ಕನ್ನಡಪ್ರಭ ವಾರ್ತೆ ಮಳವಳ್ಳಿ
ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಮಾರು 3.5 ಎಕರೆ ಪ್ರದೇಶದಲ್ಲಿದ್ದ 1600 ಅಡಿಕೆ ಮತ್ತು 190 ತೆಂಗಿನ ಗಿಡಗಳು ನಾಶವಾಗಿರುವ ಘಟನೆ ತಾಲೂಕಿನ ನಿಡಘಟ್ಟ ಗ್ರಾಮದ ಹೊವಲಯದಲ್ಲಿ ನಡೆದಿದೆ.ಗ್ರಾಮದ ರೈತ ಮಹದೇವೇಗೌಡರು ತಮ್ಮ 3.5 ಎಕರೆ ಪ್ರದೇಶದಲ್ಲಿ ಕಳೆದ ಆರೇಳು ವರ್ಷಗಳ ಹಿಂದೆ 1600 ಅಡಿಕೆ ಮತ್ತು 190 ತೆಂಗಿನ ಗಿಡಗಳನ್ನು ನೆಟ್ಟಿದ್ದರು. ಎಲ್ಲವೂ ಫಸಲು ಬಿಡುವ ಹಂತಕ್ಕೆ ಬಂದಿದ್ದವು. ತೋಟಕ್ಕೆ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣವಾಗಿ ಗಿಡಗಳು ಸುಟ್ಟು ನಾಶವಾಗಿವೆ. ವಿಷಯ ತಿಳಿದ ಆಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ರೈತ ಮಹದೇವೇಗೌಡ ಮಾತನಾಡಿ, ಸುಮಾರು 30 ಲಕ್ಷ ಕ್ಕೂ ಅಧಿಕ ಹಣ ಖರ್ಚು ಮಾಡಿ ಅಡಿಕೆ ಮತ್ತು ತೆಂಗು ಬೆಳೆ ಹಾಕಿದ್ದೆ. ಆಕಸ್ಮಿಕ ಬೆಂಕಿಗೆ ಎಲ್ಲವೂ ನಾಶವಾಗಿದೆ. ತಾಲೂಕು ಆಡಳಿತ ಮತ್ತು ಶಾಸಕರು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ಬಿದ್ದು 5 ಲಕ್ಷಕ್ಕೂ ಹೆಚ್ಚು ನಷ್ಟ
ಮಳವಳ್ಳಿ: ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 5 ಲಕ್ಷಕ್ಕೂ ಹೆಚ್ಚು ನಷ್ಟವಾಗಿರುವ ಘಟನೆ ಪಟ್ಟಣ ಗಂಗಮತ ಬೀದಿಯ ಕಪ್ಪಡಿಮಾಳದಲ್ಲಿ ಶನಿವಾರ ನಡೆದಿದೆ.ಗಂಗಾಮತ ಬೀದಿಯಲ್ಲಿ ಪ್ರತ್ಯೇಕವಾಗಿ ಹಾಕಿದ್ದ ರೈತರಾದ ಜವರಪ್ಪ ಅವರ 4 ಎಕರೆ, ಕರಿಯಪ್ಪ ಎಂಬ ರೈತನ 12 ಎಕರೆ, ಮಂಜು 2.5 ಎಕರೆ, ರವಿ 3 ಎಕರೆ, ಭರತ್ 1 ಎಕರೆ, ನಾಗರಾಜು 1 ಎಕರೆ ಪ್ರದೇಶದ ಹಲ್ಲನ್ನು ಸಂಗ್ರಹಿಸಿ ಮೆದೆಗಳಿಗೆ ಹಾಕಿದ್ದರು. ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣವಾಗಿ ಮೆದೆಗಳು ಬೆಂಕಿಗೆ ಆಹುತಿಯಾಗಿದೆ.
ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿದ್ದರೂ ಬಹುತೇಕ ಹುಲ್ಲಿನ ಮೆದೆಗಳು ಸುಟ್ಟು ಭಸ್ಮಗೊಂಡಿದೆ.ಬರದ ನಡುವೆ ಜಾನುವಾರುಗಳಿಗಾಗಿ ಸಂಗ್ರಹಿಸಿ ಹುಲ್ಲು ಕಳೆದುಕೊಂಡ ರೈತರ ಗೋಳು ಹೇಳತೀರದ್ದಾಗಿತ್ತು. ಸ್ಥಳಕ್ಕೆ ರಾಜಸ್ವ ನಿರೀಕ್ಷ, ಗ್ರಾಮ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂಬಂಧ ತಹಶೀಲ್ದಾರ್ ಕೆ.ಎನ್.ಲೋಕೇಶ್ ಮಾತನಾಡಿ, ಈಗಾಗಲೇ ಅಧಿಕಾರಿಗಳಿಂದ ವರದಿ ತರಿಸಿಕೊಂಡಿದ್ದು, ಪರಿಹಾರ ನೀಡುವ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.