ಸಂಸ್ಕೃತ ವಿವಿ ನಿವೃತ್ತ ನೌಕರರಿಗೆ ಪಿಂಚಣಿ ನೀಡದ ಸರ್ಕಾರಕ್ಕೆ ನೋಟಿಸ್‌

KannadaprabhaNewsNetwork |  
Published : Aug 19, 2025, 01:00 AM IST
ಸಂಸ್ಕೃತ ವಿವಿ ನಿವೃತ್ತ ನೌಕರರಿಗೆ ಪಿಂಚಣಿ ನೀಡದ ಸರ್ಕಾರಕ್ಕೆ ನೋಟಿಸ್‌ | Kannada Prabha

ಸಾರಾಂಶ

ಅರ್ಜಿದಾರರೆಲ್ಲರೂ 1979ರಿಂದ 1992ರ ಅವಧಿಯಲ್ಲಿ ಮೇಲುಕೋಟೆಯ ಸಂಸ್ಕೃತ ಸಂಶೋಧನಾ ಅಕಾಡೆಮಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕೊಂಡು, 2013ರಿಂದ 2017ರ ಅವಧಿಯಲ್ಲಿ ನಿವೃತ್ತಿ ಹೊಂದಿದ್ದರು. 20ಕ್ಕೂ ಅಧಿಕ ವರ್ಷ ಸೇವೆ ಸಲ್ಲಿಸಿದ್ದರೂ ತಮಗೆ ಪಿಂಚಣಿ ಇನ್ನಿತರ ನಿವೃತ್ತಿ ಭತ್ಯೆ ನೀಡಿಲ್ಲ.

 ಬೆಂಗಳೂರು/ ಮಂಡ್ಯ :  ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕೆಲ ನಿವೃತ್ತ ನೌಕರರಿಗೆ ಪಿಂಚಣಿ ಹಾಗೂ ಇತರೆ ನಿವೃತ್ತಿ ಭತ್ಯೆ ನಿರಾಕರಿಸಿರುವ ಸಂಬಂಧ ರಾಜ್ಯ ಸರ್ಕಾರ ಹಾಗೂ ಸಂಸ್ಕೃತ ವಿವಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಎಸ್.ನಾರಾಯಣ (73) ಸೇರಿ ಐವರು ನಿವೃತ್ತ ನೌಕರರು ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರ ಪೀಠ, ಪ್ರತಿವಾದಿಗಳಾಗಿರುವ ರಾಜ್ಯ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ರಾಜ್ಯ ಆರ್ಥಿಕ ಇಲಾಖೆಗೆ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರೆಲ್ಲರೂ 1979ರಿಂದ 1992ರ ಅವಧಿಯಲ್ಲಿ ಮೇಲುಕೋಟೆಯ ಸಂಸ್ಕೃತ ಸಂಶೋಧನಾ ಅಕಾಡೆಮಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕೊಂಡು, 2013ರಿಂದ 2017ರ ಅವಧಿಯಲ್ಲಿ ನಿವೃತ್ತಿ ಹೊಂದಿದ್ದರು. 20ಕ್ಕೂ ಅಧಿಕ ವರ್ಷ ಸೇವೆ ಸಲ್ಲಿಸಿದ್ದರೂ ತಮಗೆ ಪಿಂಚಣಿ ಇನ್ನಿತರ ನಿವೃತ್ತಿ ಭತ್ಯೆ ನೀಡಿಲ್ಲ. 2006ರ ಏಪ್ರಿಲ್ 1ಕ್ಕೂ ಮುಂಚಿತವಾಗಿ ಸರ್ಕಾರಿ ಅನುದಾನಿತ ಸಂಸ್ಥೆಗಳಿಗೆ ನೇಮಕಗೊಂಡ ನೌಕರರು, ಹಳೇ ಪಿಂಚಣಿ ಯೋಜನೆ (ಒಪಿಎಸ್) ಅಡಿಯಲ್ಲಿ ಪಿಂಚಣಿ ಹಾಗೂ ನಿವೃತ್ತಿ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಮೇಲುಕೋಟೆಯ ಸಂಸ್ಕೃತ ಸಂಶೋಧನಾ ಅಕಾಡೆಮಿಗೆ 2015ರ ಮಾ.25ರಿಂದ 6ನೇ ವೇತನ ಆಯೋಗದ ಸೌಲಭ್ಯ ವಿಸ್ತರಿಸಲಾಗಿದೆ. ಅದರಂತೆ ತಮಗೂ ನಿವೃತ್ತಿಯಾದ ದಿನದಿಂದ ಪಿಂಚಣಿ ಹಾಗೂ ಇತರ ನಿವೃತ್ತಿ ಭತ್ಯೆ ಪಾವತಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.

ಟೈಪಿಸ್ಟ್‌ ಸೇವೆ ಕಾಯಂ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ‌

  ಬೆಂಗಳೂರು :  ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ 30 ವರ್ಷಗಳಿಂದ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ಏಳು ಮಂದಿ ಟೈಪಿಸ್ಟ್ ಹಾಗೂ ಶೀಘ್ರಲಿಪಿಗಾರರ ಸೇವೆ ಕಾಯಂಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ನಿಗಮಕ್ಕೆ ಹೈಕೋರ್ಟ್ ನೋಟಿಸ್ ‌ಜಾರಿಗೊಳಿಸಿದೆ.

ತಮ್ಮ ಸೇವೆ ಕಾಯಂಗೊಳಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಬೆಂಗಳೂರಿನ ಆರ್. ಬಾಲರಾಜು, ಮಂಡ್ಯದ ಕೆ.ಸಿ. ಕೃಷ್ಣ ಸೇರಿದಂತೆ ಏಳು ಮಂದಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರ ಪೀಠ ಈ ಆದೇಶ ಮಾಡಿದೆ.

ಅರ್ಜಿ ವಿವರ:

ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸ್ಟೆನೋಗ್ರಾಫರ್ ಹಾಗೂ ಟೈಪಿಸ್ಟ್ ಹುದ್ದೆಗಳಿಗೆ 1993-1995ರ ಅವಧಿಯಲ್ಲಿ ದಿನಗೂಲಿ ಆಧಾರದಲ್ಲಿ ನೇಮಕಗೊಂಡಿದ್ದೆವು. ಸಿ ಮತ್ತು ಡಿ ವೃಂದಕ್ಕೆ ಸೇರುವ ನಾವು ಸತತ 30ರಿಂದ 35 ವರ್ಷ ಸೇವೆ ಸಲ್ಲಿಸಿದ್ದೇವೆ. ಸೇವೆ ಕಾಯಮಾತಿಗೆ ಕೋರಿ ಹಲವು ಬಾರಿ ಸಲ್ಲಿಸಿರುವ ಮನವಿಗಳನ್ನು ಸರ್ಕಾರ ಈವರೆಗೂ ಪರಿಗಣಿಸಿಲ್ಲ. ಆದ್ದರಿಂದ ನಮ್ಮ ಸೇವೆ ಕಾಯಂಗೊಳಿಸಲು ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

PREV
Read more Articles on

Recommended Stories

ಎಂಜಿನಿಯರಿಂಗ್‌ ಕಾಲೇಜು ಶೌಚಕ್ಕೆ ಎಳೆದೊಯ್ದು ಸಹಪಾಠಿಯ ರೇ*!
ಪ್ರೀತಿಗೊಪ್ಪದ ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ ಮಾಡಿದ ಪಕ್ಕದ ಮನೆ ಯುವಕ