ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಟೌನ್ ಪೊಲೀಸರು ಬಂಧಿಸಿ 6 ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.ಮೈಸೂರಿನ ಶಾಂತಿನಗರ ನಿವಾಸಿಗಳಾದ ಮೊಹಮ್ಮದ್ ಯಾಸೀನ್ ಮತ್ತು ಶಾಹೀಲ್ ಖಾನ್ ಬಂಧಿತ ಆರೋಪಿಗಳು. ಕಳೆದ ಫೆ.3ರಂದು ಕಮಲ್ಯಾ ವಿಹಾರ್ ಬಡಾವಣೆಯ ಶ್ರೀನಿವಾಸ ಮತ್ತು ಗಂಜಾಂ ಗ್ರಾಮದ ಅಜೀಜ್ ಖಾನ್ ಅವರ ವಾಹನಗಳು ಕಳ್ಳತನವಾಗಿರುವ ಬಗ್ಗೆ ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡಿದ್ದರು.
ಎಸ್ಪಿ ಡಾ.ಶೋಭಾರಾಣಿ, ಹೆಚ್ಚುವರಿ ಎಸ್ಪಿಗಳಾದ ಸಿ.ವಿ.ತಿಮ್ಮಯ್ಯ ಮತ್ತು ಗಂಗಾಧರಸ್ವಾಮಿ ಹಾಗೂ ಡಿವೈಎಸ್ಪಿ ಯು.ಡಿ.ಕೃಷ್ಣಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಟೌನ್ ಇನ್ಸ್‌ಪೆಕ್ಟರ್ ಕುಮಾರ ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ಜನಾಬಾಯಿ ಕಡಪಟ್ಟಿ, ಗಂಗಾಧರ ಎಸ್.ಬಿ. ಮತ್ತು ಸಿಬ್ಬಂದಿಯೊನ್ನೊಳಗೊಂಡ ತಂಡವು ಫೆ.21ರಂದು ಆರೋಪಿಗಳನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಆರೋಪಿಗಳು ಕೇವಲ ಶೋಕಿ ಮಾಡಲು, ವೀಲಿಂಗ್ ಉದ್ದೇಶದಿಂದ ಹಾಗೂ ಹಣ ಸಂಪಾದನೆಗಾಗಿ ಪಟ್ಟಣದ ಕಮಲ್ಯಾ ವಿಹಾರ ಮತ್ತು ಗಂಜಾಂನಲ್ಲಿ ತಲಾ 2, ಮೈಸೂರಿನ ಮೆಲ್ಲಹಳ್ಳಿಯಲ್ಲಿ 1 ಹಾಗೂ ಹುಣಸೂರಿನಲ್ಲಿ 1 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.ಆರೋಪಿಗಳಿಂದ ಎಲ್ಲಾ ವಾಹನಗಳನ್ನು ಅಮಾನತ್ತುಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವನ್ನು ಜಿಲ್ಲಾ ಎಸ್ಪಿ ಪ್ರಶಂಸಿಸಿದ್ದಾರೆ.
ಚಿರತೆ ದಾಳಿಗೆ ಕರು ಬಲಿ
ಮದ್ದೂರು: ಚಿರತೆ ದಾಳಿಗೆ ಕರು ಬಲಿಯಾಗಿರುವ ಘಟನೆ ತಾಲೂಕಿನ ರಾಜೇಗೌಡನ ದೊಡ್ಡಿ ಗ್ರಾಮದಲ್ಲಿ ಭಾನುವಾರ ಮುಂಜಾನೆ ಜರುಗಿದೆ.ಗ್ರಾಮದ ಶಿವಲಿಂಗರ ಮನೆ ಸಮೀಪ ಇರುವ ದನದ ಕೊಟ್ಟಿಗಳ ಮೇಲೆ ಬೆಳಗ್ಗೆ 4.30 ಸುಮಾರಿಗೆ ದಾಳಿ ನಡೆಸಿರುವ ಚಿರತೆ ಸೀಮೆ ಹಸು ಕರುವನ್ನು ಕೊಟ್ಟಿಗೆಯಿಂದ ಸುಮಾರು ಒಂದು ಕಿಲೋ ಮೀಟರ್ ನಷ್ಟು ದೂರ ಎಳೆದೊಯ್ದು ತಿಂದು ಹಾಕಿ ಪರಾರಿಯಾಗಿದೆ. ಚಿರತೆ ದಾಳಿ ವೇಳೆ ಕೊಟ್ಟಿಗೆಯಲ್ಲಿದ್ದ ನಾಲ್ಕು ಹಸುಗಳು ಹಾಗೂ ಎರಡು ಕರುಗಳು ಪ್ರಾಣಪಾಯ ದಿಂದ ಪಾರಾಗಿವೆ.
ಗ್ರಾಮದ ಸಮೀಪದ ಕೋಳಿ ರಾಯನಗುಡ್ಡದಲ್ಲಿ ಬೀಡುಬಿಟ್ಟಿರುವ ಚಿರತೆಗಳ ಹಿಂಡು ಆಗಾಗ ರಾಜೇಗೌಡನದೊಡ್ಡಿ ಮತ್ತು ಆಸುಪಾಸಿನ ಗ್ರಾಮಗಳ ದನದ ಕೊಟ್ಟಿಗೆಗಳು ಮತ್ತು ಬೀದಿ ನಾಯಿಗಳ ಮೇಲೆ ರಾತ್ರಿ ವೇಳೆ ದಾಳಿ ನಡೆಸಿ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಿರುವ ಘಟನೆಗಳು ಸರ್ವೇಸಾಮಾನ್ಯವಾಗಿದೆ. ಇದರಿಂದ ಗ್ರಾಮ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅಗ್ರಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯಾಧಿಕಾರಿ ಗವಿಯಪ್ಪ ಹಾಗೂ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ಗ್ರಾಮದಲ್ಲಿ ಬೋನ್ ಇರಿಸಿದ್ದಾರೆ. ಗ್ರಾಮಸ್ಥರು ರಾತ್ರಿ ವೇಳೆ ಮುಂಜಾನೆ ಒಂಟ್ಟಿಯಾಗಿ ಓಡಾಡಬಾರದು ತಮ್ಮ ಜಾನುವಾರಗಳ ಬಗ್ಗೆ ಹೆಚ್ಚಿನ ಜಾಗೃತೆ ವಹಿಸುವಂತೆ ಮನವಿ ಮಾಡಿದ್ದಾರೆ.