ಓಂ ಪ್ರಕಾಶ್‌ ಕೊಲೆ ಕೇಸ್‌ : ಆರೋಪಿ ಪಲ್ಲವಿ 7 ದಿನ ಸಿಸಿಬಿ ಕಸ್ಟಡಿಗೆ

KannadaprabhaNewsNetwork |  
Published : Apr 25, 2025, 01:50 AM ISTUpdated : Apr 25, 2025, 04:21 AM IST
Former Karnataka DGP Om Prakash

ಸಾರಾಂಶ

ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಭೀಕರ ಕೊಲೆ ಪ್ರಕರಣದ ಆರೋಪಿಯೂ ಆಗಿರುವ ಪತ್ನಿ ಪಲ್ಲವಿಯನ್ನು ಸಿಸಿಬಿ ಪೊಲೀಸರು ಏಳು ದಿನಗಳ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

 ಬೆಂಗಳೂರು : ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್‌ ಭೀಕರ ಕೊಲೆ ಪ್ರಕರಣದ ಆರೋಪಿಯೂ ಆಗಿರುವ ಪತ್ನಿ ಪಲ್ಲವಿಯನ್ನು ಸಿಸಿಬಿ ಪೊಲೀಸರು ಏಳು ದಿನಗಳ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಸಿಸಿಬಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದ್ದು, ಪಲ್ಲವಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈಗಾಗಲೇ ಆರೋಪಿ ಪಲ್ಲವಿ ತಾನೇ ಪತಿ ಓಂ ಪ್ರಕಾಶ್‌ ಅವರನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಾರಣ ಅಥವಾ ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಕೊಲೆಗೆ ಕಾರಣ ಕುರಿತು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಎಚ್‌ಎಸ್‌ಆರ್‌ ಲೇಔಟ್‌ನ ನಿವಾಸದಲ್ಲಿ ಏ.20ರಂದು ಮಧ್ಯಾಹ್ನ ಓಂ ಪ್ರಕಾಶ್‌ ಅವರು ಊಟ ಮಾಡುತ್ತಿದ್ದರು. ಈ ವೇಳೆ ಪತ್ನಿ ಪಲ್ಲವಿ ಚಾಕುವಿನಿಂದ ಮನಬಂದಂತೆ ಇರಿದು ಓಂ ಪ್ರಕಾಶ್‌ ಅವರನ್ನು ಕೊಲೆ ಮಾಡಿದ್ದರು. ಬಳಿಕ ಪಲ್ಲವಿ ತನ್ನ ಸ್ನೇಹಿತೆಗೆ ವಿಡಿಯೋ ಕಾಲ್‌ ಮಾಡಿ ಪತಿಯ ಕೊಲೆ ವಿಚಾರ ತಿಳಿಸಿದ್ದರು. ಸುದ್ದಿ ತಿಳಿದ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪಲ್ಲವಿ ಮತ್ತು ಆಕೆಯ ಪುತ್ರಿ ಕೃತಿಯನ್ನು ವಶಕ್ಕೆ ಪಡೆದಿದ್ದರು. ಬಳಿಕ ಪಲ್ಲವಿ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದರು.

ಪ್ರಕರಣದ ಗಂಭೀರತೆ ಅರಿತ ನಗರ ಪೊಲೀಸ್‌ ಆಯುಕ್ತರು ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಇದರ ಬೆನ್ನಲ್ಲೇ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಪ್ರಕರಣದ ಕಡತಗಳು ಹಾಗೂ ದಾಖಲೆಗಳನ್ನು ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಿದ್ದರು. ಇದೀಗ ತನಿಖೆ ಆರಂಭಿಸಿರುವ ಸಿಸಿಬಿ ಪೊಲೀಸರು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಪಲ್ಲವಿಯನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಇನ್ನು ಈ ಕೊಲೆಯಲ್ಲಿ ಪುತ್ರಿ ಕೃತಿ ಮನೆಯಲ್ಲೇ ಇದ್ದಳು. ಆದರೆ, ಕೃತ್ಯದಲ್ಲಿ ಆಕೆಯ ಪಾತ್ರದ ಬಗ್ಗೆ ಸದ್ಯಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಖಿನ್ನತೆಯಿಂದ ಬಳಲುತ್ತಿರುವ ಕೃತಿಯನ್ನು ಸದ್ಯ ನಿಮ್ಹಾನ್ಸ್‌ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಕೆ ಚೇತರಿಸಿಕೊಂಡ ಬಳಿಕ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!