ಬೆಂಗಳೂರು : ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಉದ್ದೇಶಿತ ಜೋಡಿ ಸುರಂಗ ಮಾರ್ಗ ಯೋಜನೆಯ ಟೆಂಡರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಇಂದಿರಾನಗರ 82 ವರ್ಷದ ಆದಿಕೇಶವುಲು ರವೀಂದ್ರ, ಜೆಪಿ ನಗರದ ವಿನೋದ್ ವ್ಯಾಸುಲು ಮತ್ತು ಬಸವನಗುಡಿಯ ಎನ್.ಎಸ್.ಮುಕುಂದ್ ಅವರು ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ರಾಜ್ಯ ಪರಿಸರ ಅಧ್ಯಯನ ಮೌಲ್ಯಮಾಪನ ಪ್ರಾಧಿಕಾರ, ನಗರ ಭೂ ಸಾರಿಗೆ ನಿರ್ದೇಶನಾಲಯ, ಬೆಂಗಳೂರು ಸ್ಮಾರ್ಟ್ ಮೂಲಸೌಕರ್ಯ ನಿಯಮಿತ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜ್ಯ ಸರ್ಕಾರ ಯಾವುದೇ ಸಮಯದಲ್ಲಿ ಬೇಕಾದರೂ ಟೆಂಡರ್‌ನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಹಾಗಾಗಿ ಮಧ್ಯಂತರ ತಡೆ ನೀಡಬೇಕೆಂದು ನ್ಯಾಯಪೀಠವನ್ನು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಯೋಜನೆ ಅತ್ಯಂತ ದೀರ್ಘಕಾಲಿನದ್ದಾಗಿದೆ. ಯೋಜನೆ ಪೂರ್ಣಗೊಳ್ಳಲು ಹಲವು ವರ್ಷಗಳ ಕಾಲ ಹಿಡಿಯುತ್ತದೆ. ಯೋಜನೆಯ ಕುರಿತು ಯಾವುದೇ ಪರಿಸರ ಪರಿಣಾಮ ಅಧ್ಯಯನ ನಡೆಸಿಲ್ಲವೆಂದು ನೀವೇ ಹೇಳುತ್ತಿದ್ದೀರಿ. ಹಾಗಿದ್ದರೆ ಯೋಜನೆಗೆ ಯಾವುದಾದರೂ ಅಧ್ಯಯನ ನಡೆಸಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಲಿ. ಅದನ್ನು ಪರಿಶೀಲಿಸೋಣ ಎಂದು ತಿಳಿಸಿತು.
ಅರ್ಜಿದಾರರ ಆಕ್ಷೇಪವೇನು?:
ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸಲು ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ಸುಮಾರು 19 ಸಾವಿರ ಕೋಟಿ ಹಣದ ವೆಚ್ಚದಲ್ಲಿ ಸುರಂಗ ಮಾರ್ಗದ ಯೋಜನೆಗೆ 2025ರ ಜು.14ರಂದು ಕರೆದಿರುವ ಟೆಂಡರ್ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಸುರಂಗ ರಸ್ತೆ ನಿರ್ಮಾಣಕ್ಕಾಗಿ ಪರಿಸರ ಪರಿಣಾಮ ಮೌಲ್ಯಮಾಪನ ನಡೆಸಿಲ್ಲ. ಸಂಚಾರ ಯೋಜನೆ ಸಿದ್ಧಪಡಿಸಿಲ್ಲ. ಸ್ವಾಧೀನದ ನಿರ್ದಿಷ್ಟ ವೆಚ್ಚದ ಪಟ್ಟಿ ಸಿದ್ಧಪಡಿಸಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಯೋಜನೆಯ ಪ್ರಸ್ತುತ ಉಪಯುಕ್ತತೆ ಮತ್ತು ಒಳಚರಂಡಿ ನಕ್ಷೆಗಳನ್ನು ಒಳಗೊಂಡಿರುವ ವರದಿ ಸಿದ್ಧಪಡಿಸದೆ, ಅಸ್ತಿತ್ವದಲ್ಲಿರುವ ಎಲ್ಲ ನೀರು, ಮಳೆನೀರು, ಒಳಚರಂಡಿ ಪೈಪ್‌ಗಳು/ಲೈನ್‌ಗಳು, ಅಸ್ತಿತ್ವದಲ್ಲಿರುವ ಯಾವುದಾದರೂ ಪೈಪ್‌ಗಳು/ಲೇಔಟ್‌ಗಳು ಯೋಜನೆಗೆ ಪರಿಣಾಮ ಬೀರುತ್ತಿವೆಯೇ ಎಂಬುದನ್ನು ಸೂಚಿಸುವ ತಿರುವು ಯೋಜನೆ ಸಿದ್ಧಪಡಿಸದೆ ಜೋಡಿ ಸುರಂಗ ರಸ್ತೆ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಆದ್ದರಿಂದ ಯೋಜನೆಗೆ ಕರೆದಿರುವ ಟೆಂಡರ್ ಅಧಿಸೂಚನೆ ರದ್ದುಪಡಿಸಬೇಕು. ಯೋಜನೆ ಕುರಿತು ಯಾವುದೇ ಮುಂದಿನ ಕ್ರಮ ತೆಗೆದುಕೊಳ್ಳದಂತೆ ಮತ್ತು ಟೆಂಡರ್ ತಡೆಹಿಡಿಯಲು ಆದೇಶ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.