ಹೊರಗಿನಿಂದ ತಂದ ಮದ್ಯ ಸೇವನೆ ಮಾಡಲು ಆಕ್ಷೇಪಣೆ ಮಾಡಿದ ರೆಸ್ಟೋರೆಂಟ್ : ಮಾರಕಾಸ್ತ್ರಗಳಿಂದ ಹಲ್ಲೆ

KannadaprabhaNewsNetwork |  
Published : Dec 03, 2024, 12:30 AM ISTUpdated : Dec 03, 2024, 06:38 AM IST
Delhi Liquor Dry Days

ಸಾರಾಂಶ

ಹೊರಗಿನಿಂದ ತಂದ ಮದ್ಯ ಸೇವನೆ ಮಾಡಲು ಆಕ್ಷೇಪಣೆ ಮಾಡಿದ ರೆಸ್ಟೋರೆಂಟ್ ಮ್ಯಾನೇಜರ್ ಮತ್ತು ಆತನ ಸ್ನೇಹಿತನ ಮೇಲೆ 10 ಮಂದಿ ಯುವಕರ ಗುಂಪು ಲಾಂಗ್ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಸಮೀಪದ ಸಿಪಾಯಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಭಾನುವಾರ ರಾತ್ರಿ ಜರುಗಿದೆ.

  ಮದ್ದೂರು : ಹೊರಗಿನಿಂದ ತಂದ ಮದ್ಯ ಸೇವನೆ ಮಾಡಲು ಆಕ್ಷೇಪಣೆ ಮಾಡಿದ ರೆಸ್ಟೋರೆಂಟ್ ಮ್ಯಾನೇಜರ್ ಮತ್ತು ಆತನ ಸ್ನೇಹಿತನ ಮೇಲೆ 10 ಮಂದಿ ಯುವಕರ ಗುಂಪು ಲಾಂಗ್ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಸೋಮನಹಳ್ಳಿ ಸಮೀಪದ ಸಿಪಾಯಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಭಾನುವಾರ ರಾತ್ರಿ ಜರುಗಿದೆ.

ಯುವಕರ ಗುಂಪು ರೆಸ್ಟೋರೆಂಟ್ ಪ್ರವೇಶ ದ್ವಾರದ ಗಾಜುಗಳಿಗೆ ಕಲ್ಲು ತೂರಿ ಜಖಂಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಸೋಮನಹಳ್ಳಿ ಸಮೀಪದ ಕೆಸ್ತೂರ್ ಕ್ರಾಸ್ ನಲ್ಲಿರುವ ಸಿಪಾಯಿ ರೆಸ್ಟೋರೆಂಟ್ ಮ್ಯಾನೇಜರ್ ದಿಲೀಪ್ 31 ಹಾಗೂ ಈತನ ಸ್ನೇಹಿತ ಚನ್ನಪಟ್ಟಣ ತಾಲೂಕು ಕೋಲೂರು ಗ್ರಾಮದ ಚೇತನ್ (35) ಮಾರಕಾಸ್ತ್ರಗಳ ಹಲ್ಲೆಯಿಂದ ಗಾಯಗೊಂಡಿದ್ದಾರೆ.

ಗಾಯಾಳುಗಳಿಗೆ ಮದ್ದೂರು ಆಸ್ಪತ್ರೆ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಪೈಕಿ ಗಂಭೀರವಾಗಿ ಗಾಯಗೊಂಡಿರುವ ಚೇತನ್ ನನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪರಿಸ್ಥಿತಿ ಚಿಂತಾ ಜನಕವಾಗಿದೆ.

ತಾಲೂಕು ಚಿನ್ನನದೊಡ್ಡಿ ಗ್ರಾಮದ ಕೆಲ ಯುವಕರು ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಸಿಪಾಯಿ ರೆಸ್ಟೋರೆಂಟ್ ಗೆ ಆಗಮಿಸಿ ಹೊರಗಿನಿಂದ ತಂದ ಮದ್ಯವನ್ನು ಸೇವನೆ ಮಾಡುತ್ತಿದ್ದರು. ಈ ವೇಳೆ ರೆಸ್ಟೋರೆಂಟ್ ನ ಕ್ಯಾಶಿಯರ್ ಹೊರಗಿನಿಂದ ತಂದ ಮದ್ಯ ಸೇವನೆ ಮಾಡದಂತೆ ಆಕ್ಷೇಪಣೆ ಮಾಡಿದ್ದಾನೆ. ಈ ವಿಚಾರವಾಗಿ ಯುವಕರು ಮತ್ತು ಕ್ಯಾಶಿಯರ್ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಘಟನೆ ಕುರಿತಂತೆ ಕ್ಯಾಶಿಯರ್ ಹೊರಗೆ ಹೋಗಿದ್ದ ಮ್ಯಾನೇಜರ್ ದಿಲೀಪ್‌ಗೆ ಗಲಾಟೆ ಬಗ್ಗೆ ಮಾಹಿತಿ ನೀಡಿದ್ದಾನೆ. ರಾತ್ರಿ 11 ಗಂಟೆ ಸುಮಾರಿಗೆ ಚೇತನ್ ನೊಂದಿಗೆ ರೆಸ್ಟೋರೆಂಟ್ ಗೆ ಆಗಮಿಸಿದ ದಿಲೀಪ್ ಘಟನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ ವೇಳೆ ಎರಡು ಕಾರುಗಳಲ್ಲಿ ಲಾಂಗು ಮತ್ತು ಮಚ್ಚುಗಳೊಂದಿಗೆ ಬಂದ ಹತ್ತು ಮಂದಿ ಯುವಕರ ಗುಂಪು ರೆಸ್ಟೋರೆಂಟ್ ನ ಪ್ರವೇಶದಾರದ ಗಾಜುಗಳಿಗೆ ಕಲ್ಲುತ್ತೂರಿ ದಾಂಧಲೆ ನಡೆಸಿದ ನಂತರ ಮ್ಯಾನೇಜರ್ ದಿಲೀಪ್ ಹಾಗೂ ಚೇತನ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ ಗಾಯಗೊಳಿಸಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಸಂಬಂಧ ಮದ್ದೂರು ಪೊಲೀಸರು ಹತ್ತು ಮಂದಿ ಆರೋಪಿಗಳ ವಿರುದ್ಧ ಬಿ ಎನ್ಎಸ್ ಕಾಯ್ದೆ 307 ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧಕಾರ್ಯ ಕೈಗೊಂಡಿದ್ದಾರೆ.

PREV

Recommended Stories

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!
ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!