- ವಾಟ್ಸಪ್ ಗ್ರೂಪ್‌ನಲ್ಲಿ ನಿಂದ್ಯ ಪೋಸ್ಟ್ ಹಂಚಿದ್ದ ಇಬ್ಬರ ಸೆರೆ । ಸಾಮಾಜಿಕ ಜಾಲತಾಣ ಬಳಸುವಾಗ ಜಾಗ್ರತೆ ಇರಲಿ: ಎಸ್ಪಿ ಎಚ್ಚರಿಕೆ
ಶ್ರೀರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಾಟ್ಸಪ್ ಗ್ರೂಪ್‌ನಲ್ಲಿ ಯಾರೋ ಒಬ್ಬ ವ್ಯಕ್ತಿಯು ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ರಜಾ ನೀಡುವ ವಿಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅವಹೇಳನಾಕಾರಿ ಯಾಗಿ ಮಾತನಾಡಿ, ವಾಯ್ಸ್ ಮೆಸೇಜ್ ವಾಟ್ಸಪ್ ಗ್ರೂಪ್‌ಗೆ ಹಾಕಿದ್ದನು. ಈ ವಾಯ್ಸ್ ಮೆಸೇಜ್ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡಿತ್ತು. ಈ ವಾಯ್ಸ್ ಮೆಸೇಜ್ ಮಾಡಿದರವರ ಮೊಬೈಲ್ ನಂಬರ್ ಮಾಹಿತಿ ಸಂಗ್ರಹಿಸಿ, ಗ್ರೂಪ್‌ನಲ್ಲಿ ವಾಯ್ಸ್ ಮೆಸೇಜ್ ಶೇರ್ ಮಾಡಿದ್ದ ವ್ಯಕ್ತಿಯನ್ನು ಇಲ್ಲಿನ ಕೆಟಿಜೆ ನಗರ ಪೊಲೀಸರು ಪತ್ತೆ ಮಾಡಿ, ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.ಮುಖ್ಯಮಂತ್ರಿಗಳಿಗೆ ಅವಾಚ್ಯ ಶಬ್ಧಗಳಿಂದ ಬೈದಾಡಿ, ಸಮುದಾಯಗಳ ಮಧ್ಯೆ ದ್ವೇಷ ಭಾವನೆಗಳನ್ನುಂಟು ಮಾಡುವ ವಾಯ್ಸ್ ಮೆಸೇಜ್ ಮಾಡಿ, ತನ್ನ ವಾಟ್ಸಪ್ ಗ್ರೂಪ್ ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದ ಆರೋಪಿಯ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ವಾಯ್ಸ್ ಮೆಸೇಜ್ ಶೇರ್ ಮಾಡಿದ್ದ ವ್ಯಕ್ತಿಯನ್ನು ಕೆಟಿಜೆ ನಗರ ಪೊಲೀಸರು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಚೋದನಾಕಾರಿ ಪೋಸ್ಟ್: ಕಾನೂನು ಕ್ರಮ ನಿಶ್ಚಿತ
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್‌ಗಳನ್ನು ಹಾಕುವುದು, ಶೇರ್ ಮಾಡುವುದನ್ನು ಯಾರೇ ಮಾಡಿದರೂ ಅಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆಯಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು, ವಿದ್ಯಾರ್ಥಿ, ಯುವ ಜನರು ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳ ಬಳಸುವಾಗ ಎಚ್ಚರ ವಹಿಸಬೇಕು ಎಂದು ಅವರು ಸೂಚ್ಯವಾಗಿ ತಿಳಿಸಿದ್ದಾರೆ.