ರಾಜ್ಯದಲ್ಲಿ ಗೋವುಗಳ ಮೇಲೆ ನಿಲ್ಲದ ವಿಕೃತಿ

KannadaprabhaNewsNetwork |  
Published : Jul 01, 2025, 01:48 AM ISTUpdated : Jul 01, 2025, 06:41 AM IST
ಆಕಳು | Kannada Prabha

ಸಾರಾಂಶ

ರಾಜ್ಯದಲ್ಲಿ ಮೂಕ ಜಾನುವಾರುಗಳ ಮೇಲೆ ದೌರ್ಜನ್ಯ ಮುಂದುವರಿದಿದೆ. ಹೊಸನಗರದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ಬೆನ್ನಲ್ಲೇ ಉತ್ತರ ಕನ್ನಡದ ಭಟ್ಕಳದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಕದ್ದೊಯ್ದು ವಿಕೃತವಾಗಿ ವಧೆ ಮಾಡಿದ ಘಟನೆ ನಡೆದಿದೆ. 

 ಉಡುಪಿ/ ಭಟ್ಕಳ :  ರಾಜ್ಯದಲ್ಲಿ ಮೂಕ ಜಾನುವಾರುಗಳ ಮೇಲೆ ದೌರ್ಜನ್ಯ ಮುಂದುವರಿದಿದೆ. ಹೊಸನಗರದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ಬೆನ್ನಲ್ಲೇ ಉತ್ತರ ಕನ್ನಡದ ಭಟ್ಕಳದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಕದ್ದೊಯ್ದು ವಿಕೃತವಾಗಿ ವಧೆ ಮಾಡಿದ ಘಟನೆ ನಡೆದಿದೆ. ಇನ್ನೊಂದೆಡೆ ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ಗುಂಪೊಂದು ದನವನ್ನು ಕತ್ತರಿಸಿ ಮಾಂಸ ಮಾಡಿ ಸಾಗಿಸುವ ವೇಳೆ ಅದರ ತಲೆ ನಡು ರಸ್ತೆಯಲ್ಲಿಯೇ ಪತ್ತೆ ಬಿದ್ದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಸರಣಿಯಾಗಿ ನಡೆಯುತ್ತಿರುವ ಇಂಥ ಘಟನೆಗಳ ಕುರಿತು ತನಿಖೆಗೆ, ಆರೋಪಿಗಳ ಬಂಧನಕ್ಕೆ ಹಿಂದೂಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಜೊತೆಗೆ ರಾಜ್ಯದಲ್ಲಿ ಸರಣಿಯಾಗಿ ನಡೆಯುತ್ತಿರುವ ಇಂಥ ಘಟನೆಗಳು ಅನುದ್ದೇಶಿತವಲ್ಲ, ಉದ್ದೇಶಿತ ಕೃತ್ಯವಿರಬಹುದು. ಗೋವು ಪ್ರೇಮಿಗಳನ್ನು ಕೆರಳಿಸುವ ಉದ್ದೇಶದಿಂದಲೇ ನಡೆಯುತ್ತಿದೆ ಎಂಬ ಗುಮಾನಿ ಬಲವಾಗುತ್ತಿದೆ.

ಎಮ್ಮೆ ಕದ್ದೊಯ್ದು ಹತ್ಯೆ:

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಹೊನ್ನಪ್ಪ ಈರಯ್ಯ ನಾಯ್ಕ ಎಂಬುವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆಯನ್ನು ಕಳವು ಮಾಡಿರುವ ದುಷ್ಕರ್ಮಿಗಳು, ಬಳಿಕ ಅದನ್ನು ಗ್ರಾ.ಪಂ. ವ್ಯಾಪ್ತಿಯ ನೀರಗದ್ದೆ ಗುಡ್ಡದ ಮೇಲೆ ಭಾನುವಾರ ತಡರಾತ್ರಿ ಹತ್ಯೆ ಮಾಡಿ ತಲೆ ಭಾಗ ಎಸೆದು ಹೋಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸಿದ ಸ್ಥಳೀಯ ಹಿಂದೂ ಸಂಘಟನೆಯವರು, ಬಿಜೆಪಿ ಮುಖಂಡರು ಡಿವೈಎಸ್‌ಪಿ ಕಚೇರಿಗೆ ತೆರಳಿ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಗೋವಿನ ರುಂಡ ಪತ್ತೆ:

ಇನ್ನೊಂದೆಡೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲು ಎಂಬಲ್ಲಿ ಗೋವಿನ ರುಂಡ ಮತ್ತು ಇನ್ನಿತರ ಅಂಗಾಂಗಗಳು ನಡು ರಸ್ತೆಯಲ್ಲಿಯೇ ಪತ್ತೆ ಆಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೇಶವ ಎಂಬುವವರು ಒಂದೂವರೆ ವರ್ಷದ ದನವನ್ನು ಸಾಕಲಾಗದೇ ರಾಮ ಎಂಬುವವರಿಗೆ ನೀಡಿದ್ದರು. ಅದನ್ನು ಸ್ವಿಪ್ಟ್ ಕಾರಿನಲ್ಲಿ ಸಾಗಿಸಿದ ಆರೋಪಿಗಳು ತಮ್ಮ ಮನೆಯಲ್ಲಿ ಬಳಕೆಗಾಗಿ ಕಡಿದು ಮಾಂಸ ಮಾಡಿದ್ದರು. ನಂತರ 40-50 ಕೆ.ಜಿ. ಮಾಂಸ ಮತ್ತು ಉಳಿದ ತ್ಯಾಜ್ಯವನ್ನು ಸ್ಕೂಟಿಯಲ್ಲಿ ಸಾಗಿಸುತ್ತಿದ್ದಾಗ, ತ್ಯಾಜ್ಯ ದಾರಿ ನಡುವೆ ಬಿದ್ದಿತ್ತು.

ಭಾನುವಾರ ಮುಂಜಾನೆ ಕುಂಜಾಲಿನ ರಸ್ತೆಯಲ್ಲಿ ಈ ಗೋವಿನ ತಲೆ ಪತ್ತೆಯಾಗಿ, ವಿವಿಧ ಸಂಘಟನೆಗಳ ಕಾರ್ಯಕರ್ತರು ಸ್ಥಳದಲ್ಲಿ ಸೇರಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಸುತ್ತಮುತ್ತ 3- 4 ಕಿ.ಮೀ. ಪರಿಸರದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಶನಿವಾರ ರಾತ್ರಿ ಒಂಟಿ ಸ್ವಿಪ್ಟ್ ಕಾರು ಓಡಾಟ ಪತ್ತೆಯಾಗಿತ್ತು. ಅದರ ಆಧಾರದಲ್ಲಿ 6 ಆರೋಪಿಗಳ‍ನ್ನು ಬಂಧಿಸಿದ್ದಾರೆ. ಬಂಧಿತರನ್ನು ರಾಮ ಕುಂಜಾಲು, ಪ್ರಸಾದ್ ಕುಂಜಾಲು, ನವೀನ್ ಮಟಪಾಡಿ, ಕೇಶವ ನಾಯ್ಕ್ ಕುಂಜಾಲು, ಸಂದೇಶ್ ಕುಂಜಾಲು ಮತ್ತು ರಾಜೇಶ್ ಕುಂಜಾಲು ಎಂದು ಗುರುತಿಸಲಾಗಿದೆ. ಮತ್ತೊಬ್ಬ ಪರಾರಿ ಆಗಿದ್ದಾನೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳ ಮೇಲೆ ಗೋಹತ್ಯೆ ನಿಷೇಧ ಕಾಯ್ದೆಯಂತೆ ಎಫ್‌ಐಆರ್ ದಾಖಲಿಸಲಾಗಿದೆ.

ತೋಟಕ್ಕೆ ನುಗ್ಗಿದ ಸಿಟ್ಟಿಗೆ ಹಸುವಿನ ಕೆಚ್ಚಲಿಗೆ ಕತ್ತರಿ!

 ಶಿವಮೊಗ್ಗ: ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹೊಸನಗರ ತಾಲೂಕಿನ ಮೇಲಿನ ಸಂಪಳ್ಳಿ ಸಮೀಪದ ವಿಜಾಪುರ ಗ್ರಾಮದ ನಿವಾಸಿ ರಾಮಚಂದ್ರ ಬಂಧಿತ ಆರೋಪಿ. 

ತೋಟಕ್ಕೆ ದನ ನುಗ್ಗಿದ್ದಕ್ಕೆ ಕೋಪಗೊಂಡು ಕೃತ್ಯ ಎಸಗಿದ್ದಾನೆ. ಈತನ ವಿರುದ್ಧ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 

ನವೀನ್ ಎಂಬುವರಿಗೆ ಸೇರಿದ ಹಸುಗಳನ್ನು ಜೂನ್ 28ರಂದು ಎಂದಿನಂತೆ ಮೇಯಲು ಬಿಡಲಾಗಿತ್ತು. ಮೇಯಲು ಬಿಟ್ಟಿದ್ದ ವೇಳೆ, ಹಸುವೊಂದರ ಕೆಚ್ಚಲು ಕತ್ತರಿಸಿದ್ದು ಕಂಡುಬಂದಿತ್ತು. ಈ ಕುರಿತಂತೆ ಜೂ.29ರಂದು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ರಾಮಚಂದ್ರ ಕತ್ತಿ ಹಾಗೂ ದೊಣ್ಣೆಯಿಂದ ಹೊಡೆದು, ಹಸುವಿನ ಕೆಚ್ಚಲು ಗಾಯಪಡಿಸಿದ್ದು ಪತ್ತೆಯಾಗಿತ್ತು.

 ಗೋವುಗಳ ಮೇಲಿನ ದೌರ್ಜನ್ಯ ವಿರುದ್ಧ ಹೋರಾಟ: ಅಶೋಕ್‌

ಗೋವುಗಳ ಮೇಲಿನ ದಾಳಿ ಹಿಂದೆ ಮತಾಂಧ ಶಕ್ತಿಇದು ಜಿಹಾದಿ ಷಡ್ಯಂತ್ರದಂತಿದೆ: ವಿಪಕ್ಷ ನಾಯಕ

 ಬೆಂಗಳೂರು : ರಾಜ್ಯದಲ್ಲಿ ಗೋವುಗಳ ಮೇಲೆ ಪದೇ ಪದೆ ನಡೆಯುತ್ತಿರುವ ದಾಳಿಗಳನ್ನು ಗಮನಿಸಿದರೆ ಇದರ ಹಿಂದೆ ಮತಾಂಧ ಶಕ್ತಿಗಳು, ಮೂಲಭೂತವಾದಿ ಶಕ್ತಿಗಳ ದೊಡ್ಡ ಜಿಹಾದಿ ಷಡ್ಯಂತ್ರವೇ ಇದ್ದಂತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆಯನ್ನೂ ಅಶೋಕ್‌ ನೀಡಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆ, ರಾಮನಗರ, ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ನಡೆದ ಗೋಮಾತೆಯ ಕೆಚ್ಚಲು ಕತ್ತರಿಸಿದ ಅಮಾನುಷ ಕೃತ್ಯ ಈಗ ಮತ್ತೊಮ್ಮೆ ಮರುಕಳಿಸಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗ್ರಾಮವೊಂದರಲ್ಲಿ ಹಸುವಿನ ಕೆಚ್ಚಲು ಕೊಯ್ಯುವ ಮೂಲಕ ಕಿಡಿಗೇಡಿಗಳು ಮತ್ತೊಮ್ಮೆ ಕ್ರೌರ್ಯ ಮೆರೆದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಷ್ಟೀಕರಣ, ಅರಾಜಕತೆಯಿಂದ ನಿಸ್ತೇಜವಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ಬಲಹೀನತೆಯನ್ನೇ ಬಂಡವಾಳವಾಗಿಸಿಕೊಂಡಿರುವ ಮತಾಂಧ ಶಕ್ತಿಗಳು, ಗೋವುಗಳ ಮೇಲೆ ಪ್ರಹಾರ ಮಾಡುವ ಮೂಲಕ ಹಿಂದೂಗಳಿಗೆ ಸವಾಲು ಹಾಕುತ್ತಿವೆ. ಗೋವುಗಳ ಮೇಲೆ ಪದೇ ಪದೆ ನಡೆಯುತ್ತಿರುವ ಈ ದಾಳಿಗಳನ್ನು ಗಮನಿಸಿದರೆ ಇದರ ಹಿಂದೆ ದೊಡ್ಡ ಜಾಲವೇ ಅಡಗಿದಂತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಈ ದುಷ್ಕೃತ್ಯಗಳಿಗೆ ಕಡಿವಾಣ ಹಾಕದೆ ಹೋದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಶೋಕ್ ಸಾಮಾಜಿಕ ಜಾಲತಾಣದ ಮೂಲಕ ಎಚ್ಚರಿಕೆ ನೀಡಿದ್ದಾರೆ.

PREV
Read more Articles on

Recommended Stories

ಸೈಬರ್‌ ಕ್ರೈಂ ಭೇದಿಸುವುದು ಬಹುದೊಡ್ಡ ಸವಾಲು: ಪರಮೇಶ್ವರ್‌ ಅಸಹಾಯಕತೆ
ಬ್ಯಾಡರಹಳ್ಳಿ ಬಳಿ ವಿದ್ಯುತ್‌ ತಂತಿ ಕಟ್‌: 3 ಉಪ ಕೇಂದ್ರ ವ್ಯಾಪ್ತಿ ಪವರ್‌ ಸ್ಥಗಿತ