ಕುಡಿದ ಮತ್ತಿನಲ್ಲಿದ್ದ ದಂಪತಿ ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆ ಮುಂದೆ ದೊಡ್ಡ ರಂಪಾಟ ಸೃಷ್ಟಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಡಿದ ಮತ್ತಿನಲ್ಲಿದ್ದ ದಂಪತಿ ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆ ಮುಂದೆ ದೊಡ್ಡ ರಂಪಾಟ ಸೃಷ್ಟಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಘಟನೆ ಕಳೆದ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಜ.5 ರ ಸಂಜೆ 5 ಗಂಟೆಗೆ ಬಾಳೆಕುಂದ್ರಿ ಸರ್ಕಲ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ ದಂಪತಿ ಬೈಕ್‌ನಿಂದ ಬಿದಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಇಬ್ಬರನ್ನೂ ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣೆಯ ಬಳಿ ಕರೆತಂದಿದ್ದರು. ಆದರೆ, ಪೊಲೀಸ್ ಠಾಣೆಯ ಒಳಗೆ ಬರಲು ನಿರಾಕರಿಸಿದ ಮಹಿಳೆ, ಠಾಣೆ ಬಾಗಿಲಿನಲ್ಲಿಯೇ ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ್ದರು. ಕುಡಿದ ಮತ್ತಿನಲ್ಲಿ ನಿನ್ನಿಂದಲೇ ಇದೆಲ್ಲಾ ಆಗಿದ್ದು ಎಂದು ಪತಿಯೊಂದಿಗೆ ಜಗಳವಾಡಿ ಆತನಿಗೆ ಕಾಲಿನಿಂದ ಒದ್ದು ‘ಇವನು ಗಾಂಜಾ ಪೆಡ್ಲರ್’ ಎಂದು ಸಾರ್ವಜನಿಕವಾಗಿ ಕೂಗಾಡಿದ್ದರು.

ಇವರು ಶಿವಾಜಿನಗರ ನಿವಾಸಿಗಳಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ವಿಚಿತ್ರವಾಗಿ ವರ್ತಿಸಿದ್ದಾರೆ. ಸದ್ಯ ದಂಪತಿ ವಿರುದ್ಧ ‘ಡ್ರಂಕ್‌ ಆ್ಯಂಡ್ ಡ್ರೈವ್’ ಪ್ರಕರಣ ದಾಖಲಿಸಿ ಅವರ ಬೈಕ್‌ ಅನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ದಂಡ ಕಟ್ಟುವಂತೆ ದಂಪತಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.