ರೇಣುಕಾಸ್ವಾಮಿ ಕೊಲೆಗೆ ಆಕ್ರೋಶ: ಸಂಘಟನೆಗಳ ಪ್ರತಿಭಟನೆ

KannadaprabhaNewsNetwork |  
Published : Jun 19, 2024, 01:04 AM IST
ರೇಣುಕಾಸ್ವಾಮಿ ಕೊಲೆ ಖಂಡಿಸಿ ವೀರಶೈವ ಲಿಂಗಾಯತ ಸಂಘಟನೆಗಳ ಪ್ರತಿಭಟನೆ | Kannada Prabha

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಗರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತು,

ನಗರದಲ್ಲಿ ವೀರಶೈವ ಲಿಂಗಾಯತ ಸಂಘಟನೆಗಳ ಬೃಹತ್ ಪ್ರತಿಭಟನೆ, ದರ್ಶನ್ ಚಿತ್ರದ ಸಿಡಿಗೆ ಬೆಂಕಿ

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಚಿತ್ರನಟ ದರ್ಶನ್ ಮತ್ತು ಪವಿತ್ರಗೌಡ ಹಾಗೂ ಸಹಚರರು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದನ್ನು ಖಂಡಿಸಿ ವೀರಶೈವ ಲಿಂಗಾಯತ ಸಂಘಟನೆಗಳಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.

ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನದ ಮುಂಭಾಗ ಆಗಮಿಸಿ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು,

ಭುವನೇಶ್ವರಿ ವೃತ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು ದರ್ಶನ್ ನಟನೆಯ ಸಿನಿಮಾ ಸಿಡಿಗಳು, ಪೋಸ್ಟರ್ ಗಳನ್ನು ಸುಟ್ಟು ಆಕ್ರೊಶ ಹೊರಹಾಕಿದರು.

ಈ ನಡುವೆ ಪೊಲೀಸರು ಮಧ್ಯ ಪ್ರವೇಶ ಮಾಡಿದ್ದರಿಂದ ಕೆಲಕಾಲ ಪ್ರತಿಭಟನಾಕಾರರು ಹಾಗೂ ಖಾಕಿ ನಡುವೆ ಜಟಾಪಟಿ ನಡೆಯಿತು. ಬಳಿಕ, ಜಿಲ್ಲಾಡಳಿತ ಭನವನದ ತನಕ ಮೆರವಣಿಗೆಯಲ್ಲಿ ತೆರಳಿ ನಟನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಮೆರವಣಿಗೆಯುದ್ದಕ್ಕೂ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಹೇಯಕೃತ್ಯ;

ಈ ಸಂದರ್ಭದಲ್ಲಿ ಮಾತನಾಡಿದ ಮಹಾಸಭಾ ಗೌರವ ಅಧ್ಯಕ್ಷರಾದ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ, ಮರಿಯಾಲದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ನಗರದ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಘಟನೆಯನ್ನು ಖಂಡಿಸಿ, ಇದೊಂದು ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಹೇಯಕೃತ್ಯ ಎಂದರು.

ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೇ, ಆರೋಪಿ ಸ್ಥಾನದಲ್ಲಿರುವವರನ್ನು ರಕ್ಷಿಸದೇ, ಸರ್ಕಾರವು ಈ ವಿಷಯದಲ್ಲಿ ನಿರ್ಲಕ್ಷ್ಯ ತೋರದೆ ಮೃತನ ಕುಟುಂಬದ ಜೊತೆ ನಿಲ್ಲುವುದು ಆದ್ಯ ಕರ್ತವ್ಯವಾಗಿದೆ. ಆ ಕುಟುಂಬಕ್ಕೆ ಹೆಚ್ಚಿನ ನೆರವನ್ನು ಶೀಘ್ರದಲ್ಲಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವೀರಶೈವ ಲಿಂಗಾಯತ ಜನಾಂಗವನ್ನು ಗುರಿಯಾಗಿರಿಸಿಕೊಂಡು ಹತ್ಯೆಯಂತಹ ಪ್ರಕರಣಗಳು ಜರುಗುತ್ತಿವೆ. ನೇಹಾ ಹತ್ಯೆ ಬಳಿಕ ರೇಣುಕಾಸ್ವಾಮಿ ಹತ್ಯೆ ಮಾಡಿರುವುದು ಖಂಡನೀಯ ಎಂದರು,

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ಕಾರ್ಯ ಶ್ಲಾಘನೀಯ. ಹತ್ಯೆಯಾದ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು. ಜೊತೆಗೆ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೀರಶ್ಯವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಕೋಡಿಮೋಳೆ ರಾಜಶೇಖರ್, ನಾಗೇಂದ್ರ (ಪುಟ್ಟು) ಆಲೂರು ಮಲ್ಲು, ಹಂಗಳ ನಂಜಪ್ಪ, ಹೊಸೂರು ನಟೇಶ್, ಪುಟ್ಟಮಲ್ಲಪ್ಪ,ಡಾ. ಪರಮೇಶ್ವರಪ್ಪ, ಎನ್‌ರಿಚ್‌ ಮಹದೇವಸ್ವಾಮಿ, ಶ್ರೀಕಂಠಸ್ವಾಮಿ, ರತ್ನಮ್ಮ, ಬಿ.ಕೆ. ರವಿಕುಮಾರ್, ಬಸಪ್ಪ, ಬಸವರಾಜು, ವೀರಭದ್ರಸ್ವಾಮಿ, ಬಸವರಾಜು, ನಾಗರಾಜು, ನಟೇಶ್, ಸುಂದ್ರಪ್ಪ, ಬಸವಣ್ಣ, ಜೆ. ದೊರೆಸ್ವಾಮಿ, ಮಹದೇವಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು, ಬಸವ ಬಳಗಗಳು ಹಾಗೂ ಮಹಿಳಾ ಕದಳಿ ವೇದಿಕೆ ಮತ್ತು ಸಮಾಜದ ಬಂಧುಗಳು ಭಾಗವಹಿಸಿದ್ದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ