್ಲೇ ಸಹಾಯಕನಾಗಿದ್ದ ಲಾಲ್, ಮಧ್ಯಾಹ್ನದ ಹೊತ್ತಿನಲ್ಲಿ ಆ ಪ್ರದೇಶದಲ್ಲಿ ಅಡ್ಡಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಮಾಹಿತಿ ಸಂಗ್ರಹಿಸುತ್ತಿದ್ದ. ಆಗ ರವಿಕುಮಾರ್ ಅವರ ಹೊಸ ಮನೆಯಲ್ಲಿ ಹೆಚ್ಚು ಚಿನ್ನ ಹಾಗೂ ಹಣವಿರುತ್ತದೆ ಎಂದು ಅಂದಾಜಿಸಿ ಆತ ಕಳ್ಳತನಕ್ಕೆ ಸಂಚು ರೂಪಿಸಿದ್ದ. ಅಂತೆಯೇ ಯುಗಾದಿಗೂ ಮುನ್ನ ದಿನ ಆ ಮನೆಯವರು ಕೆಲಸಕ್ಕೆ ತೆರಳಿದಾಗ ಕಳ್ಳತನ ಮಾಡಿದ್ದರು.

ಬ್ರ್ಯಾಂಡ್ ಬಟ್ಟೆ ಧರಿಸಿ ಶೋಕಿ:

ಗುತ್ತಿಗೆದಾರರ ಮನೆಗೆ ಪ್ರವೇಶಿಸಿದ್ದ ನೇಪಾಳಿಗರು, ಕೂಡಲೇ ಸಿಸಿಟಿವಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದ್ದಾರೆ. ಬಳಿಕ ಬೀರುವಿನಲ್ಲಿಟ್ಟಿದ್ದ ಅರ್ಧ ಕೆಜಿ ಚಿನ್ನ, ವಜ್ರ ಹಾಗೂ ಬೆಳ್ಳಿ ವಸ್ತುಗಳನ್ನು ಬ್ಯಾಗ್‌ಗೆ ತುಂಬಿಕೊಂಡಿದ್ದಾರೆ. ಆಗ ರವಿಕುಮಾರ್‌ ಅವರ ಪುತ್ರನ ಬ್ರ್ಯಾಂಡ್‌ ಬಟ್ಟೆಗಳನ್ನು ಧರಿಸಿ ನೇಪಾಳಿಗರು ಹೊರ ಬಂದು ಮನೆಯಿಂದ 2ಕಿ.ಮೀ ನಷ್ಟು ನಡೆದುಕೊಂಡು ಹೋಗಿ ಬಳಿಕ ಕ್ಯಾಬ್ ಬುಕ್‌ ಮಾಡಿ ವರ್ತೂರಿಗೆ ಆರೋಪಿಗಳು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನೇಪಾಳಕ್ಕೆ ಹಾರುವ ಮುನ್ನ ಸಿಕ್ಕಿಬಿದ್ದರು:

ಈ ಘಟನಾ ಸ್ಥಳ ಸಮೀಪದ ಮನೆಯೊಂದ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಗಳು ಚಲನವಲನ ಹಾಗೂ ಅವರು ತೆರಳಿದ್ದ ಕಾರಿನ ನೋಂದಣಿ ಸಂಖ್ಯೆ ದೃಶ್ಯಾವಳಿ ಪತ್ತೆಯಾಗಿತ್ತು. ಈ ಸುಳಿವು ಆಧರಿಸಿ ಕ್ಷಿಪ್ರವಾಗಿ ಇನ್ಸ್‌ಪೆಕ್ಟರ್‌ ಜಗದೀಶ್ ತಂಡವು ಕಾರ್ಯಾಚರಣೆ ನಡೆಸಿದೆ. ಕೃತ್ಯದ ನಡೆದ 24 ತಾಸಿನೊಳಗೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಒಂದು ದಿನ ತಾಡವಾಗಿದ್ದರು ತಮ್ಮ ದೇಶಕ್ಕೆ ನೇಪಾಳಿಗರು ಪರಾರಿಯಾಗುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ನೇಪಾಳಿ ಗ್ಯಾಂಗ್ ಹಿನ್ನೆಲೆ:ವರ್ಷದ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಲಾಲ್ ಬಹದ್ದೂರ್‌, ಗುಬ್ಬಲಾಳ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸಗಾರನಾಗಿ ದುಡಿದು ಜೀವನ ಸಾಗಿಸುತ್ತಿದ್ದ. ವರ್ತೂರು ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಕಮಲ್‌, ಹೋಟೆಲ್‌ನಲ್ಲಿ ಕಿರಣ್, ನೇತ್ರಾ ಹಾಗೂ ಬಾಗಲೂರು ಸಮೀಪ ಟ್ರಾವೆಲ್ಸ್‌ ಏಜೆನ್ಸಿ ಕಚೇರಿಯಲ್ಲಿ ರಾಜೇಶ್ ಕೆಲಸ ಮಾಡುತ್ತಿದ್ದರು. ಒಂದೇ ದೇಶದವರಾಗಿದ್ದರಿಂದ ಈ ಐವರು ಆತ್ಮೀಯ ಒಡನಾಡಿಗಳಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ