ವಿಶ್ವನಾಥ ಮಲೇಬೆನ್ನೂರು
ಚಿಕ್ಕಮಗಳೂರು : ರಾಜ್ಯದಲ್ಲಿ ‘ಶಾಶ್ವತ ನಿವಾಸಿ ಪ್ರಮಾಣ ಪತ್ರ’ ಪಡೆಯುವುದಕ್ಕೆ ಸಲ್ಲಿಕೆ ಆಗಿರುವ ಅರ್ಜಿಗಳ ಪೈಕಿ ಬರೋಬ್ಬರಿ 62 ಸಾವಿರಕ್ಕೂ ಅಧಿಕ ಅರ್ಜಿ ಇನ್ನೂ ವಿಲೇವಾರಿಯೇ ಆಗಿಲ್ಲ.
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ತೀವ್ರ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಅರ್ಹ ಮತದಾರರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಕಳೆದ ಜೂನ್‌ನಲ್ಲಿ ಪ್ರತಿ ಮನೆ, ಮನೆಗೆ ಶಾಶ್ವತ ನಿವಾಸಿ ಪ್ರಮಾಣ ಪತ್ರ (ಪಿಆರ್‌ಸಿ) ವಿತರಿಸುವುದಾಗಿ ಘೋಷಿಸಿ, ಜುಲೈ 20ರಂದು ಅಧಿಕೃತವಾಗಿ ಪ್ರಮಾಣ ಪತ್ರ ವಿತರಣೆ ಆರಂಭಿಸಿತ್ತು.
ರಾಜ್ಯದಲ್ಲಿ ಈವರೆಗೆ 1,31,031 ಅರ್ಜಿಯಷ್ಟೇ ಸಲ್ಲಿಕೆಯಾಗಿವೆ. ಈ ಪೈಕಿ ಬರೋಬ್ಬರಿ 62,421 ಅರ್ಜಿ ವಿಲೇವಾರಿಯೇ ಆಗಿಲ್ಲ. ವಿಶೇಷ ಎಂದರೆ, ಅರ್ಜಿ ಸಲ್ಲಿಸಿ ಪ್ರಮಾಣ ಪತ್ರ ಪಡೆದುಕೊಂಡವರಿಗಿಂತ ಹೆಚ್ಚಿನ ಸಂಖ್ಯೆ ವಿಲೇವಾರಿ ಆಗದೇ ಅಧಿಕಾರಿಗಳ ಬಳಿಯೇ ಬಾಕಿ ಉಳಿದಿರುವುದು.
ಒಟ್ಟು 68,610 ಅರ್ಜಿಗಳು ಈವರೆಗೆ ವಿಲೇವಾರಿ ಆಗಿವೆ. ಈ ಪೈಕಿ 50,761 ಅರ್ಜಿದಾರರಿಗೆ ಪ್ರಮಾಣ ಪತ್ರ ನೀಡಲಾಗಿದೆ. ಈ ಪೈಕಿ ಶೇ.50ಕ್ಕಿಂತ ಹೆಚ್ಚು ಪಿಆರ್‌ಸಿಗಳನ್ನು (25,988) ಕಲಬುರಗಿ ಜಿಲ್ಲೆಯೊಂದರಲ್ಲೇ ವಿತರಿಸಲಾಗಿದೆ. ಉಳಿದಂತೆ 17,849 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ರಾಜ್ಯದಲ್ಲಿ ಪಿಆರ್‌ಸಿಗೆ ಸಲ್ಲಿಸಿದ ಅರ್ಜಿಗಳ ಪೈಕಿ ಅತಿ ಹೆಚ್ಚು 4,681 ಅರ್ಜಿ ಬೀದರ್‌ನಲ್ಲಿ ತಿರಸ್ಕೃತಗೊಂಡಿವೆ. ಬೀದರ್‌ನಲ್ಲಿ ಒಟ್ಟು 17,670 ಅರ್ಜಿ ಸಲ್ಲಿಕೆಯಾಗಿದ್ದು, 14,254 ಅರ್ಜಿ ವಿಲೇವಾರಿಯಾಗಿವೆ. ಈ ಪೈಕಿ 4,681 ಅರ್ಜಿ ತಿರಸ್ಕಾರವಾಗಿವೆ. 9,573 ಮಂದಿಗೆ ಪಿಆರ್‌ಸಿ ವಿತರಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಪಿಆರ್‌ಸಿಗೆ ಸಂಬಂಧಿಸಿದಂತೆ ಅತಿ ಹೆಚ್ಚಿನ ಸಂಖ್ಯೆಯ ಅರ್ಜಿ ಸಲ್ಲಿಕೆಯಾಗಿವೆ. ಅದೇ ರೀತಿ ಅತಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ವಿಲೇವಾರಿ ಆಗದೇ ಬಾಕಿ ಉಳಿದಿರುವುದು ಸಹ ಬೆಂಗಳೂರು ನಗರದಲ್ಲಿಯೇ. ಈವರೆಗೆ ಬೆಂಗಳೂರಿನಲ್ಲಿ ಪಿಆರ್‌ಸಿಗೆ 35,951 ಅರ್ಜಿ ಸಲ್ಲಿಕೆಯಾಗಿದ್ದು, 33,673 ಅರ್ಜಿಗಳು ಬಾಕಿ ಉಳಿದಿವೆ. 2,278 ಅರ್ಜಿ ಮಾತ್ರ ವಿಲೇವಾರಿ ಆಗಿದ್ದು, ಇದರಲ್ಲಿ ಕೇವಲ 255 ಮಂದಿಗೆ ಪಿಆರ್‌ಸಿ ಸಿಕ್ಕಿದೆ. ಉಳಿದಂತೆ 2,023 ಮಂದಿಯ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ.
ಭಾರತ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್‌ನಲ್ಲಿ ನೋಟಿಸ್ ಪಡೆದವರ ಅನುಕೂಲಕ್ಕಾಗಿ ಪಿಆರ್‌ಸಿ ವಿತರಣೆಗೆ ಸರ್ಕಾರ ಮುಂದಾಗಿತ್ತು. ಪಿಆರ್‌ಸಿ ವಿತರಣೆ ಬಗ್ಗೆ ವಿರೋಧ ಪಕ್ಷಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದವು. ವಿರೋಧದ ನಡುವೆಯೂ ಪಿಆರ್‌ಸಿ ವಿತರಣೆ ಆರಂಭಗೊಂಡಿತ್ತು. ಆದರೆ, ಪಿಆರ್‌ಸಿ ಪತ್ರ ಪಡೆಯುವುದಕ್ಕೆ ಸಾಕಷ್ಟು ದಾಖಲೆ ಸಲ್ಲಿಕೆ ಮಾಡಬೇಕಾಗಿದೆ. ಅದಕ್ಕಿಂತ ಸುಲಭ ಮತ್ತು ಸರಳ ದಾಖಲೆಗಳನ್ನು ಸಲ್ಲಿಸಿ ಚುನಾವಣಾ ಆಯೋಗ ಸೂಚಿಸಿದ ಇತರೆ ದಾಖಲೆಗಳನ್ನು ಪಡೆಯಬಹುದು. ಹೀಗಾಗಿ, ರಾಜ್ಯದಲ್ಲಿ ಹೆಚ್ಚಿನ ಜನರು ಪಿಆರ್‌ಸಿ ಪಡೆಯಲು ಮುಂದಾಗಿಲ್ಲ. ಹಾಗಾಗಿ, ಈ ಬಗ್ಗೆ ಹೆಚ್ಚಿನ ಜನರು ಆಸಕ್ತಿ ವಹಿಸುತ್ತಿಲ್ಲ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಚಾಮರಾಜನಗರದಲ್ಲಿ ಇಬ್ಬರಿಗಷ್ಟೇ ಪಿಆರ್‌ಸಿ:
ಚಾಮರಾಜನಗರ ಜಿಲ್ಲೆಯಲ್ಲಿ ಈವರೆಗೆ ಕೇವಲ ಇಬ್ಬರಿಗೆ ಮಾತ್ರ ಪಿಆರ್‌ಸಿ ಪ್ರಮಾಣ ಪತ್ರ ಸಿಕ್ಕಿದೆ. ಅದೇ ರೀತಿ ಮೈಸೂರಲ್ಲಿ 7, ಧಾರವಾಡದಲ್ಲಿ 14, ಗದಗ 18, ಬೆಂ,ಗ್ರಾಮಾಂತರ 20, ಬೆಂ.ದಕ್ಷಿಣ 26, ಚಿಕ್ಕಬಳ್ಳಾಪುರ 48, ಮಂಡ್ಯ 71, ಚಿತ್ರದುರ್ಗದಲ್ಲಿ 111 ಮಂದಿಗೆ ಸಿಕ್ಕಿದೆ.
ಕೋಲಾರ 151 ಬಳ್ಳಾರಿ 174, ಹಾಸನ 221, ಉಡುಪಿ 227, ಬೆಂಗಳೂರು ನಗರ 255, ಹಾವೇರಿ 304, ವಿಜಯನಗರ 307, ತುಮಕೂರು 406, ದಕ್ಷಿಣ ಕನ್ನಡ 448, ಕೊಡಗು 497, ಬಾಗಲಕೋಟೆ 622, ವಿಜಯಪುರ 832, ಕೊಪ್ಪಳ 910, ಚಿಕ್ಕಮಗಳೂರು 917, ಉತ್ತರ ಕನ್ನಡ 930, ದಾವಣಗೆರೆ 1,048, ಬೆಳಗಾವಿ 1,228, ಯಾದಗಿರಿ 1,474, ರಾಯಚೂರು 1,740, ಶಿವಮೊಗ್ಗ 2,192, ಬೀದರ್‌ನಲ್ಲಿ 9,574 ಪಿಆರ್‌ಸಿ ವಿತರಣೆ ಮಾಡಿದರೆ, ಕಲಬುರಗಿಯಲ್ಲಿ ಅತಿ ಹೆಚ್ಚು 25,988 ಪಿಆರ್‌ಸಿ ವಿತರಿಸಲಾಗಿದೆ.