ಸಂತಾನ ಪಡೆಯಲು ಕೈದಿಗೆ ಪೆರೋಲ್‌ ಮಂಜೂರು

KannadaprabhaNewsNetwork |  
Published : Jun 04, 2024, 12:30 AM ISTUpdated : Jun 04, 2024, 06:04 AM IST
Karnataka High Court

ಸಾರಾಂಶ

ಜೈಲು ಶಿಕ್ಷೆ ಅನುಭವಿಸುತ್ತಿರುವ ಸಮಯದಲ್ಲೇ ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗಲು ಸಜಾಬಂಧಿಗೆ ಅವಕಾಶ ಮಾಡಿಕೊಟ್ಟಿದ್ದ ಹೈಕೋರ್ಟ್‌, ಇದೀಗ ಸಂತಾನ ಭಾಗ್ಯ ಪಡೆಯಲು ಪೆರೋಲ್‌ ಮಂಜೂರು ಮಾಡಿದೆ.

 ಬೆಂಗಳೂರು :  ಜೈಲು ಶಿಕ್ಷೆ ಅನುಭವಿಸುತ್ತಿರುವ ಸಮಯದಲ್ಲೇ ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗಲು ಸಜಾಬಂಧಿಗೆ ಅವಕಾಶ ಮಾಡಿಕೊಟ್ಟಿದ್ದ ಹೈಕೋರ್ಟ್‌, ಇದೀಗ ಸಂತಾನ ಭಾಗ್ಯ ಪಡೆಯಲು ಪೆರೋಲ್‌ ಮಂಜೂರು ಮಾಡಿದೆ. ಪತ್ನಿಯೊಂದಿಗೆ ಸಾಂಸಾರಿಕ ಜೀವನ ನಡೆಸಿ ಸಂತಾನ ಪಡೆಯಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಪ್ರಕರಣ ಸಂಬಂಧ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೋಲಾರದ ಆನಂದ್‌ ಎಂಬಾತನನ್ನು ಇದೇ ಜೂ.5ರಿಂದ 30 ದಿನಗಳ ಕಾಲ ಪೆರೋಲ್‌ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧೀಕ್ಷಕರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಸಂತಾನ ಪಡೆಯಲು ಸಜಾಬಂಧಿಯಾದ ತನ್ನ ಪತಿ ಆನಂದ್‌ನನ್ನು 90 ದಿನಗಳ ಕಾಲ ಪೆರೋಲ್‌ ಮೇಲೆ ಬಿಡುಗಡೆ ಮಾಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸುವಂತೆ ಕೋರಿ ಆತನ ಪತ್ನಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್‌ ಅವರ ಪೀಠ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರು ಅರ್ಜಿದಾರೆಯ ಪತಿಯನ್ನು ಜೂ.5ರಿಂದ 30 ದಿನಗಳ ಕಾಲ ಪೆರೋಲ್‌ ಮೇಲೆ ಜೈಲಿನಿಂದ ಬಿಡುಗಡೆ ಮಾಡಬೇಕು. ಈ ಅವಧಿಯಲ್ಲಿ ಆನಂದ್‌ ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್‌ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. 30 ದಿನಗಳ ನಂತರ ಪೆರೋಲ್‌ ಷರತ್ತುಗಳನ್ನು ಪಾಲಿಸಿದ್ದಲ್ಲಿ, ಆದರ ಆಧಾರದ ಮೇಲೆ ಮತ್ತೆ 60 ದಿನಗಳ ಕಾಲ ಪೆರೋಲ್‌ ವಿಸ್ತರಣೆಗೆ ಆನಂದ್‌ ಹಾಗೂ ಅರ್ಜಿದಾರೆ ಕೋರಬಹುದು ಎಂದು ನಿರ್ದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರೆಯ ಪರ ವಕೀಲ ಡಿ.ಮೋಹನ್‌ ಕುಮಾರ್‌ ವಾದ ಮಂಡಿಸಿ, ಅರ್ಜಿದಾರೆಯನ್ನು ಮದುವೆಯಾಗಲು ಆನಂದ್‌ನನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡಲು ಈ ಹಿಂದೆ ಹೈಕೋರ್ಟ್‌ ಆದೇಶಿಸಿತ್ತು. ಸದ್ಯ ದಂಪತಿ ಸಂತಾನ ಪಡೆಯಲು ಇಚ್ಛಿಸಿದ್ದಾರೆ. ಅದಕ್ಕಾಗಿ ಆನಂದ್‌ಗೆ 90 ದಿನ ಪೆರೊಲ್‌ ಮೇಲೆ ಮಂಜೂರು ಮಾಡಬೇಕು. ಈ ಕುರಿತ ಅರ್ಜಿದಾರೆ ಸಲ್ಲಿಸಿರುವ ಮನವಿ ಪತ್ರವನ್ನು ಜೈಲು ಅಧಿಕಾರಿಗಳು ಪರಿಗಣಿಸಿಲ್ಲ ಎಂದು ಕೋರ್ಟ್‌ ಗಮನಕ್ಕೆ ತಂದರು.

ಇದಕ್ಕೆ ಸರ್ಕಾರಿ ವಕೀಲರು, ಅರ್ಜಿದಾರೆಯ ಮನವಿ ಪುರಸ್ಕರಿಸಬಹುದಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಪ್ರಕರಣದ ವಿವರ:

ಕೊಲೆ ಪ್ರಕರಣವೊಂದರಲ್ಲಿ ಕೋಲಾರದ ಆನಂದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ 2019ರಲ್ಲಿ ಕೋಲಾರದ ಎರಡನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಆದೇಶಿಸಿತ್ತು. ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿ 2023ರಲ್ಲಿ ಹೈಕೋರ್ಟ್‌ ತೀರ್ಪು ನೀಡಿತ್ತು. ಜೈಲಿಗೆ ಹೋಗುವ ಮುನ್ನವೇ ಆನಂದ್‌ ಮತ್ತು ಅರ್ಜಿದಾರೆ ಪರಸ್ಪರ ಪ್ರೀತಿಸುತ್ತಿದ್ದರು. ಜೈಲಿಗೆ ಹೋದ ನಂತರ ಅವರ ಪ್ರೀತಿ ಮುಂದುವರಿದಿತ್ತು. ಮದುವೆಯಾಗಲು ನಿಶ್ಚಯಿಸಿದ ನಂತರ ಅರ್ಜಿದಾರೆ ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ್ದ ಹೈಕೋರ್ಟ್‌, ಮದುವೆಯಾಗಲು ವೈವಾಹಿಕ ಜೀವನ ನಡೆಸಲು ಆನಂದ್‌ನನ್ನು 2023ರ ಮಾ.31ರಿಂದ 80 ದಿನ ಕಾಲ ಪೆರೋಲ್‌ ಮೇಲೆ ಬಿಡುಗಡೆಗೊಳಿಸಲು ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕರಿಗೆ ಹೈಕೋರ್ಟ್‌ ಆದೇಶಿಸಿತ್ತು. ಇದೀಗ ಸಂತಾನ ಪಡೆಯಲು ಆನಂದ್‌ಗೆ 90 ದಿನ ಪೆರೋಲ್‌ ನೀಡಲು ನಿರ್ದೇಶಿಸಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರೌಡಿ ಹತ್ಯೆ: ಯಾವುದೇ ಕ್ಷಣ ಶಾಸಕ ಬೈರತಿ ಸೆರೆ
ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು