ಝೋಮೋಟೋ, ಸ್ವಿಗ್ಗಿ ಸಿಬ್ಬಂದಿ ಸೋಗಲ್ಲಿ ಕಳವು ಮಾಡುತ್ತಿದ್ದ ಕುಖ್ಯಾತ ಖದೀಮ ಖಾಕಿ ಬಲೆಗೆ

KannadaprabhaNewsNetwork | Published : Jul 2, 2025 1:47 AM
 ಖಾಕಿ ಬಲೆಗೆ | Kannada Prabha

ಝೋಮೋಟೋ ಹಾಗೂ ಸ್ವಿಗ್ಗಿಯ ಟೀ ಶರ್ಟ್‌ ಧರಿಸಿ ಆಹಾರ ಪೂರೈಕೆದಾರನ ಸೋಗಿನಲ್ಲಿ ಮನೆಗಳಿಗೆ ತೆರಳಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನೊಬ್ಬ ಮಡಿವಾಳ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಝೋಮೋಟೋ ಹಾಗೂ ಸ್ವಿಗ್ಗಿಯ ಟೀ ಶರ್ಟ್‌ ಧರಿಸಿ ಆಹಾರ ಪೂರೈಕೆದಾರನ ಸೋಗಿನಲ್ಲಿ ಮನೆಗಳಿಗೆ ತೆರಳಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನೊಬ್ಬ ಮಡಿವಾಳ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಉತ್ತರಹಳ್ಳಿ ನಿವಾಸಿ ಪ್ರಕಾಶ್ ಅಲಿಯಾಸ್ ಬಾಲಾಜಿ ಬಂಧಿತನಾಗಿದ್ದು, ಆರೋಪಿಯಿಂದ 779 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಹಾಗೂ ಬೈಕ್‌ಗಳು ಸೇರಿದಂತೆ 75 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಕೋರಮಂಗಲದ 1ನೇ ಹಂತದಲ್ಲಿ ಮನೆಗೆ ನಕಲಿ ಕೀ ಬಳಸಿ ಕಳ್ಳತನ ಮಾಡಿ ಕಿಡಿಗೇಡಿ ಪರಾರಿಯಾಗಿದ್ದ. ಈ ಕೃತ್ಯದ ತನಿಖೆಗಿಳಿದ ಇನ್ಸ್‌ಪೆಕ್ಟರ್‌ ಮೊಹಮ್ಮದ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದೆ.

ಮೊಬೈಲ್ ಬಳಸದ ಚಾಲಾಕಿ ಶತಕವೀರ ಕಳ್ಳ

ಪ್ರಕಾಶ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಮನೆಗಳ್ಳತನಕ್ಕೆ ಆತ ಕುಖ್ಯಾತನಾಗಿದ್ದಾನೆ. ಈತನ ಮೇಲೆ 120ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಝೋಮೊಟೋ ಹಾಗೂ ಸ್ವಿಗ್ಗಿ ಟೀ ಶರ್ಟ್ ಧರಿಸಿ ಆಹಾರ ಪೂರೈಕೆ ನೆಪದಲ್ಲಿ ಮನೆಗಳಿಗೆ ಪ್ರಕಾಶ್ ಅಡ್ಡಾಡುತ್ತಿದ್ದ. ಆಗ ಐದಾರು ಬಾರಿ ಕಾಲಿಂಗ್‌ ಬೆಲ್ ಮಾಡಿದಾಗ ತೆರೆಯದೆ ಹೋದರೆ ಆತ ಕೈ ಚಳಕ ತೋರಿಸುತ್ತಿದ್ದ. ತನ್ನ ಬ್ಯಾಗ್‌ನಲ್ಲಿ ನಕಲಿ ಕೀಗಳನ್ನು ಪ್ರಕಾಶ್ ಇಟ್ಟುಕೊಂಡಿದ್ದ. ಆ ಕೀಗಳನ್ನು ಬಳಸಿ ಮನೆಗಳ ಬೀಗ ತೆರೆದು ನಗ-ನಾಣ್ಯ ದೋಚುತ್ತಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಜೂಜಾಡಿ ಕಳೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತನ್ನ ಪತ್ನಿ ಜತೆ ಪ್ರಕಾಶ್ ವಾಸವಾಗಿದ್ದ. ಪತಿಯ ಕಳ್ಳ ಚರಿತ್ರೆಯೂ ಆತನ ಪತ್ನಿಗೆ ಗೊತ್ತಿತ್ತು. ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಆರೋಪಿ ಮೊಬೈಲ್ ಬಳಸುತ್ತಿರಲಿಲ್ಲ. ಹೀಗಾಗಿ ಮನೆಗಳ್ಳತನ ಕೃತ್ಯದ ತನಿಖೆಯ ವೇಳೆ ಆತನ ಜಾಡು ಪತ್ತೆ ಸವಾಲಾಗಿತ್ತು. ಅಲ್ಲದೆ ತನ್ನ ತಂಡಕ್ಕೆ ಸಹಚರರನ್ನು ಆತ ಸೇರಿಸಿಕೊಂಡಿರಲಿಲ್ಲ. ಏಕಾಂಗಿಯಾಗಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕದ್ದ ಚಿನ್ನ ಮಾರಲು ಸಾಥ್‌: ಸ್ನೇಹಿತನೂ ಬಲೆಗೆ

ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಸಹಕರಿಸುತ್ತಿದ್ದ ಪ್ರಕಾಶ್‌ ಸ್ನೇಹಿತ ರಾಜೀವ್‌ ಗಾಂಧಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಈತ ಟೈಲರಿಂಗ್‌ ಕೆಲಸ ಮಾಡುತ್ತಿದ್ದ.