ರೇಪ್‌ ಕೇಸಲ್ಲಿ ರಾಜಕಾರಣಿ ಪ್ರಜ್ವಲ್‌ ರೇವಣ್ಣಗೆ ಆಜೀವ ಜೈಲು

Published : Aug 03, 2025, 04:20 AM IST
Prajwal revanna

ಸಾರಾಂಶ

ಮನೆಗೆಲಸದ ವಯೋವೃದ್ಧ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಹಾಗೂ ಒಟ್ಟು 11.60 ಲಕ್ಷ ರು. ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ

  ಬೆಂಗಳೂರು :  ಮನೆಗೆಲಸದ ವಯೋವೃದ್ಧ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಹಾಗೂ ಒಟ್ಟು 11.60 ಲಕ್ಷ ರು. ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ತನ್ಮೂಲಕ ರಾಜ್ಯದ ಇತಿಹಾಸದಲ್ಲಿ ಮಾಜಿ ಸಂಸದನಂತಹ ರಾಜಕಾರಣಿಯೊಬ್ಬರು ಜೀವಾವಧಿ ಶಿಕ್ಷೆಗೆ ಗುರಿಯಾದ ಮೊದಲ ಪ್ರಕರಣ ದಾಖಲಾದಂತಾಗಿದೆ.

ಕೆ.ಆರ್.ನಗರದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪ್ರಜ್ವಲ್ ದೋಷಿ ಎಂದು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಶುಕ್ರವಾರವೇ ತೀರ್ಪು ನೀಡಿದ್ದರು. ಅದರಂತೆ, ಶನಿವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಪ್ರಜ್ವಲ್ ರೇವಣ್ಣಗೆ ಶನಿವಾರದಿಂದಲೇ ಅನ್ವಯವಾಗುವಂತೆ ಜೀವನ ಪರ್ಯಂತ ಜೈಲು ಶಿಕ್ಷೆ ಜಾರಿಯಾಗಿದೆ.

ಈ ತೀರ್ಪಿನಿಂದಾಗಿ ಕಳೆದ 14 ತಿಂಗಳಿಂದ ಜೈಲಿನಲ್ಲೇ ಇರುವ ಪ್ರಜ್ವಲ್‌ ಬದುಕಿರುವವರೆಗೂ ಜೈಲು ಶಿಕ್ಷೆ ಕಾಯಂ ಆಗಿದೆ.

ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ವಿರುದ್ಧದ ಈ ಗಂಭೀರ ಪ್ರಕರಣ ದಾಖಲಾದ ಕೇವಲ 14 ತಿಂಗಳೊಳಗೆ ವಿಚಾರಣೆ ಪೂರ್ಣಗೊಂಡು ಮಹತ್ವದ ತೀರ್ಪು ಹೊರಬಿದ್ದಂತಾಗಿದೆ. ಅಲ್ಲದೆ, ಪ್ರಜ್ವಲ್‌ ರೇವಣ್ಣ ವಿರುದ್ಧ ದಾಖಲಾಗಿರುವ ಮೂರು ಅತ್ಯಾಚಾರ ಪ್ರಕರಣಗಳ ಪೈಕಿ ಒಂದರಲ್ಲಿ ಶಿಕ್ಷೆ ಪ್ರಕಟವಾದಂತಾಗಿದೆ.

ಬಿಕ್ಕಿ ಬಿಕ್ಕಿ ಅತ್ತ ಪ್ರಜ್ವಲ್‌:

ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಶಿಕ್ಷೆ ಪ್ರಕಟಿಸುವಾಗ ಕಟಕಟೆಯಲ್ಲಿ ಕೈ ಕಟ್ಟಿ ಸಪ್ಪೆ ಮೋರೆಯಲ್ಲಿ ನಿಂತಿದ್ದ ಪ್ರಜ್ವಲ್‌, ಜೀವನ ಪರ್ಯಂತ ಜೈಲು ಶಿಕ್ಷೆ ಎಂದು ನ್ಯಾಯಾಧೀಶರು ಘೋಷಿಸಿದಾಗ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಬಳಿಕ ಕಣ್ಣೀರು ಸುರಿಸುತ್ತಲೇ ಜೈಲು ಅಧಿಕಾರಿಗಳೊಂದಿಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದತ್ತ ಪ್ರಯಾಣ ಬೆಳೆಸಿದರು. ಇದಕ್ಕೂ ಮುನ್ನ ಶನಿವಾರ ಬೆಳಗ್ಗೆ ಜೈಲು ಅಧಿಕಾರಿಗಳು ಅಪರಾಧಿ ಪ್ರಜ್ವಲ್‌ ರೇವಣ್ಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ಪ್ರಕಟಿಸುವ ಮುನ್ನ ಸಿಐಡಿ ಎಸ್‌ಐಟಿ ಪರ ಮತ್ತು ಪ್ರಜ್ವಲ್‌ ಪರ ವಕೀಲರಿಂದ ವಾದ-ಪ್ರತಿವಾದ ಆಲಿಸಿದರು.

ಕಾನೂನಿನ ಅರಿವಿದ್ದೂ ಹೀನ ಕೃತ್ಯ:

ಮೊದಲಿಗೆ ಎಸ್ಐಟಿ ಪರ ಸರ್ಕಾರಿ ವಿಶೇಷ ಅಭಿಯೋಜಕ ಬಿ.ಎನ್‌.ಜಗದೀಶ್‌, ಈ ಪ್ರಕರಣದಲ್ಲಿ ಸಂತ್ರಸ್ತೆಗೆ ಜೀವಕ್ಕಿಂತ ಹೆಚ್ಚಿನ ಹಾನಿಯಾಗಿದೆ. ಅಪರಾಧಿ ಪ್ರಜ್ವಲ್‌, ಆಕೆ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಲ್ಲದೆ ಲೈಂಗಿಕ ಕ್ರಿಯೆಯನ್ನು ಚಿತ್ರೀಕರಣ ಮಾಡಿದ್ದಾನೆ. ಆಕೆಯನ್ನು ಬ್ಲ್ಯಾಕ್‌ಮೇಲ್‌ ಮಾಡಿ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರದ ರೀತಿ ಆತನ ವಕ್ರ ಮನಸ್ಥಿತಿ ತೋರಿಸುತ್ತದೆ. ಆತ ಸಂಸದನಾಗಿದ್ದೂ ಕಾನೂನಿನ ಅರಿವಿದ್ದರೂ ಇಂತಹ ದುಷ್ಕೃತ್ಯ ಎಸಗಿದ್ದಾನೆ. ಹೀಗಾಗಿ ಇದೊಂದು ಗಂಭೀರವಾದ ಪ್ರಕರಣವಾಗಿದೆ ಎಂದರು.

ಮಾಡಿದ ತಪ್ಪಿಗೆ ಪಶ್ಚಾತ್ತಾಪವೇ ಇಲ್ಲ:

ಈತನ ವಿರುದ್ಧ ಇದೇ ಮಾದರಿಯ ಹಲವು ಪ್ರಕರಣಗಳಿವೆ. ಬಹಳಷ್ಟು ಜನರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಾನೆ. ವಿಡಿಯೋ ಚಿತ್ರೀಕರಿಸುವುದು ಗಂಭೀರ ಅಪರಾಧವಾಗಿದೆ. ಹೀಗಾಗಿ ಅಪರಾಧಿ ಪ್ರಜ್ವಲ್‌ಗೆ ಗರಿಷ್ಠ ಶಿಕ್ಷೆ ವಿಧಿಸಬೇಕು. ಈ ಮೂಲಕ ಇದು ಇತರರಿಗೆ ಎಚ್ಚರಿಕೆಯಾಗುವಂತೆ ನೋಡಿಕೊಳ್ಳಬೇಕು. ಜೀವನ ಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಬೇಕು. ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದೂ ಗಂಭೀರ ಅಪರಾಧ. ಈತ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಭಾವ ಹೊಂದಿಲ್ಲ. ಹೀಗಾಗಿ ಈತನಿಗೆ ಕಠಿಣ ಶಿಕ್ಷೆ ಒದಗಿಸಿ ಸಮಾಜಕ್ಕೆ ಸಂದೇಶ ನೀಡಬೇಕು ಎಂದು ಮನವಿ ಮಾಡಿದರು.

ಸಂಸದನಾಗಿ ಈತ ಮಾಡಿದ್ದೇನು?:

ಇದೇ ವೇಳೆ ಸಿಐಡಿ ಎಸ್‌ಐಟಿ ಪರ ಸರ್ಕಾರಿ ವಿಶೇಷ ಅಭಿಯೋಜಕ ಅಶೋಕ್‌ ನಾಯಕ್‌ ವಾದ ಮಂಡಿಸಿ, ಸಂಸದರೇ ಇಂತಹ ಹೀನ ಕೃತ್ಯ ಮಾಡಿರುವುದರಿಂದ ಗರಿಷ್ಠ ಶಿಕ್ಷೆ ವಿಧಿಸಬೇಕು. ಅಪರಾಧಿ ಪ್ರಜ್ವಲ್‌ ಕಿರಿಯ ವಯಸ್ಸಿಗೆ ರಾಜಕಾರಣಿಯಾಗಿ ಸಂಸದನಾಗಿದ್ದ. ಈತನನ್ನು ಜನ ಆಯ್ಕೆ ಮಾಡಿದ್ದು ಏಕೆ? ಈತ ಮಾಡಿದ್ದೇನು ಎಂಬುದನ್ನು ಗಮನಿಸಬೇಕು. ಈತನಿಗೆ ವಿಧಿಸುವ ಶಿಕ್ಷೆ ಸಮಾಜಕ್ಕೆ ಸಂದೇಶವಾಗಬೇಕು ಎಂದು ಮನವಿ ಮಾಡಿದರು.

ಜೀವಾವಧಿ ಶಿಕ್ಷೆ ಜತೆಗೆ ಅತಿ ಹೆಚ್ಚು ದಂಡ ವಿಧಿಸಬೇಕು. ಪ್ರಕರಣವೊಂದರಲ್ಲಿ 25 ಲಕ್ಷ ರು. ದಂಡ ವಿಧಿಸಿದ ಉದಾಹರಣೆ ಇದೆ. ಇಲ್ಲಿ ಪ್ರಜ್ವಲ್ ಬಡವನಲ್ಲ, ಕೋಟ್ಯಧಿಪತಿ. ಹೀಗಾಗಿ ಹೆಚ್ಚಿನ ದಂಡ ವಿಧಿಸಿ, ಅದರ ದೊಡ್ಡ ಭಾಗವನ್ನು ಸಂತ್ರಸ್ತೆಗೆ ನೀಡಬೇಕು. ಏಕೆಂದರೆ, ವಿಡಿಯೋ ವೈರಲ್‌ ಆಗಿರುವುದರಿಂದ ಆಕೆ ದುಡಿಯಲು ಎಲ್ಲೂ ಹೋಗದಂತಹ ಸ್ಥಿತಿ ಇದೆ. ಹೀಗಾಗಿ ಆಕೆಗೆ ಪರಿಹಾರದ ಅಗತ್ಯವಿದೆ ಎಂದು ಅಶೋಕ್‌ ನಾಯಕ್‌ ತಮ್ಮ ವಾದ ಮಂಡಿಸಿದರು.

ಪ್ರಜ್ವಲ್‌ ಜನ ಸೇವೆ ಮಾಡಿದ್ದಾನೆ:

ಪ್ರಜ್ವಲ್‌ ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲೆ ನಳಿನಿ ಮಾಯೇಗೌಡ, ಸರ್ಕಾರಿ ವಿಶೇಷ ಅಭಿಯೋಜಕರು ಸಮಾಜಕ್ಕೆ ಸಂದೇಶ ನೀಡಬೇಕು ಎಂದು ವಾದಿಸಿದ್ದಾರೆ. ಯುವ ಸಂಸದನಾಗಿ ಪ್ರಜ್ವಲ್‌ ಜನಸೇವೆ ಮಾಡಿದ್ದಾನೆ. ಹಣ ಮಾಡಲು ಆತ ರಾಜಕಾರಣಕ್ಕೆ ಬಂದಿಲ್ಲ. 2024ರ ಲೋಕಸಭಾ ಚುನಾವಣೆ ವೇಳೆಯೇ ವಿಡಿಯೋಗಳನ್ನು ವೈರಲ್‌ ಮಾಡಲಾಗಿದೆ. ಇದು ಪ್ರಜ್ವಲ್‌ ವಿರುದ್ಧದ ರಾಜಕೀಯ ಪ್ರೇರಿತ ಕ್ರಮ. ರಾಜಕೀಯ ಸ್ಥಾನಮಾನ ಶಿಕ್ಷೆಯ ಪ್ರಮಾಣ ನಿರ್ಧರಿಸುವಂತಾಗಬಾರದು. ಹಾಗೆ ಮಾಡಿದರೆ, ಇಷ್ಟು ದಿನದ ಒಳ್ಳೆ ಹೆಸರು ಏನಾಗಬೇಕು ಎಂದು ಪ್ರಶ್ನಿಸಿದರು.

ಭವಿಷ್ಯ ಗಮನಿಸಬೇಕು:

ವಾದ ಮುಂದುವರೆಸಿ, ಪ್ರಜ್ವಲ್‌ ವಯಸ್ಸು ಕೇವಲ 34. ಸಂತ್ರಸ್ತೆ ಸಮಾಜದಿಂದ ತಿರಸ್ಕೃತಗೊಂಡಿಲ್ಲ. ಆಕೆ ತನ್ನ ಸಂಸಾರದೊಂದಿಗೆ ಎಂದಿನಂತೆ ಜೀವನ ಸಾಗಿಸುತ್ತಿದ್ದಾರೆ. ಆಕೆಗೆ ವಿವಾಹವಾಗಿ ಮಕ್ಕಳಾಗಿವೆ. ಜೀವನ ನಡೆಯುತ್ತಿದೆ. ಪ್ರಜ್ವಲ್‌ ಇನ್ನೂ ಯುವಕನಾಗಿದ್ದು, ಆತನ ಭವಿಷ್ಯವನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.

ರಾಜಕೀಯ ಸ್ಥಾನಮಾನ ಶಿಕ್ಷೆಗೆ ಕಾರಣ ಆಗಬಾರದು:

ಈಗಾಗಲೇ ಮಾಧ್ಯಮಗಳಲ್ಲಿ ಆತನ ತೇಜೋವಧೆಯಾಗಿದೆ. ಬಂಧನವಾದಂದಿನಿಂದಲೂ ಆತ ಜೈಲಿನಲ್ಲಿದ್ದಾನೆ. ಆತನಿಗೆ ವಯಸ್ಸಾದ ತಂದೆ-ತಾಯಿ ಇದ್ದಾರೆ. ತಾತ ಮಾಜಿ ಪ್ರಧಾನಿಯಾಗಿದ್ದಾರೆ. ಹೀಗಾಗಿ ಆತನ ರಾಜಕೀಯ ಸ್ಥಾನಮಾನ ತೀವ್ರ ಶಿಕ್ಷೆಗೆ ಕಾರಣವಾಗಬಾರದು. ಇಲ್ಲಿ ಸಂತ್ರಸ್ತೆಗಿಂತ ಅಪರಾಧಿಗೆ ಹೆಚ್ಚಿನ ಹಾನಿಯಾಗಿದೆ ಎಂದು ವಾದಿಸಿದರು. ಇದಕ್ಕೆ ಎಸ್‌ಪಿಪಿ ಬಿ.ಎನ್‌.ಜಗದೀಶ್‌ ಆಕ್ಷೇಪ ವ್ಯಕ್ತಪಡಿಸಿದರು.

ಆಗಲೇ ಏಕೆ ಯಾರಿಗೂ ಹೇಳಲಿಲ್ಲ?:

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಕಟಕಟೆಯಲ್ಲಿ ನಿಂತಿದ್ದ ಅಪರಾಧಿ ಪ್ರಜ್ವಲ್‌ಗೆ ಕೊನೆಯಾದಾಗಿ ಏನಾದರೂ ಹೇಳುವಿರಾ? ಎಂದು ಕೇಳಿದರು. ಆಗ ಇಂಗ್ಲಿಷ್‌ನಲ್ಲಿ ಮಾತು ಆರಂಭಿಸಿದ ಪ್ರಜ್ವಲ್‌ ರೇವಣ್ಣ, ನಾನು ಹಲವು ಮಹಿಳೆಯರೊಂದಿಗೆ ಇಂತಹ ಕೃತ್ಯ ನಡೆಸಿದ್ದೇನೆ ಎಂದು ಆರೋಪಿಸಿದ್ದಾರೆ. ನಾನು ಸಂಸದನಾಗಿದ್ದಾಗ ಯಾರೂ ಇಂತಹ ಆರೋಪ ಮಾಡಲಿಲ್ಲ. ನಾನು ರೇಪ್‌ ಮಾಡಿದ್ದರೆ ಆಗಲೇ ಏಕೆ ಅವರು ಯಾರಿಗೂ ಹೇಳಲಿಲ್ಲ? ಚುನಾವಣೆ ಸಮಯದಲ್ಲಿ ಪೊಲೀಸರೇ ನನ್ನ ವಿರುದ್ಧ ಇಷ್ಟೆಲ್ಲಾ ಮಾಡಿದ್ದಾರೆ. ಈಗ ನ್ಯಾಯಾಲಯ ಏನೇ ತೀರ್ಮಾನ ಕೈಗೊಂಡರೂ ನಾನು ಒಪ್ಪಿಕೊಳ್ಳುತ್ತೇನೆ ಎಂದರು.

ನಾನು ಮೆರಿಟ್‌ ಸ್ಟೂಡೆಂಡ್‌:

ಬಳಿಕ ಕಣ್ಣೀರುಡುತ್ತಾ ಕನ್ನಡದಲ್ಲಿ ಮಾತು ಮುಂದುವರೆಸಿದ ಪ್ರಜ್ವಲ್‌, ನಾನು ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಓದಿದ್ದೇನೆ. ನಾನು ಮೆರಿಟ್‌ ವಿದ್ಯಾರ್ಥಿಯಾಗಿದ್ದೆ. ಇಷ್ಟಕ್ಕೆಲ್ಲ ನಾನು ರಾಜಕೀಯದಲ್ಲಿ ಬೇಗ ಬೆಳೆದಿದ್ದೇ ಕಾರಣ. ಕಳೆದ ಆರು ತಿಂಗಳಿಂದ ತಂದೆ-ತಾಯಿಯನ್ನು ನೋಡಿಲ್ಲ ಎಂದು ಕಣ್ಣೀರು ಸುರಿಸಿದರು.

ಪ್ರಜ್ವಲ್​ ರೇವಣ್ಣಗೆ ಯಾವ ಸೆಕ್ಷನ್ ಅಡಿ ಎಷ್ಟು ಶಿಕ್ಷೆ, ದಂಡ?

ಐಪಿಸಿ ಸೆಕ್ಷನ್ 376 (2)(ಕೆ)- ಅತ್ಯಾಚಾರ-ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರು. ದಂಡ

ಐಪಿಸಿ ಸೆಕ್ಷನ್‌ 376(2)(ಎನ್‌)- ಸಾರ್ವಜನಿಕ ಸೇವಕ ಅಧಿಕಾರ ದುರ್ಬಳಕೆ ಮಾಡಿ ಅತ್ಯಾಚಾರ- ಜೀವನಪರ್ಯಂತ ಜೈಲು, 5 ಲಕ್ಷ ರು. ದಂಡ

ಐಪಿಸಿ ಸೆಕ್ಷನ್‌ 354(ಎ) -ಲೈಂಗಿಕ ಕಿರುಕುಳ, ಬಲವಂತದ ದೈಹಿಕ ಸಂಪರ್ಕ- 3 ವರ್ಷ ಜೈಲು, 25 ಸಾವಿರ ರು. ದಂಡ

ಐಪಿಸಿ ಸೆಕ್ಷನ್‌ 354 (ಬಿ)- ಬಲವಂತದಿಂದ ವಿವಸ್ತ್ರಗೊಳಿಸುವುದು- 7 ವರ್ಷ ಜೈಲು, 50 ಸಾವಿರ ರು. ದಂಡ

ಐಪಿಸಿ ಸೆಕ್ಷನ್‌ 354 (ಸಿ)- ಮಹಿಳೆಯ ಖಾಸಗಿ ಚಿತ್ರ ಸೆರೆ ಹಿಡಿಯುವುದು- 3 ವರ್ಷ ಜೈಲು, 25 ಸಾವಿರ ರು. ದಂಡ

ಐಪಿಸಿ ಸೆಕ್ಷನ್‌ 506- ಕ್ರಿಮಿನಲ್ ಬೆದರಿಕೆ- 2 ವರ್ಷ ಜೈಲು, 10 ಸಾವಿರ ರು. ದಂಡ

ಐಪಿಸಿ ಸೆಕ್ಷನ್ 201- ಸಾಕ್ಷ್ಯ ನಾಶ- 3 ವರ್ಷ ಜೈಲು 25 ಸಾವಿರ ರು.ದಂಡ

ಐಟಿ ಕಾಯ್ದೆ ಸೆಕ್ಷನ್‌ 66(ಇ)- ವ್ಯಕ್ತಿಯ ಗೌಪ್ಯತೆ ಉಲ್ಲಂಘನೆ- 3 ವರ್ಷ ಜೈಲು, 25 ಸಾವಿರ ರು. ದಂಡ

ಪ್ರಜ್ವಲ್‌ ಮುಂದಿನ ದಾರಿ

- ತೀರ್ಪಿಗೆ ತಡೆ ಅಥವಾ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು

- ಹೈಕೋರ್ಟ್‌ ಈ ಅರ್ಜಿಗೆ ತಡೆ ನೀಡಬಹುದು ಅಥವಾ ಶಿಕ್ಷೆ ಪ್ರಮಾಣ ಕೊಂಚ ಕಡಿಮೆ ಮಾಡಬಹುದು

- ಒಂದು ವೇಳೆ ಈ ತೀರ್ಪು ಎತ್ತಿ ಹಿಡಿದರೆ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು

- ಸುಪ್ರೀಂ ಕೋರ್ಟ್‌ ಸಹ ಕೆಳ ನ್ಯಾಯಾಲಯದ ಆದೇಶ ಎತ್ತಿ ಹಿಡಿದರೆ ಪ್ರಜ್ವಲ್‌ಗೆ ಸೆರೆವಾಸವೇ ಗತಿ

ಪ್ರಜ್ವಲ್‌ ವಿರುದ್ಧ ಇನ್ನೂ

ಎರಡು ರೇಪ್‌ ಪ್ರಕರಣ

ಪ್ರಜ್ವಲ್‌ ರೇವಣ್ಣ ವಿರುದ್ಧ ಇನ್ನೂ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಹೊಳೆನರಸಿಪುರದ ಮನೆಯಲ್ಲಿ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಸಂಬಂಧ ಹೊಳೆನರಸೀಪುರ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಪಂ ಮಾಜಿ ಸದಸ್ಯೆ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ಸಿಐಡಿ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣಗಳ ತನಿಖೆ ನಡೆಸಿರುವ ಎಸ್‌ಐಟಿ ಅಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಹ ಸಲ್ಲಿಸಿದ್ದಾರೆ. ಈ ಎರಡೂ ಪ್ರಕರಣಗಳು ಹಾಗೂ ಸಿ.ಡಿ.ಹಂಚಿಕೆ ಪ್ರಕರಣ ವಿಚಾರಣೆ ಹಂತದಲ್ಲಿವೆ. ಈ ವರ್ಷಾಂತ್ಯದೊಳಗೆ ವಿಚಾರಣೆ ಪೂರ್ಣಗೊಂಡು ತೀರ್ಪು ಹೊರಬೀಳುವ ಸಾಧ್ಯತೆಯಿದೆ.

ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ. ನ್ಯಾಯಾಲಯ ಸಮಾಜಕ್ಕೆ ಒಂದು ಕಠಿಣ ಸಂದೇಶ ರವಾನಿಸಿದೆ. ಜೀವಾವಧಿ ಶಿಕ್ಷೆ ಅಂದರೆ, ಜೀವನದುದ್ದಕ್ಕೂ ಜೈಲಿನಲ್ಲಿ ಇರಬೇಕಾಗುತ್ತದೆ. ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸುವ ಮುಖಾಂತರ ಕಾನೂನು ಮುರಿಯುವವವರಿಗೆ ಕಠಿಣ ಸಂದೇಶ ರವಾನಿಸಿದೆ.

- ಅಶೋಕ್‌ ನಾಯಕ್‌, ಸರ್ಕಾರಿ ವಿಶೇಷ ಅಭಿಯೋಜಕ

ಪ್ರಕರಣದ ಟೈಮ್‌ ಲೈನ್‌

- 2024ರ ಏ.1ರಂದು ಲೈಂಗಿಕ ದೌರ್ಜನ್ಯದ ವಿಡಿಯೋಗಳ ಪೆನ್‌ ಡ್ರೈವ್‌ ಹಂಚಿಕೆ

- ಏ.20ರಂದು ಈ ಪೆನ್‌ ಡ್ರೈವ್‌ ಹಂಚಿಕೆ ಸಂಬಂಧ ಹಾಸನದಲ್ಲಿ ಪ್ರಕರಣ ದಾಖಲು

- ಏ.26ರಂದು ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ ಪೋರ್ಟ್‌ ಬಳಸಿ ವಿದೇಶ ಪ್ರಯಾಣ

- ಏ.27ರಂದು ಹಾಸನದ ಲೈಂಗಿಕ ದೌರ್ಜನ್ಯ ಕೇಸ್‌ಗಳ ತನಿಖೆಗೆ ಸರ್ಕಾರದಿಂದ ಎಸ್ಐಟಿ ರಚನೆ

- ಏ.30ರಂದು ಜೆಡಿಎಸ್‌ನಿಂದ ಪ್ರಜ್ವಲ್‌ ರೇವಣ್ಣ ವಜಾ

- ಮೇ 2ರಂದು ಮನೆಗೆಲಸದ ಮಹಿಳೆಯಿಂದ ಪ್ರಜ್ವಲ್‌ ಹಾಗೂ ಎಚ್‌.ಡಿ.ರೇವಣ್ಣ ವಿರುದ್ಧ ಹೊಳೆನರಸೀಪುರ ಟೌನ್‌ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲು

- ಮೇ 2 ರಂದು ಕೆ.ಆರ್‌.ನಗರ ಮೂಲದ ಸಂತ್ರಸ್ತೆ ಅಪಹರಣ

- ಮೇ 2ರಂದು ಸಂತ್ರಸ್ತೆ ಅಪಹರಣ ಸಂಬಂಧ ಎಚ್‌.ಡಿ.ರೇವಣ್ಣ ವಿರುದ್ಧ ಕೆ.ಆರ್‌.ನಗರ ಠಾಣೆಯಲ್ಲಿ ಪ್ರಕರಣ ದಾಖಲು

- ಮೇ 4ರಂದು ಅಪಹರಣ ಪ್ರಕರಣ ಸಂಬಂಧ ಎಚ್.ಡಿ.ರೇವಣ್ಣ ಬಂಧನ

- ಮೇ 7ರಂದು ಪ್ರಜ್ವಲ್‌ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ

- ಮೇ 31 ರಂದು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ ಬಂಧಿಸಿದ ಎಸ್ಐಟಿ ಮಹಿಳಾ ತಂಡ

- ಸೆ.8ರಂದು ಪ್ರಜ್ವಲ್‌ ವಿರುದ್ಧ ನ್ಯಾಯಾಲಯಕ್ಕೆ ಜಾರ್ಜ್‌ ಶೀಟ್‌ ಸಲ್ಲಿಸಿದ ಎಸ್ಐಟಿ

- ನ.11ರಂದು ಸುಪ್ರೀಂ ಕೋರ್ಟ್‌ ಪ್ರಜ್ವಲ್‌ನ ಜಾಮೀನು ಅರ್ಜಿ ತಿರಸ್ಕಾರ

- 2025 ಮೇ 2ರಂದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭ

- ಜು.18ರಂದು ವಿಚಾರಣೆ ಮುಕ್ತಾಯ

- ಆ.1ರಂದು ಪ್ರಜ್ವಲ್‌ ದೋಷಿ ಎಂದು ತೀರ್ಪು

- ಆ.2ರಂದು ಅಪರಾಧಿ ಪ್ರಜ್ವಲ್‌ಗೆ ಶಿಕ್ಷೆ ಪ್ರಮಾಣ ಪ್ರಕಟ

ಪ್ರಕರಣದ ಹಿನ್ನೆಲೆ:

ಕಳೆದ ಲೋಕಸಭಾ ಚುನಾವಣೆ ವೇಳೆ ಅಂದಿನ ಸಂಸದ ಪ್ರಜ್ವಲ್‌ ರೇವಣ್ಣ ಅವರದು ಎನ್ನಲಾದ ಲೈಂಗಿಕ ದೌರ್ಜನ್ಯದ ಹಲವು ವಿಡಿಯೋಗಳು ಹಾಗೂ ಅಶ್ಲೀಲ ಫೋಟೋಗಳು ಸಾಮಾಜಿಕ ತಾಲತಾಣದಲ್ಲಿ ವೈರಲ್‌ ಆಗಿದ್ದವು. ಈ ವಿಡಿಯೋಗಳ ಪೈಕಿ ಕೆ.ಆರ್‌.ನಗರ ಮೂಲದ 48 ವರ್ಷದ ಸಂತ್ರಸ್ತೆಯ ಖಾಸಗಿ ವಿಡಿಯೋ ಸಹ ಇತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಹಾಸನದ ಈ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿತ್ತು. ವಿಡಿಯೋ ವೈರಲ್‌ ಬೆನ್ನಲ್ಲೇ ಸಂತ್ರಸ್ತೆ ಮನೆಯಿಂದ ನಾಪತ್ತೆಯಾಗಿದ್ದರು. ಈ ವೇಳೆ ಸಂತ್ರಸ್ತೆ ಪುತ್ರ 2024ರ ಮೇ 2ರಂದು ಕೆ.ಆರ್‌.ನಗರ ಪೊಲೀಸ್‌ ಠಾಣೆಗೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಸಂಬಂಧಿ ಸತೀಶ್‌ ಬಾಬಣ್ಣ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಭೇದಿಸಿದ ಎಸ್‌ಐಟಿ ಪೊಲೀಸರು ಸಂತ್ರಸ್ತೆಯನ್ನು ರಕ್ಷಿಸಿದ್ದರು.

ವಿಚಾರಣೆ ವೇಳೆ ಸಂತ್ರಸ್ತೆ ಸಂಸದ ಪ್ರಜ್ವಲ್‌ ರೇವಣ್ಣ 2021ರ ಕೊರೋನಾ ಸಮಯದಲ್ಲಿ ಹೊಳೆನರಸೀಪುರದ ಗನ್ನಿಕಡದ ತೋಡದ ಮನೆ ಹಾಗೂ ಬೆಂಗಳೂರಿನ ಬಸವನಗುಡಿಯ ಮನೆಯಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಅತ್ಯಾಚಾರದ ಜತೆಗೆ ಬೆದರಿಸಿ ವಿಡಿಯೋ ಸಹ ಚಿತ್ರೀಕರಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಸಿಐಡಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಎಸ್ಐಟಿ ತನಿಖಾಧಿಕಾರಿಗಳು ಬಾಡಿ ವಾರೆಂಟ್‌ ಮೇಲೆ ಆರೋಪಿ ಪ್ರಜ್ವಲ್‌ ರೇವಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ ಸಂತ್ರಸ್ತೆ ಹೇಳಿಕೆ, ಆರೋಪಿ ಹೇಳಿಕೆ, 113 ಸಾಕ್ಷಿಗಳು, ಸಾಂದರ್ಭಿಕ ಸಾಕ್ಷಿಗಳು, ಡಿಜಿಟಲ್‌ ಸಾಕ್ಷಿಗಳು, ಎಫ್‌ಎಸ್ಎಲ್‌ ವರದಿ, ತಾಂತ್ರಿಕ ಸಾಕ್ಷಿಗಳು ಒಳಗೊಂಡಂತೆ ಸುಮಾರು 2 ಸಾವಿರ ಪುಟಗಳ ದೋಷಾರೋಪ ಪಟ್ಟಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ದೇವೇಗೌಡ ಕಣ್ಣೀರು

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಶನಿವಾರ ಮಧ್ಯಾಹ್ನದಿಂದ ಪದ್ಮನಾಭನಗರದ ಮನೆಯಲ್ಲಿ ಟಿ.ವಿ. ವೀಕ್ಷಿಸುತ್ತಾ ಕುಳಿತಿದ್ದರು. ಸಂಜೆ ಸುಮಾರು 4.10ಕ್ಕೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ದುಃಖಿತರಾಗಿ ಕಣ್ಣೀರು ಸುರಿಸಿದರು ಎಂದು ತಿಳಿದು ಬಂದಿದೆ. ಪ್ರಜ್ವಲ್‌ ತಾಯಿ ಭವಾನಿ ರೇವಣ್ಣ ಕೂಡ ಬೆಂಗಳೂರಿನ ಬಸವನಗುಡಿ ಮನೆಯಲ್ಲೇ ಕುಳಿತು ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದರು. ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ಗಳಗಳನೆ ಅತ್ತರು.

ಜನ್ಮದಿನಕ್ಕೆ 3 ದಿನ

ಮುನ್ನ ಜೈಲು ಶಿಕ್ಷೆ

ಪ್ರಜ್ವಲ್‌ ರೇವಣ್ಣ ಅವರ ಹುಟ್ಟುಹಬ್ಬ ಇದೇ ಆ.5ರಂದು ಇದೆ. ಹುಟ್ಟುಹಬ್ಬಕ್ಕೂ ಮೂರು ದಿನ ಮುನ್ನವೇ ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಸನ್ನಡತೆ ಆಧಾರದಲ್ಲಿ

ಬಿಡುಗಡೆ ಅವಕಾಶವಿಲ್ಲ

ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್‌ ರೇವಣ್ಣಗೆ ಸನ್ನಡತೆ ಆಧಾರದಡಿ ಬಿಡುಗಡೆ ಭಾಗ್ಯವಿಲ್ಲ. ಏಕೆಂದರೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸನ್ನಡತೆ ಅನ್ವಯವಾಗುವುದಿಲ್ಲ. ಹೀಗಾಗಿ ಪ್ರಜ್ವಲ್‌ಗೆ ಜೈಲು ಶಿಕ್ಷೆ ಕಾಯಂ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ವಶ