ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆ ಜಿಲ್ಲೆಗಳಲ್ಲಿ ವಾಹನಗಳ ಕಳವು ಹಾಗೂ ಮನೆಗಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳ್ಳಂದೂರು ನಿವಾಸಿ ಉಲ್ಲಾಸ್ ಅಲಿಯಾಸ್ ಡಾಲಿ (21) ಮತ್ತು ನಂದಿನಿ ಲೇಔಟ್ ಸಾಕಮ್ಮ ಬಡಾವಣೆ ನಿವಾಸಿ ಚಂದ್ರು ಅಲಿಯಾಸ್ ಕವಾರ್ಡ(24) ಬಂಧಿತರು. ಆರೋಪಿಗಳಿಂದ ₹35 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣ, 30 ಗ್ರಾಂ ತೂಕದ ಬೆಳ್ಳಿ ನಾಣ್ಯಗಳು, 4 ಕಾರುಗಳು, 4 ದ್ವಿಚಕ್ರ ವಾಹನಗಳು, ₹2,480 ನಗದು ಹಾಗೂ 2 ಮೊಬೈಲ್ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಬನ್ನೇರುಘಟ್ಟ ಮುಖ್ಯರಸ್ತೆಯ ಎಲ್ಲೇನಹಳ್ಳಿಯ ನಿವಾಸಿಯೊಬ್ಬರು ತಮ್ಮ ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ರಾಜ್ಯದ ವಿವಿಧೆಡೆ ಕಳವು
ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಮಾಡಿದಾಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲೆಗಳಲ್ಲಿ ಮನೆಗಳವು, ದ್ವಿಚಕ್ರ ವಾಹನ, ಕಾರು ಕಳವು ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಚಿನ್ನಾಭರಣ, ಬೆಳ್ಳಿ, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
11 ಪ್ರಕರಣ ಪತ್ತೆ:
ಆರೋಪಿಗಳ ಬಂಧನದಿಂದ ಹುಳಿಮಾವು ಪೊಲೀಸ್ ಠಾಣೆಯ ಎರಡು ಎರಡು ಮನೆಗಳವು, 1 ದ್ವಿಚಕ್ರ ವಾಹನ, ಬನಶಂಕರಿ 1 ಕಾರು ಕಳವು, ಜಯನಗರ, ಮಡಿವಾಳ ತಲಾ 1 ದ್ವಿಚಕ್ರ ವಾಹನ ಕಳವು, ಸರ್ಜಾಪುರ ಕಾರು ಕಳವು ಹಾಗೂ ಮನೆಗಳವು, ಮಳವಳ್ಳಿ ಮನೆಗಳವು ಸೇರಿದಂತೆ ಒಟ್ಟು 11 ಪ್ರಕರಣಗಳು ಪತ್ತೆಯಾಗಿವೆ. ಉಳಿದ ಒಂದು ಕಾರು ಹಾಗೂ ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುಶ್ಚಟ, ಮೋಜುಗಾಗಿ ಕಳವು
ಇಬ್ಬರು ಆರೋಪಿಗಳು ಅಪರಾಧ ಹಿನ್ನೆಲೆವುಳ್ಳವರಾಗಿದ್ದಾರೆ. ದುಶ್ಚಟ ಹಾಗೂ ಮೋಜು ಮಾಡಲು ವಾಹನ ಕಳವು, ಮನೆಗಳವು ಕೃತ್ಯ ಎಸಗುತ್ತಿದ್ದರು. ಆರೋಪಿ ಉಲ್ಲಾಸ್ ವಿರುದ್ಧ ಈ ಹಿಂದೆ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 24 ಅಪರಾಧ ಪ್ರಕರಣಗಳು ದಾಖಲಾಗಿವೆ. ಆರೋಪಿ ಚಂದ್ರು ವಿರುದ್ಧ ಬೆಂಗಳೂರು, ಮಂಡ್ಯ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 21 ಅಪರಾಧ ಪ್ರಕರಣಗಳು ದಾಖಲಾಗಿವೆ. ಹಲವು ಪ್ರರಣಗಳಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗಳು ಜಾಮೀನು ಪಡೆದು ಹೊರಬಂದ ಬಳಿಕವೂ ತಮ್ಮ ಕಳವು ಚಾಳಿ ಮುಂದುವರೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.