ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ವಿರುದ್ಧ ಭಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿ ಲೋಕಾ ಎಫ್‌ಐಆರ್

KannadaprabhaNewsNetwork | Updated : Mar 30 2025, 04:20 AM IST

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ಜಯನಗರ ನಿವಾಸಿ ಆರ್.ಅಮಿತ್ ಅವರು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಪುರುಷೋತ್ತಮ ಎಂಬುವರ ವಿರುದ್ಧ ದೂರು ನೀಡಿದ್ದು, ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಸೂಚನೆಯನ್ವಯ ಇಬ್ಬರ ವಿರುದ್ಧ ಭಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.

  ಮಂಡ್ಯ : ಕೆ.ಆರ್.ಪೇಟೆ ತಾಲೂಕು ವಡ್ಡರಗುಡಿ ಗ್ರಾಮದ ಜಮೀನಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಅವರು 3 ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕೆ.ಆರ್.ಪೇಟೆ ಪಟ್ಟಣದ ಜಯನಗರ ನಿವಾಸಿ ಆರ್.ಅಮಿತ್ ಅವರು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಪುರುಷೋತ್ತಮ ಎಂಬುವರ ವಿರುದ್ಧ ದೂರು ನೀಡಿದ್ದು, ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಸೂಚನೆಯನ್ವಯ ಇಬ್ಬರ ವಿರುದ್ಧ ಭಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.

ದೂರಿನಲ್ಲೇನಿದೆ?:

ಕೆ.ಆರ್.ಪೇಟೆ ತಾಲೂಕು ಅಕ್ಕಿಹೆಬ್ಬಾಳು ಹೋಬಳಿ ವಡ್ಡರರಗುಡಿ ಗ್ರಾಮದ ಸರ್ವೇ ನಂ.೮೮ರಲ್ಲಿ ೫ ಎಕರೆ ಜಮೀನಿಗೆ ಸಂಬಂಧಿಸಿದಂತೆ ಪಾಂಡವಪುರ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ೩೧ ಜನವರಿ ೨೦೨೫ರಂದು ಆರ್ಡರ್ ಶೀಟ್‌ನಲ್ಲಿ ದೂರುದಾರ ಅಮಿತ್ ಅವರ ತಾಯಿ ಶಿವಮ್ಮ ಅವರ ಸಹಿಯನ್ನು ಪಡೆದು ಪ್ರಕರಣದ ಮುಂದಿನ ಆದೇಶಕ್ಕೆ ಕಾಯ್ದಿರಿಸಿರುವುದು ಕಂಡುಬಂದಿದೆ.

೪ ಫೆಬ್ರವರಿ ೨೦೨೫ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ಮಾಡಿದ್ದು ಆದೇಶದಲ್ಲಿ ಡಿಜಿಟಲ್ ಸಹಿಯನ್ನು ೨೮ ಫೆಬ್ರವರಿ ೨೦೨೫ರಂದು ಮಾಡಿರುವುದು ಕಂಡುಬಂದಿದೆ. ನಂತರ ೧೩ ಫೆಬ್ರವರಿ ೨೦೨೫ ಮತ್ತು ೧೪ ಫೆಬ್ರವರಿ ೨೦೨೫ರಂದು ಪುರುಷೋತ್ತಮ ಎಂಬ ವ್ಯಕ್ತಿಯು ೭೭೯೫೪೬೨೦೭೨ ಮೊಬೈಲ್‌ನಿಂದ ಅಮಿತ್ ಮೊಬೈಲ್ ೯೬೧೧೯೬೯೬೭೫ ಸಂಖ್ಯೆಗೆ ಕರೆ ಮಾಡಿ ತಾನು ಪ್ರಕರಣದ ಎದುರು ವಕೀಲನೆಂಬುದಾಗಿ ಪರಿಚಯಿಸಿಕೊಂಡು ನಿನ್ನ ಪ್ರಕರಣ ಇತ್ಯರ್ಥ ಮಾಡಲು ಎಷ್ಟು ಹಣ ಕೊಡುತ್ತೀಯಾ ಎಂದು ಕೇಳಿದರು.

ಜಮೀನು ಪ್ರಕರಣದಲ್ಲಿ ಎರಡು ಆರ್‌ಟಿಸಿ ಇದ್ದು ಒಂದು ಪಹಣಿಗೆ ೧.೫೦ ಲಕ್ಷ ರು.ನಂತೆ ಒಟ್ಟು ೩ ಲಕ್ಷ ರು.ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆನಂತರ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರು ಅಮಿತ್ ಜೊತೆ ಪ್ರಕರಣದ ಬಗ್ಗೆ ಮಾತನಾಡಿ ಜಮೀನಿನ ವಿವರಗಳನ್ನು ಪಡೆದುಕೊಂಡಿರುತ್ತಾರೆ. ಈ ಸಂಭಾಷಣೆಯನ್ನು ಅಮಿತ್ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ೧೩ ಮಾರ್ಚ್ ೨೦೨೫ರಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದರು.

ಈ ದೂರನ್ನು ಪರಿಶೀಲನೆಗೊಳಪಡಿಸಿ ಪರಿಶೀಲನಾ ವರದಿಯನ್ನು ನೀಡುವಂತೆ ಲೋಕಾಯುಕ್ತ ಡಿವೈಎಸ್ಪಿ ಎಚ್.ಟಿ. ಸುನೀಲ್‌ಕುಮಾರ್ ಅವರಿಗೆ ನೀಡಿದ್ದು, ಅವರು ಇದನ್ನು ಪರಿಶೀಲನೆಗೊಳಪಡಿಸಿ ವಿಚಾರಣಾ ವರದಿಯನ್ನು ಮಾ.೨೦ರಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ನೀಡಿದ್ದರು. ಪೊಲೀಸ್ ಅಧೀಕ್ಷಕರು ದೂರು ದಾಖಲಿಸುವಂತೆ ಸೂಚನೆ ನೀಡಿದ್ದರ ಮೇರೆಗೆ ಕಲಂ ೭(ಎ) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ೧೯೮೮ (ತಿದ್ದುಪಡಿ ಕಾಯ್ದೆ-೨೦೧೮)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Share this article