ಪೂಜೆಗೆ ಬಂದು ದೇವರ ಮೇಲಿನ ಚಿನ್ನದ ನೆಕ್ಲೆಸ್‌ ಕದ್ದ ಅರ್ಚಕ!

KannadaprabhaNewsNetwork |  
Published : Sep 28, 2025, 02:00 AM IST

ಸಾರಾಂಶ

ವರಮಹಾಲಕ್ಷ್ಮೀ ಹಾಗೂ ಸತ್ಯನಾರಾಯಣ ಪೂಜೆ ವೇಳೆ ದೇವರ ಮೇಲಿದ್ದ ಚಿನ್ನದ ನೆಕ್ಲೆಸ್‌ ಎಗರಿಸಿ ಪರಾರಿಯಾಗಿದ್ದ ಅರ್ಚಕನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವರಮಹಾಲಕ್ಷ್ಮೀ ಹಾಗೂ ಸತ್ಯನಾರಾಯಣ ಪೂಜೆ ವೇಳೆ ದೇವರ ಮೇಲಿದ್ದ ಚಿನ್ನದ ನೆಕ್ಲೆಸ್‌ ಎಗರಿಸಿ ಪರಾರಿಯಾಗಿದ್ದ ಅರ್ಚಕನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಗ್ರಹಾರ ದಾಸರಹಳ್ಳಿ ನಿವಾಸಿ ರಮೇಶ್ ಶಾಸ್ತ್ರಿ (45) ಬಂಧಿತ ಅರ್ಚಕ. ಆರೋಪಿಯಿಂದ 44 ಗ್ರಾಂ. ತೂಕದ ಚಿನ್ನದ ನೆಕ್ಲೆಸ್ ಜಪ್ತಿ ಮಾಡಲಾಗಿದೆ. ಅಶೋಕ್ ಚಂದರಗಿ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಕರಣ ವಿವರ:

ಅಶೋಕ್‌ ಚಂದರಗಿ ಅವರು ಕಳೆದ ತಿಂಗಳು ಮನೆಯಲ್ಲಿ ವರಮಹಾಲಕ್ಷ್ಮೀ ಹಾಗೂ ಸತ್ಯನಾರಾಯಣ ಪೂಜೆ ಮಾಡಿಸಲು ಅಗ್ರಹಾರ ದಾಸರಹಳ್ಳಿಯಲ್ಲಿ ದೇವಸ್ಥಾನವೊಂದರಲ್ಲಿ ಅರ್ಚಕನಾಗಿರುವ ರಮೇಶ್ ಶಾಸ್ತ್ರಿ ಮನೆಗೆ ಬಂದು ಕೇಳಿಕೊಂಡಿದ್ದರು. ಮನೆಗೆ ಬಂದ ರಮೇಶ್ ಶಾಸ್ತ್ರಿ ಎರಡೂ ಪೂಜೆ ನೆರವೇರಿಸಿದ್ದರು. ಪೂಜೆ ವೇಳೆ ಮನೆಯ ಸದಸ್ಯರ ಗಮನ ಬೇರೆಡೆ ಸೆಳೆದು ದೇವರ ಮೇಲಿದ್ದ ನೆಕ್ಲೆಸ್‌ ಎಗರಿಸಿದ್ದರು.

ಎರಡು ದಿನದ ಬಳಿಕ ದೇವರ ಫೋಟೋ ತೆಗೆಯುವಾಗ ನೆಕ್ಲೆಸ್‌ ಇಲ್ಲದಿರುವುದು ಕಂಡು ಬಂದಿದೆ. ಬಳಿಕ ಅರ್ಚಕ ರಮೇಶ್‌ ಶಾಸ್ತ್ರಿಗೆ ಕರೆ ಮಾಡಿ ವಿಚಾರಿಸಿದಾಗ ಆ ಬಗ್ಗೆ ತನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಬಳಿಕ ಅಶೋಕ್‌ ಅವರು ರಮೇಶ್‌ ಶಾಸ್ತ್ರಿ ವಿರುದ್ಧ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ನೆಕ್ಲೆಸ್‌ ಕಳವು ಮಾಡಿದ್ದು ತಾನೇ ಎಂದು ರಮೇಶ್‌ ಶಾಸ್ತ್ರಿ ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೈನಾನ್ಸ್‌ನಲ್ಲಿ ಅಡಮಾನ!

ಆರೋಪಿ ರಮೇಶ್‌ ಶಾಸ್ತ್ರಿ ಅಶೋಕ್‌ ಮನೆಯಲ್ಲಿ ಕದ್ದ ನೆಕ್ಲೆಸ್‌ ಅನ್ನು ಖಾಸಗಿ ಫೈನಾನ್ಸ್‌ವೊಂದರಲ್ಲಿ 2.50 ಲಕ್ಷ ರು.ಗೆ ಅಡ ಇರಿಸಿದ್ದರು. ಪೊಲೀಸರ ತನಿಖೆ ವೇಳೆ ಆರೋಪಿಯ ಬ್ಯಾಂಕ್‌ ಖಾತೆಯಲ್ಲಿ 1.50 ಲಕ್ಷ ರು. ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ಫ್ರೀಜ್‌ ಮಾಡಲಾಗಿತ್ತು. ವಿಚಾರಣೆ ವೇಳೆ ಆರೋಪಿ ಅನಾರೋಗ್ಯದ ಕಾರಣಕ್ಕೆ ಚಿಕಿತ್ಸೆ ಪಡೆಯಲು ನೆಕ್ಲೆಸ್‌ ಕಳವು ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.

PREV

Recommended Stories

ಚಾರ್ಟರ್ಡ್‌ ಅಕೌಂಟೆಂಟ್‌ ಮನೆ ಕನ್ನ ಹಾಕಿದ ಕಿಡಿಗೇಡಿ ಬಂಧನ
ಏರಿಯಾದಲ್ಲಿ ಹವಾ ಸೃಷ್ಟಿಗೆ 25 ವಾಹನ ಹಾನಿಗೊಳಿಸಿ ಪುಂಡಾಟ: 6 ಮಂದಿ ಬಂಧನ