ಬೃಹತ್ ಗೋಡೆ ನಿರ್ಮಿಸಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು 3 ಹೋಳು : ರಾಜ್ಯ ಸರ್ಕಾರವು ಆದೇಶ

KannadaprabhaNewsNetwork |  
Published : Apr 05, 2025, 01:48 AM ISTUpdated : Apr 05, 2025, 04:29 AM IST
Parappana agrahara

ಸಾರಾಂಶ

ಕೈದಿಗಳಿಗೆ ವಿಶೇಷ ಸವಲತ್ತು ಸೇರಿದಂತೆ ಸೆರೆಮನೆಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ಮೂರು ಕಾರಾಗೃಹಗಳಾಗಿ ವಿಭಜಿಸಿ ರಾಜ್ಯ ಸರ್ಕಾರವು ಆದೇಶಿಸಿದೆ.

 ಬೆಂಗಳೂರು :  ಕೈದಿಗಳಿಗೆ ವಿಶೇಷ ಸವಲತ್ತು ಸೇರಿದಂತೆ ಸೆರೆಮನೆಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ಮೂರು ಕಾರಾಗೃಹಗಳಾಗಿ ವಿಭಜಿಸಿ ರಾಜ್ಯ ಸರ್ಕಾರವು ಆದೇಶಿಸಿದೆ.

ಈ ಆದೇಶ ಹಿನ್ನೆಲೆಯಲ್ಲಿ ಸಜಾ ಕೈದಿಗಳು, ವಿಚಾರಣಾಧೀನ ಕೈದಿಗಳು ಹಾಗೂ ಅತಿ ಭದ್ರತಾ ಕೈದಿಗಳ ಕಾರಾಗೃಹಗಳಾಗಿ ವಿಂಗಡಿಸಲಾಗಿದೆ. ಅಲ್ಲದೆ ಪರಪ್ಪನ ಅಗ್ರಹಾರದಲ್ಲಿರುವ ಮಹಿಳಾ ಕೈದಿಗಳ ವಿಭಾಗವು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಕಾರಾಗೃಹ ಇಲಾಖೆಯ ದಕ್ಷಿಣ ವಲಯ ಡಿಐಜಿ ದಿವ್ಯಶ್ರೀ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಭಜನೆ ಅಂತಿಮ ಹಂತದಲ್ಲಿದೆ. ಈಗಾಗಲೇ ಸಜಾ ಹಾಗೂ ವಿಚಾರಣಾಧೀನ ಕೈದಿಗಳ ವಿಭಾಗಗಳ ನಡುವೆ ಬೃಹತ್ ಗೋಡೆ ನಿರ್ಮಿಸಿ ಜೈಲುಗಳಾಗಿ ಪರಿವರ್ತಿಸಲಾಗುತ್ತಿದೆ. ಅತಿ ಭದ್ರತಾ ಕೈದಿಗಳಿಗೆ ಹೊಸ ಕಟ್ಟಡವು ನಿರ್ಮಾಣವಾಗುತ್ತಿದೆ ಎಂದು ಡಿಐಜಿ ಮಾಹಿತಿ ತಿಳಿದರು.

ಪ್ರಸುತ್ತ ಕೇಂದ್ರ ಕಾರಾಗೃಹದ ಅಧಿಕಾರಿ-ಸಿಬ್ಬಂದಿಯನ್ನು ಮೂರು ಕಾರಾಗೃಹಗಳಿಗೆ ಹಂಚಿಕೆ ಮಾಡಲಾಗುತ್ತಿದ್ದು, ಮುಂದಿನ ಹಂತದಲ್ಲಿ ಹೊಸ ಹುದ್ದೆಗಳ ಸೃಜನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಅಂತೆಯೇ ಸಜಾ ಹಾಗೂ ವಿಚಾರಣಾಧೀನ ಕೈದಿಗಳ ಕಾರಾಗೃಹಗಳಿಗೆ ಎಸ್ಪಿ ದರ್ಜೆ ಅಧಿಕಾರಿ ಮುಖ್ಯಸ್ಥರಾಗಲಿದ್ದು, ಅತಿ ಭದ್ರತಾ ಕಾರಾಗೃಹದ ಉಸ್ತುವಾರಿಗೆ ಹೆಚ್ಚುವರಿ ಎಸ್ಪಿ ದರ್ಜೆ ಅಧಿಕಾರಿ ನೇಮಕವಾಗಲಿದ್ದಾರೆ. ಈ ಮೂರು ಕಾರಾಗೃಹಗಳ ಉಸ್ತುವಾರಿಗೆ ಮುಖ್ಯ ಅಧೀಕ್ಷರಿರುತ್ತಾರೆ ಎಂದು ದಿವ್ಯಶ್ರೀ ಹೇಳಿದರು.

ಭದ್ರತೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯದಲ್ಲಿ ಅತಿ ಹೆಚ್ಚು ಕೈದಿಗಳ ಬಾಹುಳ್ಯದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ವಿಭಜನೆಗೆ ಸರ್ಕಾರಕ್ಕೆ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾಪವು ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಹಾಗೂ ನಟ ದರ್ಶನ್‌ ಹಾಗೂ ಅವರ ಸಹಚರರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿದ್ದ ಪ್ರಕರಣ ಬಯಲಾಗಿತ್ತು. ಕೊನೆಗೆ ವಿಐಪಿ ಸೌಲಭ್ಯ ಹಾಗೂ ಕೈದಿಗಳಿಗೆ ಗಾಂಜಾ ಪೂರೈಕೆ ಸೇರಿದಂತೆ ಸದಾ ಒಂದಿಲ್ಲೊಂದು ಅಕ್ರಮ ಕೃತ್ಯಗಳಿಂದ ವಿವಾದಕ್ಕೀಡಾಗುತ್ತಿದ್ದ ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲಿನ ಕಾನೂನುಬಾಹಿರ ಕೃತ್ಯಗಳಿಗೆ ಶಾಶ್ವತವಾಗಿ ನಿಯಂತ್ರಣಕ್ಕೆ ಕಾರಾಗೃಹವನ್ನು ವಿಭಜಿಸುವ ಪ್ರಸ್ತಾವನೆಗೆ ಸರ್ಕಾರವು ಸಮ್ಮತಿಸಿದೆ.

4800 ಕೈದಿಗಳಿಗೆ 400 ಸಿಬ್ಬಂದಿ ಕಾವಲು:

ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಹಾಗೂ ಸಜಾ ಸೇರಿ ಒಟ್ಟು 4800 ಕೈದಿಗಳಿದ್ದು, ಮುಖ್ಯ ಅಧೀಕ್ಷಕ, ಅಧೀಕ್ಷಕ ಹಾಗೂ ಸಹಾಯಕ ಅಧೀಕ್ಷಕ ಸೇರಿದಂತೆ 800 ಅಧಿಕಾರಿ-ಸಿಬ್ಬಂದಿ ಮಂಜೂರಾತಿ ಹುದ್ದೆಗಳಿವೆ. ಆದರೆ ಇದರಲ್ಲಿ ಅರ್ಧದಷ್ಟು ಅಂದರೆ ಸುಮಾರು 400 ಮಂದಿ ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸುತ್ತಿದ್ದು, ಉಳಿದ ಹುದ್ದೆಗಳು ಖಾಲಿ ಇವೆ. ಹೊಸ ಜೈಲುಗಳ ಸೃಜನೆಯಿಂದ ಅಡುಗೆ ಕೋಣೆ, ಆಸ್ಪತ್ರೆ ಹಾಗೂ ಸಂದರ್ಶಕರ ವಿಭಾಗಗಳು ಸಹ ಪ್ರತ್ಯೇಕವಾಗಲಿವೆ. ಅತಿ ಭದ್ರತಾ ವಿಭಾಗದಲ್ಲಿ 300 ರಿಂದ 400 ಕೈದಿಗಳನ್ನು ಬಂಧಿಸಿಡುವ ಸಾಮರ್ಥ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭದ್ರತೆ ಮತ್ತು ಆಡಳಿತದ ದೃಷ್ಟಿಯಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು 3 ಕಾರಾಗೃಹಗಳಾಗಿ ವಿಭಜಿಸಲಾಗಿದ್ದು, ಶೀಘ್ರದಲ್ಲೇ ಅವುಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ.

-ದಿವ್ಯಶ್ರೀ, ಕಾರಾಗೃಹ ಇಲಾಖೆಯ ದಕ್ಷಿಣ ವಲಯ ಡಿಐಜಿ.

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಹಿಂಸೆ ಸಹಿಸದೆ ಕುಡುಕ ಪತಿಯ ಕೊಲೆ: ಪತ್ನಿ, ಬಾವಿ ಅಳಿಯ ಸೆರೆ